ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಗಳು ಪ್ರತ್ಯೇಕ ಎರಡು ಎನ್‌ಕೌಂಟರ್ ನಡೆಸಿ ಐವರು ಮಾವೋವಾದಿಗಳ ಹತ್ಯೆ ಮಾಡಿದೆ.
ಕಳೆದ ಮೂರು ದಿನಗಳಲ್ಲಿ ಮಾವೋವಾದಿ ನಾಯಕರುಗಳಾದ ಸುಧಾಕರ್ ಮತ್ತು ಭಾಸ್ಕರ್ ಸೇರಿದಂತೆ ಒಟ್ಟು ಏಳು ಮಂದಿ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಮೇ 14ರಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವರದಿ ಪ್ರಕಾರ 2025ರ ನಾಲ್ಕು ತಿಂಗಳ ಅವಧಿಯಲ್ಲೇ ಸುಮಾರು 197 ಮಾವೋವಾದಿಗಳ ಹತ್ಯೆ ಮಾಡಲಾಗಿದೆ. ‘ಇದರಲ್ಲಿ ಆದಿವಾಸಿಗಳೂ ಸೇರಿದ್ದಾರೆ. ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಸ್ಥಳೀಯರ ಹತ್ಯೆಯೂ ನಡೆದಿದೆ’ ಎಂಬ ಆರೋಪಗಳೂ ಇವೆ.
ಇದನ್ನು ಓದಿದ್ದೀರಾ? ಛತ್ತೀಸ್‌ಗಢ | ಎನ್‌ಕೌಂಟರ್; ಎಂಟು ನಕ್ಸಲರು ಹತ
ಇತ್ತೀಚಿನ ಕಾರ್ಯಾಚರಣೆ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ಏಳು ಮಾವೋವಾದಿಗಳ ಶವವನ್ನು ವಶಕ್ಕೆ ಪಡೆದಿದೆ” ಎಂದಿದ್ದಾರೆ.
ಮಾವೋವಾದಿ ನಾಯಕ ಸುಧಾಕರ್, ತೆಲಂಗಾಣ ರಾಜ್ಯ ಸಮಿತಿ ಸದಸ್ಯ ಬಂಡಿ ಪ್ರಕಾಶ್, ದಂಡಕಾರಣ್ಯ ವಿಶೇಷ ವಲಯ ಸಮಿತಿ(DKSZC) ಸದಸ್ಯ ಪಪ್ಪಾ ರಾವ್ ಇರುವ ಮಾಹಿತಿ ಆಧಾರದಲ್ಲಿ ಜೂನ್ 4ರಂದು ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ(ಎಸ್‌ಟಿಎಫ್), ಜಿಲ್ಲಾ ಮೀಸಲು ಪಡೆ(ಡಿಆರ್‌ಜಿ), ಸಿಆರ್‌ಪಿಎಫ್‌ನ ವಿಶೇಷ ಘಟಕ CoBRAದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಹತ್ಯೆಗೀಡಾದ ಐವರು ಮಾವೋವಾದಿಗಳ ಗುರುತು ಪತ್ತೆಯಾಗಿಲ್ಲ. ಈ ಪೈಕಿ ಇಬ್ಬರು ಮಹಿಳೆಯರು. ಕಾರ್ಯಾಚರಣೆ ವೇಳೆ ಎರಡು ಎಕೆ-47 ರೈಫಲ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಮೇ 21ರಂದು ನಿಷೇಧಿತ ಸಿಪಿಐ(ಮಾವೋವಾದಿ) ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು(70) ಅವರ ಎನ್‌ಕೌಂಟರ್ ಮಾಡಲಾಗಿದೆ.
ಮಾವೋವಾದಿಗಳ ಹತ್ಯೆ ಹೆಚ್ಚಾಗುತ್ತಿದ್ದಂತೆ 2024ರಲ್ಲಿ 928 ನಾಯಕರು ಮುಖ್ಯವಾಹಿನಿಗೆ ಬಂದಿದ್ದಾರೆ. 2025ರಲ್ಲಿ ಈವರೆಗೆ 718 ಮಾವೋವಾದಿಗಳು ಮುಖ್ಯವಾಹಿನಿಗೆ ಬಂದಿದ್ದಾರೆ.
