ಭಾರತೀಯ ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಆಪರೇಷನ್ ಸಿಂಧೂರ ದಾಳಿಯಲ್ಲಿ ಐವರು ‘ಮೋಸ್ಟ್ ವಾಂಟೆಂಡ್’ ಉಗ್ರರ ಹತ್ಯೆಯಾಗಿದೆ. ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್‌ನ ಸೋದರ ಮಾವ ಹಫೀಜ್ ಮುಹಮ್ಮದ್ ಜಮೀಲ್ ಮತ್ತು ಮೊಹಮ್ಮದ್ ಯೂಸುಫ್ ಅಜರ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿ 26 ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಟಿಆರ್ಎಫ್ ಹೊತ್ತುಕೊಂಡಿತ್ತು. ಈ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರವನ್ನು ನಡೆಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಜೈಶ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ.
ಇದನ್ನು ಓದಿದ್ದೀರಾ? ಭಾರತ ದಾಳಿ; ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಕುಟುಂಬ, ಸಹಚರರ ಹತ್ಯೆ
ಒಂಬತ್ತು ತಾಣಗಳಲ್ಲಿ, ಐದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ(ಮುಜಫರಾಬಾದ್ ಮತ್ತು ಕೋಟ್ಲಿಯಲ್ಲಿ ತಲಾ ಎರಡು ತಾಣಗಳು ಮತ್ತು ಭಿಂಬರ್‌ನಲ್ಲಿ ಒಂದು ಸ್ಥಳಗಳು), ನಾಲ್ಕು ಪಾಕಿಸ್ತಾನದಲ್ಲಿ (ಸಿಯಾಲ್‌ಕೋಟ್‌ನಲ್ಲಿ ಎರಡು, ಮುರಿಡ್ಕೆ ಮತ್ತು ಬಹವಾಲ್‌ಪುರದಲ್ಲಿ ತಲಾ ಒಂದು) ಇದ್ದವು. ಈ ದಾಳಿಯಲ್ಲಿ ಐವರು ‘ಮೋಸ್ಟ್ ವಾಂಟೆಂಡ್’ ಉಗ್ರರ ಹತ್ಯೆ ಮಾಡಲಾಗಿದೆ.
- ಲಷ್ಕರ್-ಎ-ತೈಬಾಗೆ ಸೇರಿದ ಮುದಾಸರ್ ಖಾದಿಯಾನ್ ಖಾಸ್ ಯಾನೆ ಮುದಾಸರ್ ಯಾನೆ ಅಬು ಜುಂದಾಲ್ ಹತ್ಯೆಯಾಗಿದೆ. ಈತ ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾದ ಉಸ್ತುವಾರಿ ವಹಿಸಿದ್ದ.
- ಜೆಇಎಂಗೆ ಸೇರಿದ ಹಫೀಜ್ ಮುಹಮ್ಮದ್ ಜಮೀಲ್ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಅವರ ಹಿರಿಯ ಸೋದರ ಮಾವ. ಬಹಾವಲ್ಪುರದಲ್ಲಿ ಮರ್ಕಜ್ ಸುಭಾನ್ ಅಲ್ಲಾಹ್‌ನ ಉಸ್ತುವಾರಿ ವಹಿಸಿದ್ದ ಮತ್ತು ಜೆಇಎಂಗೆ ನಿಧಿಸಂಗ್ರಹಣೆಯಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ.
- ಜೆಇಎಂಗೆ ಸೇರಿದ ಮೊಹಮ್ಮದ್ ಯೂಸುಫ್ ಅಜರ್ ಯಾನೆ ಉಸ್ತಾದ್ ಜಿ ಯಾನೆ ಮೊಹಮ್ಮದ್ ಸಲೀಮ್ ಯಾನೆ ಘೋಸಿ ಸಹಾಬ್, ಮಸೂದ್ ಅಜರ್ ಸೋದರ ಮಾವ ಮತ್ತು ಭಯೋತ್ಪಾದಕ ಸಂಘಟನೆಗೆ ಶಸ್ತ್ರಾಸ್ತ್ರ ತರಬೇತಿಯನ್ನು ನಿರ್ವಹಿಸಿದ್ದ. ಐಸಿ-814 ವಿಮಾನ ಅಪಹರಣ ಪ್ರಕರಣದಲ್ಲಿ ಮೋಸ್ಟ್ ವಾಂಟೆಂಡ್ ಆರೋಪಿಯಾಗಿದ್ದನು. ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
- ಲಷ್ಕರ್-ಎ-ತೈಬಾ ಜೊತೆ ಸಂಬಂಧ ಹೊಂದಿರುವ ಖಾಲಿದ್ ಯಾನೆ ಅಬು ಆಕಾಶ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದಾನೆ. ಈತ ಅಫ್ಘಾನಿಸ್ತಾನದಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡುವುದರಲ್ಲಿ ತೊಡಗಿದ್ದನು ಎಂದು ಹೇಳಲಾಗಿದೆ.
- ಜೆಇಎಂ ಜೊತೆ ಸಂಬಂಧ ಹೊಂದಿರುವ ಮೊಹಮ್ಮದ್ ಹಸನ್ ಖಾನ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜೆಇಎಂನ ಕಾರ್ಯಾಚರಣಾ ಕಮಾಂಡರ್ ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿಯ ಪುತ್ರ ಎಂದು ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿಯೂ ಈತ ಪ್ರಮುಖ ಪಾತ್ರ ವಹಿಸಿದ್ದನ್ನು ಎನ್ನಲಾಗಿದೆ.
