ಉತ್ತರಾಖಂಡದಂತಹ ಪರ್ವತ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳನ್ನು ಈಗ ನಡೆದಿರುವ ಮೇಘಸ್ಫೋಟ ಸ್ಪಷ್ಟಪಡಿಸಿದೆ. ಇಂತಹ ತೀವ್ರ ಹವಾಮಾನ ಘಟನೆಗಳು ಈ ಪ್ರದೇಶದಲ್ಲಿ ಸಾಮಾನ್ಯವಾಗುತ್ತಿವೆ. ಹಾಗಾಗಿ ಸ್ಥಳೀಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ರಕ್ಷಣಾ ಕಾರ್ಯಾಚರಣೆಗಳ ಜತೆಗೆ ದೀರ್ಘಕಾಲೀನ ತಡೆಗಟ್ಟುವ ಕ್ರಮಗಳ ಮೇಲೆ ಗಮನಹರಿಸಬೇಕಾಗಿದೆ.
ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ ಆಗಸ್ಟ್ 5ರ ಮಂಗಳವಾರದ ಮಧ್ಯಾಹ್ನ ಮೇಘಸ್ಫೋಟ ಉಂಟಾಗಿದೆ. ಬೆಟ್ಟದಿಂದ ಸುನಾಮಿಯಂತೆ ಹರಿದುಬಂದ ನೀರು ಗಂಗಾ ನದಿಯಲ್ಲಿ ಭೀಕರ ಪ್ರವಾಹಕ್ಕೆ ಕಾರಣವಾಗಿದೆ. ಇದರಿಂದ ನಾಲ್ಕು ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇನ್ನು ಇವರ ಗುರುತು ಸಿಗದಿರುವ ಕಾರಣ ಕೊಚ್ಚಿಕೊಂಡು ಹೋಗಿರಬಹುದೆಂಬ ಶಂಕೆಯಿದೆ. ರಕ್ಷಣಾ ತಂಡಗಳು ಈವರೆಗೆ ಒಂದು ಶವವನ್ನು ಪತ್ತೆಹಚ್ಚಿದೆ.
ಸಮುದ್ರ ಮಟ್ಟದಿಂದ 8,600 ಅಡಿ ಎತ್ತರದಲ್ಲಿರುವ ಈ ಗ್ರಾಮದ ಜನವಸತಿ ಪ್ರದೇಶದಲ್ಲಿ ಕೆಸರುಮಯ ನೀರಿನ ಭಾರೀ ಅಲೆಗಳು ಉಂಟಾದ ರಭಸಕ್ಕೆ ಹೋಟೆಲ್‌ಗಳು, ವಸತಿ ಕಟ್ಟಡಗಳು ಮತ್ತು ನೂರಾರು ಜನರು ಕೊಚ್ಚಿ ಹೋಗಿದ್ದಾರೆ. ಈ ದುರಂತವು ಉತ್ತರಾಖಂಡದಂತಹ ಪರ್ವತೀಯ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾಗುವ ತೀವ್ರ ಸವಾಲುಗಳನ್ನು ಎತ್ತಿ ತೋರಿಸುತ್ತದೆ.
ಉತ್ತರಕಾಶಿಯ ಧರಾಲಿಯಲ್ಲಿ ಬುಧವಾರವೂ ಭಾರೀ ಮಳೆ ಮುಂದುವರೆದಿದ್ದು, ರಕ್ಷಣಾ ತಂಡಗಳು ಭಗ್ನಾವಶೇಷಗಳ ನಡುವೆ ಸಂತ್ರಸ್ತರಿಗಾಗಿ ಶೋಧ ಕಾರ್ಯವನ್ನು ಮತ್ತೆ ಪ್ರಾರಂಭಿಸಿವೆ. ಭಾರತೀಯ ಹವಾಮಾನ ಇಲಾಖೆ(IMD) ಉತ್ತರಾಖಂಡ ರಾಜ್ಯಾದ್ಯಂತ ವಿಶೇಷವಾಗಿ ಬೆಟ್ಟಗಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.
ಉತ್ತರ ಭಾರತ ಭಾಗದಲ್ಲಿ ಕಂಡುಬರುವ ಹಿಮಾಲಯದ ಉತ್ತರಾಖಂಡ ರಾಜ್ಯದ ಧರಾಲಿ ಗ್ರಾಮದಲ್ಲಿ ಸಂಭವಿಸಿದ ಭೀಕರ ಪ್ರವಾಹದ ದುರಂತ ಪರಿಣಾಮವು ಇನ್ನೂ ಗಂಭೀರವಾಗಬಹುದೆಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕೆಸರುಮಯ ಭೀಕರ ಅಲೆಯು ಬಹುಮಹಡಿ ಕಟ್ಟಡಗಳನ್ನು ಕೊಚ್ಚಿಕೊಂಡು ಹೋಗುವ ದೃಶ್ಯಗಳು ಕಂಡುಬಂದಿದ್ದು, ಹಲವಾರು ಜನರು ಓಡಿಹೋಗಲು ಪ್ರಯತ್ನಿಸುತ್ತಿರುವಾಗ ಭಗ್ನಾವಶೇಷಗಳ ಅಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಗ್ರಾಮದ ಒಂದು ವಿಶಾಲವಾದ ಭಾಗವು ಆಳವಾದ ಕೆಸರುಮಣ್ಣಿನಿಂದ ಆವೃತವಾಗಿದ್ದು, ಕೆಲವು ಕಡೆ ಮನೆಗಳ ಮೇಲ್ಛಾವಣಿಗಳವರೆಗೂ ಕೆಸರು ತುಂಬಿಕೊಂಡಿದೆ.
ಉತ್ತರಕಾಶಿ ಜಿಲ್ಲಾಧಿಕಾರಿ ಪ್ರಶಾಂತ್ ಆರ್ಯ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ಈಗಾಗಲೇ ನಾಲ್ಕು ಜನರು ಮೃತಪಟ್ಟಿದ್ದಾರೆ. ಹಲವಾರು ಮಂದಿಯನ್ನು ರಕ್ಷಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಹರ್ಸಿಲ್ ಬಳಿಯ ಕೀರ್‌ಗಡ್ ಪ್ರದೇಶದ ಧರಾಲಿ ಗ್ರಾಮದಲ್ಲಿ ಭಾರೀ ಕೆಸರುಯುಕ್ತ ನೀರು ಧುಮ್ಮಿಕ್ಕಿತು. ಇದರಿಂದ ಗ್ರಾಮದ ಮೂಲಕ ಭಗ್ನಾವಶೇಷಗಳು ಮತ್ತು ಆಕಸ್ಮಿಕ ನೀರಿನ ತೀವ್ರ ಹರಿವು ಉಂಟಾಯಿತು” ಎಂದು ಭಾರತೀಯ ಸೇನೆ ತನ್ನ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
“ಧರಾಲಿ ಹರ್ಸಿಲ್ ನಿಂದ 2 ಕಿ.ಮೀ ದೂರದಲ್ಲಿರುವ ಬೇಸಿಗೆಯ ಪ್ರವಾಸಿ ತಾಣವಾಗಿದ್ದು, ಇದು ಭಾರತೀಯ ಸೇನಾ ನೆಲೆ ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಶಿಬಿರವನ್ನು ಹೊಂದಿದೆ. ಸೇನಾ ನೆಲೆಯಲ್ಲಿ ಬೀಡುಬಿಟ್ಟಿರುವ ಕನಿಷ್ಠ 10 ಮಂದಿ ಸೈನಿಕರೂ ಕೂಡ ಕಾಣೆಯಾಗಿದ್ದಾರೆ. ಕೆಸರುಯುಕ್ತ ಪ್ರವಾಹದಿಂದ ಭಾಗೀರಥಿ ನದಿಯ ಒಂದು ಭಾಗ ಕೆಸರಿನಿಂದ ಆವೃತವಾಗಿದೆ. ಇದು ಕೆಳಕ್ಕೆ ಹರಿಯುವಾಗ ಗಂಗಾ ನದಿಯಾಗುತ್ತ ಕೃತಕ ಸರೋವರದಂತಾಗಿದೆ. ಇದರಿಂದ ಸರ್ಕಾರಿ ಹೆಲಿಪ್ಯಾಡ್ ಸೇರಿದಂತೆ ದೊಡ್ಡ ಪ್ರದೇಶಗಳನ್ನು ಮುಳುಗಿಸಿದೆ. ಇದೀಗ ಈ ನೀರನ್ನು ಬೇಗನೆ ಹೊರಹಾಕದಿದ್ದರೆ, ಕೆಳಭಾಗದ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಗಂಭೀರ ಅಪಾಯ ಉಂಟಾಗಬಹುದು” ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
“ರಕ್ಷಣಾ ತಂಡಗಳು ಪ್ರವಾಹದಂತ ತುರ್ತುಸ್ಥಿತಿಯಲ್ಲಿ ಉತ್ತರಾಖಂಡಕ್ಕೆ ತೆರಳಿವೆ. ಪ್ರಾಣಗಳನ್ನು ಉಳಿಸಲು ಮತ್ತು ಸಂತ್ರಸ್ತರಿಗೆ ನೆರವು ಒದಗಿಸಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಸೇನೆ ಮತ್ತು ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ತಲುಪಿದ್ದು, ಕೆಸರು ಮತ್ತು ಭಗ್ನಾವಶೇಷಗಳಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತಿವೆ” ಎಂದು ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಕೇಂದ್ರದಿಂದ ಸಹಾಯದ ಭರವಸೆ: ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಖ್ಯಮಂತ್ರಿ ಧಾಮಿ ಅವರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕ್ರಮಗಳು
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಸಹಾಯ ಮಾಡಲು ಕೇಂದ್ರ ಸರ್ಕಾರದಿಂದ ಮೂರು ಹೆಲಿಕಾಪ್ಟರ್‌ಗಳನ್ನು ಕೋರಿದೆ. ಏಕೆಂದರೆ ಈ ದೂರದ ಪರ್ವತೀಯ ಪ್ರದೇಶಕ್ಕೆ ತಲುಪುವುದು ಸವಾಲಿನ ಕೆಲಸವಾಗಿದೆ. ಸಂತ್ರಸ್ತರಲ್ಲಿ ಹೆಚ್ಚಿನವರು ಸುರಕ್ಷಿತ ಸ್ಥಳದಲ್ಲಿ ನಡೆಯುತ್ತಿದ್ದ ಮೇಳದಲ್ಲಿದ್ದರು. ಇದು ಒಂದು ರೀತಿಯಲ್ಲಿ ಅದೃಷ್ಟವೇ ಸರಿ ಎಂದು ವಿಪತ್ತು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯು ಈ ಪ್ರದೇಶಕ್ಕೆ ರೆಡ್ ಅಲರ್ಟ್ ಜಾರಿಗೊಳಿಸಿದ್ದು, ಉತ್ತರಾಖಂಡದ ಕೆಲವು ಭಾಗಗಳಲ್ಲಿ ಸುಮಾರು 21 ಸೆಂ.ಮೀ.(8 ಇಂಚು) ಅತಿಹೆಚ್ಚು ಮಳೆಯನ್ನು ದಾಖಲಿಸಿದೆ. ಇದಲ್ಲದೆ, ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಮತ್ತಷ್ಟು ಭಾರೀ ಮಳೆಯಾಗುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಸೂಚಿಸಿದೆ. ಈ ಕಾರಣದಿಂದ, ಡೆಹರಾಡೂನ್ ಮತ್ತು ಹರಿದ್ವಾರ ನಗರಗಳು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲು ಅಧಿಕಾರಿಗಳು ಸೂಚಿಸಿದ್ದಾರೆ.
ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಾನ್ಸೂನ್ ವೇಳೆ ಉತ್ತರಾಖಂಡದಲ್ಲಿ ಆಗಾಗ್ಗೆ ಮೇಘಸ್ಪೋಟಗಳು ಮತ್ತು ಭೂಕುಸಿತಗಳು ಸಂಭವಿಸುತ್ತವೆ. ಕಿರಿದಾದ ಪ್ರದೇಶಗಳಲ್ಲಿ ಆಕಸ್ಮಿಕವಾಗಿ ಉಂಟಾಗುವ ಮೇಘಸ್ಪೋಟಗಳು ಈ ಪ್ರದೇಶದಲ್ಲಿಯೂ ಸಾಮಾನ್ಯವಾಗಿವೆ. ಇವುಗಳು ತೀವ್ರ ಪ್ರವಾಹ ಮತ್ತು ಭೂಕುಸಿತಗಳಿಗೆ ಕಾರಣವಾಗಿ, ಪರ್ವತ ಪ್ರದೇಶಗಳಲ್ಲಿ ಸಾವಿರಾರು ಜನರನ್ನು ಬಾಧಿಸುತ್ತವೆ.
ಹವಾಮಾನ ಬದಲಾವಣೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಮೇಘಸ್ಫೋಟಗಳು ಹೆಚ್ಚಾಗಿವೆ. ಇದರ ಜತೆಗೆ, ಪರ್ವತ ಪ್ರದೇಶಗಳಲ್ಲಿ ಯೋಜನಾರಹಿತ ಅಭಿವೃದ್ಧಿಯಿಂದಾಗಿ ಇಂತಹ ಚಂಡಮಾರುತಗಳು ಅಪ್ಪಳಿಸಿದ ಸಂದರ್ಭದಲ್ಲಿ ಗಣನೀಯವಾಗಿ ಹಾನಿಯುಂಟಾಗುತ್ತಿರುವುದು ಹೆಚ್ಚಾಗಿದೆ.
2013ರಲ್ಲಿ ಇದೇ ರೀತಿಯ ಮೇಘಸ್ಪೋಟ ಉತ್ತರಾಖಂಡ ರಾಜ್ಯವನ್ನು ತೀವ್ರವಾಗಿ ಬಾಧಿಸಿದ್ದು, ಆಗ 6,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. 4,500 ಗ್ರಾಮಗಳು ಇದರ ಪರಿಣಾಮ ಎದುರಿಸದ್ದವು. 2023ರಲ್ಲಿ ನೇಪಾಳದ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್‌ನ ವರದಿಯ ಪ್ರಕಾರ, ಹಿಂದೂ ಕುಶ್ ಮತ್ತು ಹಿಮಾಲಯನ್ ಪರ್ವತ ಶ್ರೇಣಿಗಳಲ್ಲಿ ಹಿಮನದಿಗಳು ಇತಿಹಾಸದ ಹಿಂದೆಂದಿಗಿಂತಲೂ ವೇಗವಾಗಿ ಕರಗುತ್ತಿವೆ. ಈ ಅಧ್ಯಯನವು ಪ್ರದೇಶದ 2,000ಕ್ಕೂ ಹೆಚ್ಚು ಹಿಮನದಿ ಸರೋವರಗಳಲ್ಲಿ ಕನಿಷ್ಠ 200 ಸರೋವರಗಳು ಉಕ್ಕಿ ಹರಿಯುವ ಅಪಾಯದಲ್ಲಿವೆ” ಎಂಬುದನ್ನು ಕಂಡುಕೊಂಡಿದೆ. ಇದರಿಂದ ಸ್ಥಳೀಯ ಪ್ರದೇಶಗಳಲ್ಲಿ ಭಾರೀ ವಿನಾಶಕ್ಕೆ ಕಾರಣವಾಗಬಹುದು ಎನ್ನಲಾಗಿತ್ತು.
ಇದನ್ನೂ ಓದಿದ್ದೀರಾ? ಉತ್ತರಕಾಶಿಯಲ್ಲಿ ಪ್ರವಾಹ: 100ಕ್ಕೂ ಹೆಚ್ಚು ಮಂದಿ ನಾಪತ್ತೆ
ವಿಶ್ವ ಹವಾಮಾನ ಸಂಸ್ಥೆಯು ಕಳೆದ ವರ್ಷ ಹೇಳಿಕೆಯಲ್ಲಿ, “ಹೆಚ್ಚು ತೀವ್ರವಾಗುತ್ತಿರುವ ಪ್ರವಾಹ ಮತ್ತು ಬರಗಾಲಗಳು, ಹವಾಮಾನ ಬದಲಾವಣೆಯಿಂದಾಗಿ ಗ್ರಹದ ನೀರಿನ ಚಕ್ರವು ಊಹಿಸಲಾಗದಂತೆ ಆಗುತ್ತಿರುವುದು ತೊಂದರೆಯ ಸಂಕೇತ” ಎಂದು ತಿಳಿಸಿದೆ.
ಉತ್ತರಾಖಂಡದಂತಹ ಪರ್ವತ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳನ್ನು ಈಗ ನಡೆದಿರುವ ಮೇಘಸ್ಫೋಟ ಸ್ಪಷ್ಟಪಡಿಸಿದೆ. ಇಂತಹ ತೀವ್ರ ಹವಾಮಾನ ಘಟನೆಗಳು ಈ ಪ್ರದೇಶದಲ್ಲಿ ಸಾಮಾನ್ಯವಾಗುತ್ತಿವೆ. ಹಾಗಾಗಿ ಸ್ಥಳೀಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ರಕ್ಷಣಾ ಕಾರ್ಯಾಚರಣೆಗಳ ಜತೆಗೆ ದೀರ್ಘಕಾಲೀನ ತಡೆಗಟ್ಟುವ ಕ್ರಮಗಳ ಮೇಲೆ ಗಮನಹರಿಸಬೇಕಾಗಿದೆ. ಯೋಜನಾರಹಿತ ಅಭಿವೃದ್ಧಿಯನ್ನು ನಿಯಂತ್ರಿಸುವುದು, ಹಿಮನದಿ ಸರೋವರಗಳ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತ ಮೂಲಸೌಕರ್ಯವನ್ನು ನಿರ್ಮಿಸುವುದು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಸಮುದಾಯಗಳಿಗೆ ತರಬೇತಿ ನೀಡುವಂತಹ ಯೋಜನೆಗಳನ್ನು ಕೈಗೊಂಡರೆ ಈ ರೀತಿಯ ದುರಂತಗಳನ್ನು ಕಡಿಮೆ ಮಾಡಲು ಅತ್ಯಗತ್ಯವಾಗಬಹುದು.