ಎರಡು ಅಂತಸ್ತಿನ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿ ಕನಿಷ್ಠ ಐದು ಜನರು ಸಾವನ್ನಪ್ಪಿದ ಘಟನೆ ಪಂಜಾಬ್‌ನ ಮುಕ್ತಸರ್ ಜಿಲ್ಲೆಯ ಹಳ್ಳಿಯ ಹೊರವಲಯದಲ್ಲಿ ನಡೆದಿದೆ. ಘಟನೆಯಲ್ಲಿ 34 ಮಂದಿ ಗಾಯಗೊಂಡಿದ್ದಾರೆ.
ಲಂಬಿ ಕ್ಷೇತ್ರದ ಸಿಂಗ್‌ವಾಲಾ ಗ್ರಾಮದಲ್ಲಿ ತಾರ್ಸೆಮ್ ಸಿಂಗ್ ಎಂಬವರ ಒಡೆತನದ ಕಾರ್ಖಾನೆಯಲ್ಲಿ ಸ್ಪೋಟ ಸಂಂಭವಿಸಿದೆ. ಎರಡು ಅಂತಸ್ತಿನ ಕಟ್ಟಡವೇ ನೆಲಸಮವಾಗಿದೆ. ಹಲವು ಮಂದಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ; ನಾಲ್ವರು ಸಾವು
ಸದ್ಯ ಮೃತರ ಗುರುತು ಪತ್ತೆಯಾಗಿಲ್ಲ. ಈ ಕಾರ್ಖಾನೆಯ ಕಾರ್ಮಿಕರಲ್ಲಿ ಬಹುತೇಕರು ಉತ್ತರ ಪ್ರದೇಶ ಮತ್ತು ಬಿಹಾರದಿಂದ ವಲಸೆ ಬಂದವರು. ಮಧ್ಯರಾತ್ರಿ 12 ರಿಂದ ಬೆಳಗಿನ ಜಾವ 1 ಗಂಟೆಯ ನಡುವೆ ಸಂಭವಿಸಿದೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಲಂಬಿಯ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್‌ಪಿ) ಜಸ್ಪಾಲ್ ಸಿಂಗ್, “ನಮ್ಮ ತಂಡವು ಶೀಘ್ರ ಸ್ಥಳಕ್ಕೆ ಧಾವಿಸಿದೆ. ಈವರೆಗೆ ಐವರ ಮೃತದೇಹ ಪತ್ತೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. 28 ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ” ಎಂದಿದ್ದಾರೆ.
ಪಟಾಕಿಗಳ ತಯಾರಿಕೆ ಮತ್ತು ಪ್ಯಾಕೇಜಿಂಗ್ ಎರಡನ್ನೂ ಒಂದೇ ಆವರಣದಲ್ಲಿ ನಡೆಸಲಾಗುತ್ತಿತ್ತು. ಇದಲ್ಲದೆ, ಹಲವಾರು ಕಾರ್ಮಿಕರು ಅದೇ ಕಟ್ಟಡದ ಒಳಗೆ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.
