ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಿ ತೆಲಂಗಾಣ ಪೊಲೀಸರು ಹೈಕೋರ್ಟ್‌ಗೆ ಮುಕ್ತಾಯದ ವರದಿ ಸಲ್ಲಿಸಿದ್ದಾರೆ. ಈ ಬೆನ್ನಲ್ಲೇ, ಆಕ್ಷೇಪ ವ್ಯಕ್ತವಾಗಿದ್ದು, ಪ್ರಕರಣದ ತನಿಖೆಯನ್ನು ಪುರನಾರಾರಂಭಿಸುತ್ತೇವೆ ಎಂದು ತೆಲಂಗಾಣ ಡಿಜಿಪಿ ರವಿ ಗುಪ್ತಾ ಹೇಳಿದ್ದಾರೆ.
ರೋಹಿತ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ತೆಲಂಗಾಣದ ಗಚಿಬೌಲಿ ಪೊಲೀಸರು ಮೇ 3ರಂದು ತೆಲಂಗಾಣ ಹೈಕೋರ್ಟ್‌ಗೆ ಮುಕ್ತಾಯದ (ಫೈಲ್ ಕ್ಲೋಸ್) ವರದಿ ಸಲ್ಲಿಸಿದ್ದಾರೆ. ಎಲ್ಲ ಆರೋಪಿಗಳಿಗೂ ಕ್ಲೀನ್ ಚಿಟ್ ನೀಡಬೇಕೆಂದು ಪೊಲೀಸರು ವರದಿಯಲ್ಲಿ ಹೇಳಿದ್ದಾರೆ. ಅಲ್ಲದೆ, ರೋಹಿತ್ ಪರಿಶಿಷ್ಟ ಜಾತಿಗೆ ಸೇರಿದವರಲ್ಲ. ಇದೇ ವಿಷಯ ಬಹಿರಂಗವಾದರೆ ಅವಮಾನವಾಗುತ್ತದೆಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದೀಗ, ತೆಲಂಗಾಣ ಡಿಜಿಪಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, “ಪ್ರಕರಣ ಸಂಬಂಧ ನಡೆದಿರುವ ತನಿಖೆಯ ಬಗ್ಗೆ ರೋಹಿತ್ ವೇಮುಲಾ ಅವರ ತಾಯಿ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲು ನಿರ್ಧರಿಸಲಾಗಿದೆ” ಎಂದು ಹೇಳಿದ್ದಾರೆ.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಸ್ಕಾಲರ್‌ಶಿಪ್‌ಅನ್ನು ತಡೆಹಿಡಿಯಲಾಗಿತ್ತು. ಅಲ್ಲದೆ, ಹಾಸ್ಟೆಲ್‌ನಿಂದ ಹೊರ ಹಾಕಲಾಗಿತ್ತು. ಹಲವಾರು ದಿನಗಳ ಕಾಲ ಕ್ಯಾಂಪಸ್‌ನಲ್ಲಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದ ರೋಹಿತ್ ವೇಮುಲಾ 2016ರ ಜನವರಿ 17ರಂದು ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆಗೆ ಆಗಿನ ಸಿಕಂದರಾಬಾದ್ ಸಂಸದ ಬಂಡಾರು ದತ್ತಾತ್ರೇಯ, ವಿಧಾನ ಪರಿಷತ್ ಸದಸ್ಯ ಎನ್ ರಾಮಚಂದರ್ ರಾವ್ ಮತ್ತು ಉಪಕುಲಪತಿ ಅಪ್ಪಾ ರಾವ್, ಎಬಿವಿಪಿ ಮುಖಂಡರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಕಾರಣವೆಂದು ಆರೋಪಿಸಲಾಗಿತ್ತು.
ಈ ವರದಿ ಓದಿದ್ದೀರಾ?: ರೋಹಿತ್ ವೇಮುಲಾ ಪ್ರಕರಣದ ‘ಫೈಲ್ ಕ್ಲೋಸ್’ ಮಾಡಿದ ಪೊಲೀಸರು; ಆರೋಪಿಗಳಿಗೆ ‘ಕ್ಲೀನ್ ಚಿಟ್’
ರೋಹಿತ್ ಸಾವಿಗೆ ನ್ಯಾಯ ದೊರಕಿಸಬೇಕು. ಆತನ ಸಾವಿಗೆ ಕಾರಣರಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಪ್ರತಿಭಟನೆಗಳು ತೀವ್ರಗೊಂಡಿದ್ದ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲದೆ, ಕಳೆದ (2023) ವಿಧಾನಸಭಾ ಚುನಾವಣೆಯ ಸಮಯದಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಎದುರಿಸುತ್ತಿರುವ ತಾರತಮ್ಯವನ್ನು ನಿವಾರಿಸಲು ‘ರೋಹಿತ್ ವೆಮುಲಾ ಕಾಯ್ದೆ’ ತರುವುದಾಗಿಯೂ ಭರವಸೆ ನೀಡಿದೆ.
ಪ್ರಕರಣದ ನಡೆದ 8 ವರ್ಷಗಳ ಬಳಿಕ, ಅದೂ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಾಲ್ಕು ತಿಂಗಳ ನಂತರ ಪ್ರಕರಣವನ್ನು ಮುಚ್ಚುವ ವರದಿಯನ್ನು ಪೊಲೀಸರು ಸಲ್ಲಿಸಿದ್ದಾರೆ.
ಮುಚ್ಚುವಿಕೆಯ ವರದಿ ಸಲ್ಲಿಸಿದ ತಕ್ಷಣ, ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ರೋಹಿತ್ ಸಾವಿನ ಬಗ್ಗೆ ಹೊಸದಾಗಿ ಮರುತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ರೋಹಿತ್ ಸಾವಿಗೆ ಅಧಿಕಾರಿಗಳು ಮತ್ತು ರಾಜಕಾರಣಿಗಳೇ ಕಾರಣ ಆರೋಪಿಸಿದ್ದಾರೆ.