ರೈತರು ಮತ್ತು ಹರಿಯಾಣ ಭದ್ರತಾ ಸಿಬ್ಬಂದಿ ನಡುವಿನ ಘರ್ಷಣೆಯಲ್ಲಿ ಸಾವನ್ನಪ್ಪಿದ ರೈತ ಶುಭಕರನ್ ಸಿಂಗ್ ಅವರ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಿಸಿದೆ.
ಫೆಬ್ರವರಿ 21ರಂದು ಪಂಜಾಬ್-ಹರಿಯಾಣ ಗಡಿ ಪ್ರದೇಶ ಖನೌರಿಯಲ್ಲಿ ರೈತರ ಮೇಲೆ ಪೊಲೀಸರು ಟಿಯರ್ ಗ್ಯಾಸ್ ಮತ್ತು ರಬ್ಬರ್ ಗುಂಡಿನ ದಾಳಿ ನಡೆಸಿದ್ದರು. ರಬ್ಬರ್ ಗುಂಡಿನ ದಾಳಿಯಲ್ಲಿ ರೈತ ಶುಭಕರನ್ ಸಿಂಗ್ ಸಾವನ್ನಪ್ಪಿದ್ದರು.
ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪಂಜಾಬ್-ಹರಿಯಾಣ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಮತ್ತು ನ್ಯಾಯಮೂರ್ತಿ ಲಪಿತಾ ಬ್ಯಾನರ್ಜಿ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸುತ್ತಿದೆ. ಈ ವೇಳೆ, ಶುಭಕರನ್ ಸಿಂಗ್ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ನ್ಯಾಯಾಲಯ ಆದೇಶಿಸಿದೆ.
“ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಪಂಜಾಬ್ ಮತ್ತು ಹರಿಯಾಣದ ಇಬ್ಬರು ಎಡಿಜಿಪಿ ಶ್ರೇಣಿಯ ಅಧಿಕಾರಿಗಳ ತಂಡವು ತನಿಖೆ ನಡೆಸಬೆಕು” ಎಂದು ಪೀಠವು ಹೇಳಿದೆ.
ರೈತನ ಸಾವಿನ ಘಟನೆ ಬಗ್ಗೆ ಪಂಜಾಬ್ ಸರ್ಕಾರ ಈಗಾಗಲೇ ಕೊಲೆ ಪ್ರಕರಣವನ್ನು ಶೂನ್ಯ ಎಫ್‌ಐಆರ್‌ನಲ್ಲಿ ದಾಖಲಿಸಿದೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಮತ್ತು ಕೃಷಿ ಸಾಲ ಮನ್ನಾ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಫೆಬ್ರವರಿ 13ರಿಂದ ‘ದೆಹಲಿ ಚಲೋ’ ನಡೆಸುತ್ತಿವೆ. ಅದರೆ, ರೈತರು ದೆಹಲಿಗೆ ಬರದಂತೆ ತಡೆಯಲು ಹರಿಯಾಣ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳು ಭಾರೀ ಪ್ರಯತ್ನ ನಡೆಸುತ್ತಿವೆ.
ರೈತ ಶುಭಕರನ್ ಸಾವಿನಿಂದಾಗಿ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಸ್ಥಗಿತಗೊಂಡಿದ್ದ ರೈತ ಹೋರಾಟ ಮತ್ತೆ ಆಂರಭವಾಗಿದೆ. ಪ್ರತಿಭಟನಾನಿರತ ರೈತರು ದೆಹಲಿಗೆ ಬುಧವಾರ ಪಾದಯಾತ್ರೆ ಆರಂಭಿಸಿದ್ದಾರೆ.