ಮಹಿಳಾ ಕಾನ್‌ಸ್ಟೇಬಲ್ ಒಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ, ಅವರ ಮೇಲೆ ಸೇನಾ ಅಧಿಕಾರಿಯೊಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. 2012ರಲ್ಲಿ ಘಟನೆ ನಡೆದಿದ್ದು, ಇದೀಗ ಪ್ರಕರಣ ದಾಖಲಿಸಲಾಗಿದೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪೇದೆ ಪ್ರಸ್ತುತ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಿಯೋಜನೆಗೊಂಡಿರುವ ಲೆಫ್ಟಿನೆಂಟ್ ಕರ್ನಲ್ ವರುಣ್ ಪ್ರತಾಪ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಆರೋಪಿ ಕರ್ನಲ್ ವರುಣ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 69, 351 (2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಆರೋಪಿಯು ತನ್ನ ವಿರುದ್ಧ ಪೊಲೀಸ್ ದೂರು ದಾಖಲಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಪ್ರಾಣ ಭಯದಲ್ಲಿ ಈವರೆಗೆ ದೂರು ದಾಖಲಿಸಿರಲಿಲ್ಲ ಎಂದು ಸಂತ್ರಸ್ತ ಪೇದೆ ಹೇಳಿಕೊಂಡಿದ್ದಾರೆ.
ದೂರು ದಾಖಲಿಸಿರುವ ಸಂತ್ರಸ್ತೆ, “2012ರಲ್ಲಿ ಮಧ್ಯಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಆರೋಪಿಯು ಸೇನಾ ಕ್ಯಾಂಟಿನ್‌ನಲ್ಲಿ ನನ್ನನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದರು. ತಾನು ಅವಿವಾಹಿತನೆಂದು ಹೇಳಿಕೊಂಡಿದ್ದರು. ಆಗ್ಗಾಗ್ಗೆ ಭೇಟಿಯಾಗುತ್ತಿದ್ದರು. ಬಳಿಕ, ಮದುವೆಯಾಗುವ ಪ್ರಸ್ತಾಪ ಇಟ್ಟಿದ್ದರು. ಅದೇ ಭರವಸೆ ಮೇಲೆ ನನ್ನನ್ನು ಆತನ ಸ್ಥಳಕ್ಕೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
“ಅಲ್ಲದೆ, ಆತನಿಗೆ ಮೊದಲೇ ವಿವಾಹವಾಗಿದೆ ಎಂಬುದು 2013ರಲ್ಲಿ ಗೊತ್ತಾಯಿತು. ಈ ಬಗ್ಗೆ ಪ್ರಶ್ನಿಸಿದಾಗ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆಯುತ್ತಿರುದಾಗಿ ಹೇಳಿದ್ದರು. ಅಲ್ಲದೆ, ನನ್ನನ್ನು ಮದುವೆಯಾಗುವಂತೆ ಕೇಳಿದರೆ, ನಾನಾ ರೀತಿಯ ನೆಪಗಳನ್ನು ಹೇಳಿಕೊಂಡು ಮದುವೆಯನ್ನು ವಿಳಂಬಗೊಳಿಸಿದರು. ಅಲ್ಲದೆ, ಆತ ಇನ್ನೂ ಕೆಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ಗೊತ್ತಾಯಿಸಿತು. ಈ ಬಗ್ಗೆ ಪ್ರಶ್ನಿಸಿ, ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು” ಎಂದು ಸಂತ್ರಸ್ತ ಪೇದೆ ವಿವರಿಸಿದ್ದಾರೆ.
ಈ ವರದಿ ಓದಿದ್ದೀರಾ?: ಆಘಾತಕಾರಿ ಘಟನೆ | ಮಹಿಳೆ ಮೇಲೆ 18 ಕಾಮುಕರಿಂದ 18 ತಿಂಗಳು ನಿರಂತರ ಸಾಮೂಹಿಕ ಅತ್ಯಾಚಾರ
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಭೋಪಾಲ್ ಪೊಲೀಸ್ ಮಹಿಳಾ ಭದ್ರತಾ ಸಹಾಯಕ ಆಯುಕ್ತೆ ನಿಧಿ ಸಕ್ಸೇನಾ, “ಆರೋಪಿ ವರುಣ್ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ನಾವು ಅವರು ಸೇವೆ ಸಲ್ಲಿಸುತ್ತಿರುವ ಘಟಕಕ್ಕೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದೇವೆ. ಅವರು ವಿಚಾರಣೆ ಬರುವಂತೆ ಸೂಚನೆ ನೀಡಿದ್ದೇವೆ. ವಿಚಾರಣೆಗೆ ಬಾರದಿದ್ದರೆ, ಬಂಧಿಸಿ ಕರೆತರಲಾಗುತ್ತದೆ” ಎದು ಹೇಳಿದ್ದಾರೆ.
“ಮದುವೆಯಾಗುವ ನೆಪದಲ್ಲಿ ಸಂತ್ರಸ್ತ ಪೇದೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾರೆ. ತನ್ನ ಉದ್ದೇಶವನ್ನು ಈಡೇರಿಸಿಕೊಂಡ ಬಳಿಕ, ತಾನು ನೀಡಿದ್ದ ಭರವಸೆಯನ್ನು ಉಲ್ಲಂಘಿಸುವುದನ್ನು ಅತ್ಯಾಚಾರವೆಂದು ಪರಿಗಣಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಗಮನಿಸಿ: ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು.ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.