ಪ್ರತಿಭಟನಾನಿರತ ರೈತರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಬುಧವಾರ ದೆಹಲಿಯತ್ತ ಪಾದಯಾತ್ರೆ ಆರಂಭಿಸುತ್ತಿದ್ದಾರೆ. ರೈತರು ದೆಹಲಿಗೆ ಪಾದಯಾತ್ರೆ ಹೊರಡುವುದಾಗಿ ಘೋಷಿಸುತ್ತಿದ್ದಂತೆ, ಪಂಜಾಬ್-ಹರಿಯಾಣ ಗಡಿಯಲ್ಲಿ ಹರಿಯಾಣ ಪೊಲೀಸರು ರೈತರನ್ನು ತಡೆಯಲು ಮತ್ತಷ್ಟು ಭದ್ರತೆ ಹೆಚ್ಚಿಸುತ್ತಿದ್ದಾರೆ.
ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಕಿಸಾನ್ ಮಜ್ದೂರ್ ಮೋರ್ಚಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಇಂದು (ಮಾರ್ಚ್ 6) ದೆಹಲಿಗೆ ಪಾದಯಾತ್ರೆ ನಡೆಸುವುದಾಗಿ ಭಾನುವಾರ ಘೋಷಿಸಿದ್ದವು. ದೇಶದ ರೈತರು ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದವು. ಅಲ್ಲದೆ, ಮುಂದಿನ ವಾರ, ದೇಶಾದ್ಯಂತ ನಾಲ್ಕು ಗಂಟೆಗಳ ‘ರೈಲ್ ರೋಖೋ’ ನಡೆಸಲು ಕೂಡ ಕರೆ ನೀಡಿವೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಕಾನೂನಾತ್ಮಕ ಗ್ಯಾರಂಟಿ ನೀಡಬೇಕು, ರೈತರ ಸಾಲ ಮನ್ನಾ ಮಾಡಬೇಕು ಎಂಬ ಹಕ್ಕೊತ್ತಾಯ ಸೇರಿದಂತೆ ಹಲವಾರು ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರವರಿ 13ರಂದು ಸಂಘಟನೆಗಳು ‘ದೆಹಲಿ ಚಲೋ’ಗೆ ಕರೆಕೊಟ್ಟಿದ್ದವು. ಆದರೆ, ಅವರನ್ನು ಹರಿಯಾಣ ಪೊಲೀಸರು ಶಂಭು ಮತ್ತು ಖನೌರಿ ಗಡಿಯಲ್ಲಿ ತಡೆದಿದ್ದಾರೆ.
ಬೃಹತ್ ಬ್ಯಾರಿಕೇಡ್‌ಗಳು, ಕಾಂಕ್ರೀಟ್ ಬ್ಲಾಕ್‌ಗಳು, ಕಬ್ಬಿಣದ ಮೊಳೆಗಳನ್ನು ರಸ್ತೆಗೆ ಹಾಕಿರುವ ಪೊಲೀಸರು ಗಡಿ ದಾಟಿ ರೈತರು ದೆಹಲಿಯತ್ತ ಸಾಗದಂತೆ ತಡೆಯುತ್ತಿದ್ದಾರೆ. ರೈತರ ಮೇಲೆ ಪೊಲೀಸರು ಟಿಯರ್ ಗ್ಯಾಸ್ ಮತ್ತು ರಬ್ಬರ್ ಬುಲೆಟ್‌ಗಳಿಂದ ದಾಳಿ ನಡೆಸಿದ್ದಾರೆ. ರಬ್ಬರ್ ಬುಲೆಟ್ ದಾಳಿಯಲ್ಲಿ ರೈತರೊಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೆ, ಪ್ರತಿಭಟನೆ ಆರಂಭವಾದಾಗಿಂದ ಈವರೆಗೆ 6 ಮಂದಿ ರೈತರು ಸಾವನ್ನಪ್ಪಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮೋದಿ ಸರ್ಕಾರದ ವಿರುದ್ಧ ಮಾತಾಡಿದ್ರೆ ಟ್ವಿಟರ್ ಖಾತೆ ಬ್ಲಾಕ್
ದೆಹಲಿ ಗಡಿಯಲ್ಲಿಯೂ ರೈತರನ್ನು ತಡೆಯಲು ದೆಹಲಿ ಪೊಲೀಸರು ಭಾರೀ ಭದ್ರತೆ ನಿಯೋಜಿಸಿದ್ದಾರೆ. ಟಿಕ್ರಿ, ಸಿಂಘು ಮತ್ತು ಘಾಜಿಪುರ ಗಡಿಗಳಲ್ಲಿ ಬೃಹತ್ ಬ್ಯಾರಿಕೇಡ್‌ಗಳು, ಮುಳ್ಳಿನ ತಂತಿ, ಕಬ್ಬಿಣದ ಮೊಳೆಗಳನ್ನು ಹಾಕಿದ್ದಾರೆ. ರೈಲ್ವೆ, ಮೆಟ್ರೋ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಹೆಚ್ಚುವರಿ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
ರೈತರ ‘ರೈಲ್ ರೋಕೋ’ ಪ್ರತಿಭಟನೆ
ರೈತರ ಆಂದೋಲನವನ್ನು ತೀವ್ರಗೊಳಿಸಲು ರೈತ ಮುಖಂಡರು ಮಾರ್ಚ್ 10 ರಂದು ‘ರೈಲ್ ರೋಕೋ’ ಪ್ರತಿಭಟನೆಗೆ ದೇಶಾದ್ಯಂತ ರೈತರು ಮತ್ತು ಕಾರ್ಮಿಕರಿಗೆ ಕರೆ ನೀಡಿದ್ದಾರೆ. ಅಂದು ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ದೇಶಾದ್ಯಂತ ‘ರೈಲ್ ರೋಕೋ’ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.
2020-21ರ ಆಂದೋಲನದ ನೇತೃತ್ವ ವಹಿಸಿದ್ದ ರೈತರ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮಾರ್ಚ್ 14 ರಂದು ದೆಹಲಿಯಲ್ಲಿ ‘ಕಿಸಾನ್ ಮಹಾಪಂಚಾಯತ್’ ನಡೆಸುವುದಾಗಿ ಘೋಷಿಸಿದೆ. ಅಂದು 400ಕ್ಕೂ ಹೆಚ್ಚು ರೈತ ಸಂಘಟನೆಗಳು ‘ಕಿಸಾನ್ ಮಹಾಪಂಚಾಯತ್’ನಲ್ಲಿ ಭಾಗವಹಿಸಲಿವೆ ಎಂದು ಎಸ್‌ಕೆಎಂ ತಿಳಿಸಿದೆ.