ಹಲವು ವಾಹನಗಳಿಗೆ ನಡೆದ ಸರಣಿ ಅಪಘಾತಗಳಲ್ಲಿ ಐವರು ಸಾವನ್ನಪ್ಪಿ, ಒಟ್ಟು ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಓಂಗೋಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಮೊದಲ ಅಪಘಾತವು ಒಂಗೋಲ್ ಪೂರ್ವ ಬೈಪಾಸ್ ಬಳಿ ಬೆಳಿಗ್ಗೆ 4:50ರ ಸುಮಾರಿಗೆ ಸಂಭವಿಸಿದೆ. ಟೈರ್ ಪಂಕ್ಚರ್ ಆದ ಕಾರಣ ಲೇನ್ 1ರಲ್ಲಿ ನಿಂತಿದ್ದ ಟ್ರಕ್‌ಗೆ ಕೋಳಿಯಿದ್ದ ವಾಹನವು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಚಾಲಕ ಮತ್ತು ಇಬ್ಬರು ಕ್ಲೀನರ್‌ಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ ಮಸಲತ್ತು | ರೈಲ್ವೇ ಅಪಘಾತಗಳ ಹಿಂದಿದೆಯೇ ಖಾಸಗೀಕರಣದ ಕರಿ ನೆರಳು?
ಅಪಘಾತದ ಪರಿಣಾಮವಾಗಿ ಒಂದು ಕಿಲೋಮೀಟರ್‌ಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗಿದೆ. ಸ್ವಲ್ಪ ಸಮಯದ ನಂತರ ವಾಹನವೊಂದು ಕೋಳಿಯಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದಲ್ಲದೆ, ಸಂಚಾರದಟ್ಟಣೆ ವೇಳೆ ಅಮರಾವತಿಯಿಂದ ತಿರುಪತಿಗೆ ಹೋಗುತ್ತಿದ್ದ ಆರು ಪ್ರಯಾಣಿಕರಿದ್ದ ಕಾರು ನಿಂತಿದ್ದ ಇನ್ನೊಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಇನ್ನೊಂದು ಟ್ರಕ್ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಎರಡು ಬಾರಿ ವಾಹನಗಳ ನಡುವೆ ಅಪಘಾತ ನಡೆದಿದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ್, “ಈ ಸಂಪೂರ್ಣ ಘಟನೆ 15-20 ನಿಮಿಷಗಳಲ್ಲಿ ನಡೆದಿದೆ. ಟ್ರಕ್ ಚಾಲಕರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದಾರೆ ಎಂಬ ಅನುಮಾನವಿದೆ. ರಸ್ತೆಯಲ್ಲಿ ಸರಿಯಾದ ಬೆಳಕು, ಲೇನ್ ಗುರುತುಗಳಿಲ್ಲ” ಎಂದು ತಿಳಿಸಿದ್ದಾರೆ.
ಸದ್ಯ ಟ್ರಕ್ ಚಾಲಕರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
