ಎದುರಾಳಿ ಗುಂಪೊಂದು ಅಲೆಮಾರಿ ಕುಟುಂಬದ ಮೂವರು ಮಹಿಳೆಯರು ಸೇರಿದಂತೆ ಐವರನ್ನು ಬರ್ಬರವಾಗಿ ಹತ್ಯೆ ಮಾಡಿ, ಮತ್ತೆ ಐದು ಮಂದಿಯನ್ನು ಅಪಹರಣ ಮಾಡಿರುವ ಘಟನೆ ಮಂಗಳವಾರ ರಾತ್ರಿ ಒಡಿಶಾದ ಸುಂದರ್‌ಗಢ ಜಿಲ್ಲೆಯ ಸದರ್ ಪೊಲೀಸ್ ವ್ಯಾಪ್ತಿಯ ಕರಮ್‌ಡಿಹಿ ಗ್ರಾಮದ ಬಳಿ ನಡೆದಿದೆ.
ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ. ನಾಲ್ವರು ಮಕ್ಕಳು ಮತ್ತು ಓರ್ವ ಮಹಿಳೆಯನ್ನು ಅಪಹರಣ ಮಾಡಲಾಗಿದೆ. ಇತರ ನಾಲ್ಕು ಮಕ್ಕಳಿಗೆ ಮತ್ತು ಕುಟುಂಬದ ನಾಲ್ವವರು ಪುರುಷರಿಗೆ ಗಾಯವಾಗಿದೆ. ಎದುರಾಳಿ ತಂಡ ದಾಳಿ ನಡೆಸಿದ ವೇಳೆ ಅಲೆಮಾರಿ ಕುಟುಂಬ ತಂಗಿದ್ದ ಟೆಂಟ್‌ನಲ್ಲಿ ಸುಮಾರು 20 ಮಂದಿ ಇದ್ದರು ಎಂದು ವರದಿಯಾಗಿದೆ.
ಸದ್ಯ ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಹಾಗೆಯೇ ಅಪಹರಣಕ್ಕೊಳಗಾದವರ ರಕ್ಷಣೆಗೆ ಭಾರೀ ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೀದರ್ | ಗಾಂಧಿ, ಶಾಸ್ತ್ರಿ ಜಯಂತಿ ಆಚರಣೆ; ಮೂಲಸೌಕರ್ಯ ಒದಗಿಸಲು ಅಲೆಮಾರಿಗಳ ಆಗ್ರಹ
ಘಟನೆಯ ಸ್ವಲ್ಪ ಸಮಯದ ನಂತರ ಪೊಲೀಸ್ ಡಿಐಜಿ (ಪಶ್ಚಿಮ ಶ್ರೇಣಿ) ಬಿರ್ಜೇಶ್ ಕುಮಾರ್ ರೈ ಮತ್ತು ಸುಂದರ್‌ಗಢ ಎಸ್‌ಪಿ ಪ್ರತ್ಯೂಷ್ ದಿವಾಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಹಾಗೆಯೇ ಬುಧವಾರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಗಾಯಾಳುಗಳಲ್ಲಿ ಒಬ್ಬರಾದ ಅವಿನಾಶ್ ಪವಾರ್ ನೀಡಿದ ದೂರಿನ ಪ್ರಕಾರ ರಾತ್ರಿ ಎಲ್ಲರು ನಿದ್ರಿಸುತ್ತಿದ್ದಾಗ ದಾಳಿ ನಡೆದಿದೆ. ವಿವಾಹೇತರ ಸಂಬಂಧವೇ ಈ ದಾಳಿಗೆ ಕಾರಣ ಎಂದು ಪವಾರ್ ಪೊಲೀಸರಿಗೆ ತಿಳಿಸಿದ್ದಾರೆ. ಹಾಗೆಯೇ ಈ ಅಪರಾಧದಲ್ಲಿ ತಮ್ಮ ಸೋದರ ಮಾವ ಭಾಗಿಯಾಗಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಅವಿನಾಶ್ ಪವಾರ್ ಅವರ ಎರಡನೇ ಪತ್ನಿ, ಇಬ್ಬರು ಮಕ್ಕಳು ಮತ್ತು ಕುಟುಂಬದ ಇನ್ನಿಬ್ಬರು ಮಕ್ಕಳ ಅಪಹರಣ ನಡೆದಿದೆ ಎಂದು ವರದಿ ಉಲ್ಲೇಖಿಸಿದೆ.
