ಉತ್ತರಪ್ರದೇಶದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ನ್ಯಾಯಾಧೀಶೆಯ ನಿಗೂಢ ಸಾವು ಸಂಬಂಧಿಸಿ ಕುಟುಂಬದವರು ಪೊಲೀಸರ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಾರೆ.
ಉತ್ತರಪ್ರದೇಶದ ಬುದೌನ್ ಜಿಲ್ಲೆಯಲ್ಲಿ ನ್ಯಾಯಾಧೀಶೆಯ ನಿಗೂಢ ಸಾವು ಸಂಬಂಧಿಸಿ ಪೊಲೀಸರು ತನಿಖೆಯಲ್ಲಿ ಅಲಕ್ಷ್ಯವಹಿಸಿದ ಆರೋಪ ಎದುರಿಸುತ್ತಿದ್ದಾರೆ.
ಬುದೌನ್ ಜಿಲ್ಲೆಯಲ್ಲಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡ ಮರುದಿನವೇ ಫೆಬ್ರವರಿ 4ರಂದು ಮಹಿಳೆ ತಮ್ಮ ಅಧಿಕೃತ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ತಂದೆ ಕೊಲೆ ಆರೋಪ ಹೊರಿಸಿದ ನಂತರ ಪೊಲೀಸರು ಅಪರಿಚಿತ ವ್ಯಕ್ತಿಗಳ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.
ಮೂಲತಃ ಮಾವು ಜಿಲ್ಲೆಯವರಾದ 29 ವರ್ಷ ಪ್ರಾಯದ ಜ್ಯೋತ್ಸ್ನಾ ರೈ ಬೂದಾನ್‌ನಲ್ಲಿ ಸಿವಿಲ್ ನ್ಯಾಯಾಧೀಶರಾಗಿದ್ದರು. ಅವರ ಮೃತದೇಹದ ಜೊತೆಗೆ ಆತ್ಮಹತ್ಯೆ ಪತ್ರವೂ ದೊರೆತಿತ್ತು. ನ್ಯಾಯಾಧೀಶರ ತಂದೆ ಅಶೋಕ್ ಕುಮಾರ್ ರೈ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಮಗಳನ್ನು ಮೊದಲು ಕೊಲೆ ಮಾಡಿ ನಂತರ ನೇಣು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಮರಣೋತ್ತರ ವರದಿಯನ್ನು ಆಧರಿಸಿ ತನಿಖೆ ನಡೆಸಲಿದ್ದೇವೆ. ಮಹಿಳೆಯ ತಂದೆ ಕೊಲೆ ಆರೋಪ ಹೊರಿಸಿ ದೂರು ಸಲ್ಲಿಸಿದ್ದಾರೆ ಎಂದು ಬೂದೌನ್ ನಗರ ಪೊಲೀಸ್ ಅಧಿಕಾರಿ ಅಲೋಕ್ ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನ್ಯಾಯಾಧೀಶರು ಕಚೇರಿಗೆ ಆಗಮಿಸದಿರುವುದು ಮತ್ತು ಸಂಪರ್ಕ ಸಾಧ್ಯವಾಗದೆ ಇದ್ದಾಗ ಸಹೋದ್ಯೋಗಿಗಳು ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಶನಿವಾರ ಬೆಳಿಗ್ಗೆ ಮಹಿಳೆಯ ಮೃತದೇಹ ಮತ್ತು ಮರಣಪತ್ರ ದೊರೆತಿತ್ತು. ಮರಣಪತ್ರದಲ್ಲಿ ಯಾರ ಮೇಲೂ ಆರೋಪ ಹೊರಿಸಿರಲಿಲ್ಲ. ಪ್ರಾಥಮಿಕ ತನಿಖೆಯಲ್ಲಿ ನ್ಯಾಯಾಧೀಶರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಯಾಧೀಶರ ಸಹೋದರ ಹಿಮಾಂಶು ಶೇಖರ್ ರೈ ಅವರು ಪೊಲೀಸ್ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆಗಮಿಸಿದಾಗ ಮನೆಯ ಬಾಗಿಲು ತೆರೆದೇ ಇದ್ದರೂ, ಬೆರಳಚ್ಚು ಸಾಕ್ಷ್ಯಗಳನ್ನೂ ತೆಗೆದುಕೊಂಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.