ದೆಹಲಿಯಲ್ಲಿ ಶುಲ್ಕ ವಿವಾದ ಕಾರಣಕ್ಕಾಗಿ ಶಾಲೆಯಿಂದ ಹೊರದಬ್ಬಲಾಗಿದ್ದ 32 ವಿದ್ಯಾರ್ಥಿಗಳ ಪೋಷಕರು ದೂರುಗಳನ್ನು ನೀಡಿದ ಬಳಿಕ ವಿದ್ಯಾರ್ಥಿಗಳನ್ನು ಮರಳಿ ಸೇರಿಸಿಕೊಳ್ಳುವಂತೆ ಡಿಪಿಎಸ್ ದ್ವಾರಕಾ ಶಾಲೆಗೆ ಶಿಕ್ಷಣ ನಿರ್ದೇಶನಾಲಯ (ಡಿಒಇ) ನಿರ್ದೇಶನ ನೀಡಿದೆ.
ಶಾಲೆಗೆ ನೀಡಲಾದ ಆದೇಶ ಪ್ರತಿಯಲ್ಲಿ ಡಿಒಇ, “ಶಾಲೆಯ ಧೋರಣೆ, ಕ್ರಮಗಳು ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿವೆ. ಶಾಲೆಯು ಇಲಾಖೆಯ ಅನುಮೋದನೆಯಿಲ್ಲದೆ ಶುಲ್ಕ ಹೆಚ್ಚಳ ಮತ್ತು ಶುಲ್ಕ ಸಂಬಂಧಿತ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳ ವಿರುದ್ಧ ಯಾವುದೇ ರೀತಿಯ ತಾರತಮ್ಯವನ್ನು ಮಾಡುವಂತಿಲ್ಲ. ಯಾವುದೇ ಮಗು ಶುಲ್ಕ ಸಂಬಂಧಿತ ಸಮಸ್ಯೆಗಳ ಕಾರಣಕ್ಕೆ ತಾರತಮ್ಯವನ್ನು ಎದುರಿಸಬಾರದು. ಆದರೂ, ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಲಾಗಿದೆ. ಇದು ಕಾನೂನುಬಾಹಿರ ಕ್ರಮ. ಶಾಲೆಯಿಂದ ಹೊರಹಾಕಲ್ಪಟ್ಟ ಮಕ್ಕಳನ್ನು ಮರಳಿ ಸೇರಿಸಿಕೊಳ್ಳಬೇಕು” ಎಂದು ಸೂಚಿಸಿದೆ.
“ಸರಿಯಾದ ಯಾವುದೇ ಕಾರಣ, ಸಮರ್ಥನೆಯ ಅಂಶಗಳಿಲ್ಲದೆ ವಿದ್ಯಾರ್ಥಿಗಳನ್ನು ತೆಗೆದುಹಾಕುವುದು, ಪೋಷಕರ ಒಪ್ಪಿಗೆಯಿಲ್ಲದೆ ವಿದ್ಯಾರ್ಥಿಗಳನ್ನು ಶಾಲಾ ಬಸ್‌ಗಳಲ್ಲಿಯೇ ಮನೆಗೆ ಕಳುಹಿಸುವುದು ಅನುಚಿತ ಕೃತ್ಯವಾಗಿದೆ. ಹೆಚ್ಚಿನ ಶುಲ್ಕವನ್ನು ಪಾವತಿಸದ ಕಾರಣ ಪ್ರವೇಶ ಪತ್ರ ಅಥವಾ ವರ್ಗಾವಣೆ ಪ್ರಮಾಣಪತ್ರಗಳನ್ನು ತಡೆಹಿಡಿಯುವುದು ಸೂಕ್ತವಲ್ಲ. ಇಂತಹ ಧೋರಣೆಯನ್ನು ಸಹಿಸಲಾಗದು” ಎಂದು ಹೇಳಿದೆ.
“ಶುಲ್ಕ ವಿವಾದದ ಕಾರಣಕ್ಕಾಗಿ ಶಾಲೆಯಿಂದ ತೆಗೆದುಹಾಕಲಾದ ಎಲ್ಲ ವಿದ್ಯಾರ್ಥಿಗಳನ್ನು ಮತ್ತೆ ಸೇರಿಸಿಕೊಳ್ಳಬೇಕು. ಬಲವಂತ ಅಥವಾ ತಾರತಮ್ಯಕ್ಕೆ ಒಳಪಡಿಸಬಾರದು. ಶಾಲೆಯು ಮೂರು ದಿನಗಳಲ್ಲಿ ಅನುಸರಣಾ ವರದಿಯನ್ನು ಇಲಾಖೆಗೆ ಸಲ್ಲಿಸಬೇಕು ಎಂದು ಡಿಒಇ ಹೇಳಿದೆ. ಆದಾಗ್ಯೂ, ಈವರೆಗೆ ಶಾಲೆಯಿಂದ ಯಾವುದೇ ಪಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಪೋಷಕರ ದೂರಿನ ಪ್ರಕಾರ, “ಶಾಲೆಯು ಕಳೆದ ಕೆಲವು ವರ್ಷಗಳಿಂದ ಅನುಮೋದಿಸದ ಶುಲ್ಕಗಳನ್ನು ಸಂಗ್ರಹಿಸಲು ಮುಂದಾಗಿದೆ. ಆ ಶುಲ್ಕಗಳನ್ನು ಪಾವತಿಸುವಂತೆ ಪೋಷಕರ ಮೇಲೆ ಒತ್ತಡ ಮತ್ತು ಬಲವಂತದ ತಂತ್ರಗಳನ್ನು ಬಳಸಿದೆ. ಮಾಸಿಕ ಶುಲ್ಕವನ್ನು ಈ ಹಿಂದೆ 7,000 ರೂ. ಹೆಚ್ಚಿಸಲಾಗಿತ್ತು. ಇತ್ತೀಚೆಗೆ ಅದನ್ನು 9,000 ರೂ.ಗೆ ಹೆಚ್ಚಿಸಲಾಗಿದೆ” ಎಂದು ಆರೋಪಿಸಲಾಗಿದೆ.