ಸರ್ಕಾರಿ ಅಧಿಕಾರಿಯ ಮೇಲೆ ಮೀನು ಎಸೆದ ಮತ್ತು ಅವರನ್ನು ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಬಿಜೆಪಿ ಸಚಿವ ನಿತೇಶ್ ರಾಣೆ ಮತ್ತು ಇತರ 30 ಜನರನ್ನು ಮಹಾರಾಷ್ಟ್ರದ ಸಿಂಧುದುರ್ಗದ ನ್ಯಾಯಾಲಯವು ಖುಲಾಸೆಗೊಳಿಸಿದೆ.
2017ರ ಜುಲೈ 6ರಂದು ರಾಣೆ ಮತ್ತು ಸುಮಾರು 100 ಇತರರು ಮೀನುಗಾರಿಕೆ ಇಲಾಖೆಯ ಸಹಾಯಕ ಆಯುಕ್ತ ಪ್ರದೀಪ್ ವಾಸ್ಟ್ ಅವರ ಮಾಲ್ವನ್ ಕಚೇರಿಗೆ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲೆಂದು ಬಂದಿದ್ದರು. ಈ ವೇಳೆ ಅವರನ್ನು ನಿಂದಿಸಿ, ಅವರ ಮೇಲೆ ಮೀನು ಎಸೆದಿದ್ದರು. ಮೀನುಗಾರಿಕೆ ದೋಣಿಗಳನ್ನು ಸುಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದೂ ಆರೋಪಿಸಲಾಗಿದೆ. ಈ ಸಂಬಂಧ ರಾಣೆ ಮತ್ತು ಇತರೆ ಮೂವತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿದ್ದೀರಾ? ಮೀನು ತಿಂದರೆ ನಿಮ್ಮ ಕಣ್ಣು ಐಶ್ವರ್ಯ ರೈ ತರಹ ಆಗುತ್ತದೆ: ಮಹಾರಾಷ್ಟ್ರ ಬಿಜೆಪಿ ಮಂತ್ರಿಯ ವಿವಾದಾತ್ಮಕ ಹೇಳಿಕೆ
ಈ ಸಂಬಂಧ ಮೇ 21ರಂದು ನೀಡಿದ ತೀರ್ಪಿನ ವಿವರವನ್ನು ಭಾನುವಾರ ನೀಡಲಾಗಿದೆ. ಅಧಿಕಾರಿ ಪ್ರದೀಪ್ ವಾಸ್ಟ್ ಅವರು ತಮ್ಮ ಮೇಲೆ ರಾಣೆ ಅವರು ಮೀನು ಎಸೆದಿದ್ದಾರೆ ಎಂದು ತಮ್ಮ ಸಾಕ್ಷ್ಯದಲ್ಲಿ ತಿಳಿಸಿಲ್ಲ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು(ಸಿಂಧುದುರ್ಗ) ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರದೀಪ್ ವಾಸ್ಟ್ ಅವರು ಒದಗಿಸಿದ ಸಾಕ್ಷ್ಯದ ಪ್ರಕಾರ ರಾಣೆ ಜೊತೆಗಿದ್ದ ವ್ಯಕ್ತಿಗಳು ಅಧಿಕಾರಿಯ ಮೇಲೆ ಮೀನು ಎಸೆದಿದ್ದಾರೆ. ಆದರೆ ಯಾರು ಎಸೆದಿರುವುದು, ಯಾರು ನೋವುಂಟುಮಾಡಿದ್ದು ಎಂಬುದು ಖಚಿತವಾಗಿಲ್ಲ. ಯಾವುದೇ ವಿಶ್ವಾಸಾರ್ಹ ಪುರಾವೆಗಳು ದಾಖಲಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಆಪಾದಿತ ಘಟನೆಯ ವೀಡಿಯೊ ಕ್ಲಿಪ್ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ನಂತರ ರಾಣೆ ಮತ್ತು ಇತರರನ್ನು ಬಂಧಿಸಲಾಗಿದ್ದು, ಅದೇ ದಿನ ಅವರಿಗೆ ಜಾಮೀನು ಸಿಕ್ಕಿದೆ.
2014ರಿಂದ ಸಿಂಧುದುರ್ಗ ಜಿಲ್ಲೆಯ ಕಂಕವಲಿಯಲ್ಲಿ ಶಾಸಕರಾಗಿರುವ ರಾಣೆ ಅವರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಸಚಿವರನ್ನಾಗಿ ದೇವೇಂದ್ರ ಫಡ್ನವೀಸ್ ಅವರ ಸಂಪುಟಕ್ಕೆ ಸೇರಿಸಲಾಗಿದೆ.
