ಮಾಟಮಂತ್ರ ಮಾಡಿರುವ ಶಂಕೆಯಿಂದ ಒಂದೇ ಕುಟುಂಬದ ಐವರ ಸಜೀವ ದಹನ ಮಾಡಿರುವ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಡಿಐಜಿ(ಪೂರ್ಣಿಯಾ) ಪ್ರಮೋದ್ ಕುಮಾರ್ ಮಂಡಲ್, “ಟೆಟ್ಮಾ ಗ್ರಾಮದ ಒಂದು ಕುಟುಂಬದ ಐವರ ಹತ್ಯೆ ನಡೆದಿದೆ. ಮಾಟಮಂತ್ರ ಮಾಡುತ್ತಿದ್ದರು ಎಂಬ ಶಂಕೆಯಿಂದ ಸ್ಥಳೀಯರು ಈ ಕುಟುಂಬದ ಸದಸ್ಯ ಮೇಲೆ ಹಲ್ಲೆ ನಡೆಸಿ ಪೊದೆಯಲ್ಲಿ ಸಜೀವ ದಹನ ಮಾಡಿರುವ ಶಂಕೆಯಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ವೃದ್ಧೆಗೆ ಬಲವಂತವಾಗಿ ಮೂತ್ರ ಕುಡಿಸಿ ವಿಕೃತಿ ಮೆರೆದ ಗ್ರಾಮಸ್ಥರು
ಪೊಲೀಸರ ಪ್ರಕಾರ, ಸದರ್ ಉಪವಿಭಾಗದ ವ್ಯಾಪ್ತಿಯ ಟೆಟ್ಮಾ ಗ್ರಾಮದಲ್ಲಿ ಭಾನುವಾರ ರಾತ್ರಿ ಕೊಲೆಗಳು ನಡೆದಿವೆ. ಸೋಮವಾರ ಮುಂಜಾನೆ ಸ್ಥಳೀಯ ಪೊಲೀಸರಿಗೆ ಈ ಕುಟುಂಬದ 16 ವರ್ಷದ ಸೋನು ಕುಮಾರ್ ಎಂಬ ಬಾಲಕ ಕರೆ ಮಾಡಿ ವಿಷಯ ತಿಳಿಸಿದ್ದು, ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮಗುವಿನ ಕೊಲೆಯಿಂದಾಗಿ ಈ ದಾಳಿ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ರಾಮ್‌ದೇವ್ ಒರಾನ್ ಎಂಬವರ ಮಗು ಮೂರು ದಿನಗಳ ಹಿಂದೆ ಮೃತಪಟ್ಟಿದ್ದು, ಸೋನು ಕುಮಾರ್‌ನ ಕುಟುಂಬಸ್ಥರು ಮಾಟಮಂತ್ರ ಮಾಡಿ ಮಗುವನ್ನು ಬಲಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಆರೋಪದಿಂದಾಗಿ ಮಗುವಿನ ಕುಟುಂಬಸ್ಥರು ಮತ್ತು ಸ್ಥಳೀಯರು ಸೋನು ಕುಮಾರ್‌ನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿ ಸಜೀವ ದಹನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
