ಇತ್ತೀಚೆಗೆ ಒಂದಾದ ಮೇಲೊಂದರಂತೆ ಕೌಟುಂಬಿಕ ಹತ್ಯೆ ಪ್ರಕರಣಗಳು ಹೆಚ್ಚು ಸದ್ದು ಮಾಡುತ್ತಿವೆ. ಪ್ರಚೋದನಾಕಾರಿ ಮತ್ತು ಹತ್ಯೆಯನ್ನು ವೈಭವೀಕರಿಸುತ್ತಿರುವ ಇಂತಹ ಸುದ್ದಿಗಳು ಸಮಾಜದಲ್ಲಿ ಭಯ, ಆತಂಕ, ಭೀತಿಯನ್ನು ಹುಟ್ಟುಹಾಕುತ್ತಿವೆ. ಅಂತಹದೊಂದು ಭೀತಿ ಪ್ರಕರಣವಾಗಿ, ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ವಿವಾಹ ಮಾಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕಳೆದ ವಾರ, ಉತ್ತರ ಪ್ರದೇಶದ ಮೀರತ್‌ನಲ್ಲಿ ಮಹಿಳೆಯೊಬ್ಬರು ತಮ್ಮ ಪ್ರಿಕಕರನ ಜೊತೆ ಸೇರಿ ತನ್ನ ಪತಿಯನ್ನು ಹತ್ಯೆಗೈದು, ಮೃತದೇಹವನ್ನು ಕತ್ತರಿಸಿ ಸಿಮೆಂಟ್ ಡ್ರಮ್‌ನಲ್ಲಿ ತುಂಬಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇಂದು ಪತ್ನಿಯನ್ನು ಬರ್ಬರವಾಗಿ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿವಾಹೇತರ ಸಂಬಂಧಗಳ ಕಾರಣಕ್ಕಾಗಿ ಪತ್ನಿಯನ್ನು ಪತಿ, ಪತಿಯನ್ನು ಪತ್ನಿ ಕೊಲೆ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಸಾಮಾಜಿಕ ಅರಿವು ಮೂಡಿಸುವ ಅಥವಾ ಕೊಲೆ-ಕ್ರೌರ್ಯವನ್ನು ಖಂಡಿಸುವ ಯಾವುದೇ ತಿರುಳು ಇಲ್ಲದೆ, ಘಟನೆಯನ್ನು ವೈಭವೀಕರಿಸಿ, ರೋಮಾಂಚನಕಾರಿಯಾಗಿ ಘಟನೆಗಳನ್ನು ಮಾಧ್ಯಮಗಳು ಬಿತ್ತರಿಸುತ್ತಿವೆ. ಇಂತಹ ವರದಿಗಳು ಭಯ-ಭೀತಿಯ ವಾತಾವರಣನ್ನು ಹುಟ್ಟುಹಾಕುತ್ತಿವೆ. ಇವು, ಪತಿ-ಪತ್ನಿಯರಲ್ಲಿ ಭಯ, ಆತಂಕ ಮೂಡಲು ಕಾರಣವಾಗುತ್ತಿದೆ.
ಹೀಗಾಗಿ, ತಾನೂ ಕೊಲೆಯಾಗಬಹುದು ಎಂಬ ಭಯದಿಂದ ಉತ್ತರ ಪ್ರದೇಶದ ಸಂತ ಕಬೀರ್ ನಗರ ಬಳಿಯ ಕತಾರ್ ಜೋತ್ ಗ್ರಾಮದ ಬಬ್ಗೂ ಎಂಬಾತ ತನ್ನ ಪತ್ನಿಗೆ ಆಕೆಯ ಪ್ರಿಯಕರನೊಂದಿಗೆ ವಿವಾಹ ಮಾಡಿದ್ದಾರೆ. ಬಬ್ಲೂ ಮತ್ತು ಆತನ ಪತ್ನಿ 2017ರಲ್ಲಿ ವಿವಾಹವಾಗಿದ್ದರು. ಆದಾಗ್ಯೂ, ಬಬ್ಲೂ ಅವರು ಕೂಲಿ ಕೆಲಸಕ್ಕಾಗಿ ನೆರೆಯ ರಾಜ್ಯ ಬಿಹಾರಕ್ಕೆ ವಲಸೆ ಹೋಗಿದ್ದರು. ಈ ನಡುವೆ, ಬಬ್ಲೂ ಅವರ ಪತ್ನಿ ಬೇರೊಬ್ಬ ಪುರುಷ ವಿಕಾಸ್ ಎಂಬಾತನೊಂದಿಗೆ ವಿವಾಹೇತರ ಪ್ರೇಮ ಸಂಬಂಧ ಹೊಂದಿದ್ದರು. ಈ ಬಗ್ಗೆ, ತಿಳಿದ ಬಬ್ಲೂ ತನ್ನ ಪತ್ನಿಯನ್ನು ಕರೆದೊಯ್ದು ವಿಕಾಸ್ ಜೊತೆ ಮದುವೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಗ್ರಾಮದ ಶಿವ ದೇವಸ್ಥಾನದಲ್ಲಿ ತನ್ನ ಪತ್ನಿ ಮತ್ತು ವಿಕಾಸ್ ವಿವಾಹ ಮಾಡಿಸಿರುವ ಬಬ್ಲೂ, ಅವರಿಬ್ಬರ ವಿವಾಹವನ್ನು ಕಾನೂನಾತ್ಮಕವಾಗಿ ನೋಂದಣಿಯನ್ನೂ ಮಾಡಿಸಿದ್ದಾರೆ.
“ಇತ್ತೀಚಿನ, ವಿವಾಹೇತರ ಸಂಬಂಧದ ಕಾರಣಕ್ಕಾಗಿ ಪತಿ ಅಥವಾ ಪತ್ನಿಯರನ್ನು ಕೊಲ್ಲುವ ಘಟನೆಗಳು ನಡೆಯುತ್ತಿವೆ. ನನಗೆ ಯಾವುದೇ ಪ್ರಾಣಾಪಾಯ ಆಗದಂತೆ ಮುನ್ನೆಚ್ಚರಿಕೆಯ ಕಾರಣಕ್ಕಾಗಿ ಅವರಿಬ್ಬರಿಗೂ ವಿವಾಹ ಮಾಡಿಸಿದ್ದೇನೆ. ಮೀರತ್‌ನಲ್ಲಿ ನಡೆದ ಘಟನೆಯನ್ನು ಗಮನಿಸಿದ ಬಳಿಕ, ಈ ನಿರ್ಧಾರ ಕೈಗೊಂಡಿದ್ದೆ” ಎಂದು ಬಬ್ಲೂ ಹೇಳಿಕೊಂಡಿದ್ದಾರೆ.