ಪದೇ ಪದೆ ಕಲಾಪಕ್ಕೆ ಅಡ್ಡಿಯುಂಟು ಮಾಡಿದ ಅಶಿಸ್ತಿನ ಆರೋಪದ ಮೇಲೆ ಕಾಂಗ್ರೆಸ್, ಡಿಎಂಕೆ ಸೇರಿ ಒಟ್ಟು 14 ಲೋಕಸಭಾ ಸದಸ್ಯರನ್ನು ಅಮಾನತುಗೊಳಿಸಲಾಗಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಸಂಸದರಾದ ಟಿ ಎನ್ ಪ್ರತಾಪನ್, ಡೀನ್ ಕುರಿಯಾಕೋಸ್, ಎಸ್ ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಹೈಬಿ ಈಡನ್ ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಮಂಡಿಸಿದರು.
ವಿರೋಧ ಪಕ್ಷದ ಸದಸ್ಯರ ನಿರಂತರ ಪ್ರತಿಭಟನೆಯ ನಡುವೆ ಲೋಕಸಭಾ ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು.
ಮಧ್ಯಾಹ್ನ 3 ಗಂಟೆಗೆ ಕಲಾಪ ಶುರುವಾದಗ ಮತ್ತೆ ವಿಪಕ್ಷ ಸಂಸದರು ಪ್ರತಿಭಟನೆ ನಡೆಸಿದರು.
ಈ ಹಿನ್ನಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪುನಃ ಪ್ರತಿಪಕ್ಷದ ಸಂಸದರಾದ ವೇಗಿ ಶ್ರೀಕಂಠನ್, ಬೆನ್ನಿ ಬೆಹನನ್, ಮೊಹಮ್ಮದ್ ಜಾವೇದ್, ಪಿಆರ್ ನಟರಾಜನ್, ಕನಿಮೋಳಿ, ಕೆ ಸುಬ್ರಮಣ್ಯಂ, ಎಸ್‌ಆರ್ ಪಾರ್ಥಿಬನ್, ಎಸ್ ವೆಂಕಟೇಶನ್ ಮತ್ತು ಮಾಣಿಕ್ಕಂ ಟ್ಯಾಗೋರ್ ಅವರನ್ನು ಅಶಿಸ್ತಿನ ವರ್ತನೆಗಾಗಿ ಅಮಾನತುಗೊಳಿಸಿದರು. ಈ ಪ್ರಕ್ರಿಯೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಲೋಕಸಭೆಯನ್ನು ನಾಳೆಗೆ(ಡಿ.15) ಮುಂದೂಡಲಾಗಿದೆ
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಳಜಗಳದಲ್ಲಿ ಬಸವಳಿದ ಬಿಜೆಪಿ; ಕರ್ನಾಟಕಕ್ಕೆ ಬೇಕು ಸಮರ್ಥ ವಿರೋಧ ಪಕ್ಷ
ಇದಕ್ಕೂ ಮೊದಲು ಬೆಳಗಿನ ಕಲಾಪದಲ್ಲಿ ಟಿಎಂಸಿಯ ಸದಸ್ಯ ಡೆರೆಕ್ ಓ ಬ್ರಿಯಾನ್ ಅವರನ್ನು ಒಟ್ಟಾರೆ ಅಶಿಸ್ತಿನ ವರ್ತನೆಗಾಗಿ ನಿಯಮ 256 ರ ಅಡಿಯಲ್ಲಿ ರಾಜ್ಯಸಭೆಯಿಂದ ಅಮಾನತುಗೊಳಿಸಲಾಯಿತು.
ಸದನದ ನಾಯಕ ಪಿಯೂಷ್ ಗೋಯಲ್ ಅವರು ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆಯ ನಡುವೆಯೇ ಈ ಪ್ರಸ್ತಾಪವನ್ನು ಅಂಗೀಕರಿಸಿದರು.
ನಿನ್ನೆ (ಡಿ.13) ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗ ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ಅಪರಿಚಿತರು ಜಿಗಿದು ಭದ್ರತಾ ಲೋಪ ಉಂಟಾದ ಕಾರಣ 8 ಭದ್ರತಾ ಸಿಬ್ಬಂದಿಯನ್ನು ಭದ್ರತಾ ಉಲ್ಲಂಘನೆಯಡಿಯಲ್ಲಿ ಅಮಾನತುಗೊಳಿಸಲಾಗಿದೆ.