ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಕನ್ವರ್ ಯಾತ್ರೆ ಬಳಿಕ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಮಂಗಳವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಆಯೋಜಿಸಿದ್ದ ನಾಲ್ಕು ದಿನಗಳ ಹರಿದ್ವಾರ ಕಿಸಾನ್ ಕುಂಭದ ಮುಕ್ತಾಯದ ನಂತರ ಮಹಾಪಂಚಾಯತ್ ಅನ್ನು ಉದ್ದೇಶಿಸಿ ಮಾತನಾಡಿದ ಟಿಕಾಯತ್, “ರೈತರ ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದಾಸೀನತೆಯನ್ನು ಕಡಿಮೆ ಮಾಡಲು ನಾವು ಬಲವಾದ ಸಂಘಟನೆ ಕಟ್ಟುವ ಅಗತ್ಯವಿದೆ” ಎಂದು ಒತ್ತಿ ಹೇಳಿದರು.
ಇದನ್ನು ಓದಿದ್ದೀರಾ? ಕೊಪ್ಪಳ | ಬಂಡವಾಳಶಾಹಿಗಳಿಂದ ಭೂಮಿ ಉಳಿಸಬೇಕಿದೆ: ರಾಕೇಶ್ ಟಿಕಾಯತ್
“ಸರ್ಕಾರಗಳು ರೈತರ ಬೇಡಿಕೆಗಳಿಗೆ ಕಿವಿಗೊಡದಿದ್ದರೆ ಕನ್ವರ್ ಯಾತ್ರೆಯ ನಂತರ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ ಟಿಕಾಯತ್, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿ ಕಾನೂನಿನ ಮಹತ್ವವನ್ನು ವಿವರಿಸಿದರು.
ಕೇಂದ್ರ ಸರ್ಕಾರವು ಲೋಕಸಭೆ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಮೂರು ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಭರವಸೆ ನೀಡಿದೆ. ಅದನ್ನು ಶೀಘ್ರವೇ ಕಾರ್ಯರೂಪಕ್ಕೆ ತರಬೇಕು. ಜೊತೆಗೆ ದೃಢವಾದ ಭೂಸ್ವಾಧೀನ ಕಾನೂನು ಮತ್ತು ಬುಡಕಟ್ಟು ರೈತರಿಗೆ ರಕ್ಷಣೆಯ ಅಗತ್ಯವಿದೆ” ಎಂದು ಹೇಳಿದರು.