ಉಪವಾಸನಿರತ ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಅವರೊಂದಿಗೆ 111 ರೈತರು ಹರಿಯಾಣದ ಖಾನೌರಿ ಗಡಿಯಲ್ಲಿ ಆಮರಣಾಂತ ಉಪವಾಸ ಆರಂಭಿಸಿದ್ದಾರೆ. ಈ ಬೆನ್ನಲ್ಲೇ, ಜನವರಿ 21ರಂದು ಪಂಜಾಬ್-ಹರಿಯಾಣ ನಡುವಿನ ಶಂಭು ಗಡಿಯಿಂದ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯನ್ನು ಪುನರಾರಂಭಿಸುವುದಾಗಿ ರೈತ ಸಂಘಟನೆಗಳು ಘೋಷಿಸಿವೆ.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಕಾನೂನುಬದ್ದವಾಗಿ ಜಾರಿಗೆ ತರಬೇಕೆಂದು ಆಗ್ರಹಿಸಿ ರೈತರು ಶಂಭು ಮತ್ತು ಖನೌರಿ ಗಡಿಗಳಲ್ಲಿ ಹಲವರು ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟಕ್ಕೆ ಸ್ಪಂದಿಸದ ಕೇಂದ್ರ ಸರ್ಕಾರದ ವಿರುದ್ಧ ದಲ್ಲೇವಾಲ್ ಅವರು 52 ದಿನಗಳಿಂದ ಆಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಇದೀಗ, ಕೇಂದ್ರವು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಒತ್ತಡ ಹೇರಲು ದೆಹಲಿ ಚಲೋ ಪ್ರತಿಭಟನೆಯನ್ನು ಪುನರಾರಂಭಿಸಲು ರೈತರು ಮುಂದಾಗಿದ್ದಾರೆ.
“ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ)ಸಂಘಟನೆಗಳ ನೇತೃತ್ವದಲ್ಲಿ ಜನವರಿ 21 ರಂದು ಶಂಭು ಗಡಿಯಿಂದ ದೆಹಲಿಗೆ ಪಾದಯಾತ್ರೆಯನ್ನು ಪುನರಾರಂಭಿಸುತ್ತೇವೆ. ಸರ್ಕಾರಕ್ಕೆ ರೈತರೊಂದಿಗೆ ಮಾತುಕತೆ ನಡೆಸಲು ಇಷ್ಟವಿಲ್ಲ ಎಂಬುದು ಕಾಣಿಸುತ್ತಿದೆ. ಆದ್ದರಿಂದ, ನಾವು ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದೇವೆ” ಎಂದು ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.
ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದಲ್ಲೇವಾಲ್ ಅವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ರೈತ ಹೋರಾಟಗಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ದೀರ್ಘಕಾಲದ ಉಪವಾಸವು ‘ಬಹು ಅಂಗಾಂಗ ವೈಫಲ್ಯ’ಕ್ಕೆ ಕಾರಣವಾಗಬಹುದು. ಸರ್ಕಾರ ದಲ್ಲೇವಾಲ್ ಹೋರಾಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.