ಅಕ್ಕಿ ಗಿರಣಿಯಲ್ಲಿ ಹೊರಸೂಸಿದ ಹೊಗೆಯನ್ನು ಉಸಿರಾಡಿದ ಪರಿಣಾಮ ಐವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದೆ.
ವಿಷಾನಿಲವನ್ನು ಉಸಿರಾಡಿದ ನಂತರ ಹಲವು ಕಾರ್ಮಿಕರು ಮೂರ್ಛೆ ಹೋಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿಮ, ಐವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಬಹ್ರೈಚ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಮಾನಂದ ಪ್ರಸಾದ್ ಕುಶ್ವಾಹ ಪಿಟಿಐಗೆ ತಿಳಿಸಿದ್ದಾರೆ.
ಬಹ್ರೈಚ್‌ನಲ್ಲಿರುವ ರಾಜ್‌ಗರಿಯಾ ಅಕ್ಕಿ ಗಿರಣಿಯಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಹಲವಾರು ಕಾರ್ಮಿಕರು ಶುಕ್ರವಾರ ಬೆಳಿಗ್ಗೆ ಕೆಲಸಕ್ಕಾಗಿ ಗಿರಣಿಗೆ ಬಂದಿದ್ದಾರೆ. ಈ ವೇಳೆ, ಡ್ರೈಯರ್‌ನಿಂದ ಹೊರಹೊಮ್ಮುತ್ತಿದ್ದ ಹೊಗೆಯನ್ನು ಪರಿಶೀಲಿಸಲು ಹೋಗಿದ್ದಾರೆ. ಆದರೆ, ಇಡೀ ಗಿರಣಿಯನ್ನು ಹೊಗೆ ಆವರಿಸಿದ್ದರಿಂದ ಎಲ್ಲ ಕಾರ್ಮಿಕರು ಮೂರ್ಛೆ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ತಂಡವು ಧಾವಿಸಿದ್ದು, ಮೂರ್ಛೆ ಹೋಗಿದ್ದ ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಿತು. ಆದರೂ, ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೂವರು ಕಾರ್ಮಿಕರ ಆರೋಗ್ಯ ಸುಧಾರಿಸುತ್ತದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ರಮಾನಂದ ಪ್ರಸಾದ್ ತಿಳಿಸಿದ್ದಾರೆ.
ಘಟನೆಗೆ ಕಾರಣವಾದ ವಿಷಯಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.