ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇನಲ್ಲಿ ಬೀದಿನಾಯಿ ಕಾಣಿಸಿತೆಂದು ವಿಮಾನವೊಂದು ಬೆಂಗಳೂರಿಗೆ ಮರಳಿರುವ ಘಟನೆ ಸೋಮವಾರ ನಡೆಸಿದೆ. ಈ ಬಗ್ಗೆ ಅಧಿಕಾರಿಯೊಬ್ಬರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಗೋವಾದ ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ದಾಬೋಲಿಮ್ ವಿಮಾನ ನಿಲ್ಧಾಣದ ರನ್‌ವೇಯಲ್ಲಿ ಬೀದಿನಾಯಿ ಕಾಣಿಸಿದೆ. ಹೀಗಾಗಿ, ಬೆಂಗಳೂರಿನಿಂದ ಗೋವಾಗೆ ತೆರಳಿದ್ದ ವಿಸ್ತಾರ ವಿಮಾನದ ಪೈಲಟ್‌ಗೆ ಸ್ವಲ್ಪ ಸಮಯ ಆಗಸದಲ್ಲೇ ಇರುವಂತೆ ಕಂಟ್ರೋಲರ್ ಸೂಚಿಸಿದ್ದಾರೆ. ಆದರೆ, ಪೈಲಟ್ ಬೆಂಗಳೂರಿಗೆ ಮರಳುವುದಕ್ಕೆ ಆದ್ಯತೆ ನೀಡಿದರು. ಬೆಂಗಳೂರಿಗೆ ಮರಳಿದರು ಎಂದು ಗೋವಾ ವಿಮಾನ ನಿಲ್ದಾಣದ ನಿರ್ದೇಶಕ ಎಸ್‌ವಿಟಿ ಧನಂಜಯ ರಾವ್ ತಿಳಿಸಿದ್ದಾರೆ.
“ಕೆಲವೊಮ್ಮೆ ಬೀದಿನಾಯಿಗಳು ರನ್‌ವೇ ಬಂದುಬಿಡುತ್ತವೆ. ಆಗ, ಮೈದಾನದ ಸಿಬ್ಬಂದಿಗಳು ನಾಯಿಯನ್ನು ಓಡಿಸುತ್ತಾರೆ. ಒಂದೂವರೆ ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ಇದೇ ಮೊದಲು ವಿಮಾನ ಹಿಂದಿರುಗಿರುವುದು” ಎಂದು ರಾವ್ ಹೇಳಿದ್ದಾರೆ.
ಬೆಂಗಳೂರಿನಿಂದ 12:55ಕ್ಕೆ ತೆರಳಿದ್ದ ವಿಮಾನ, ಮತ್ತೆ ಮಧ್ಯಾಹ್ನ 3:05ಕ್ಕೆ ಬೆಂಗಳೂರಿಗೆ ಹಿಂದಿರುಗಿದೆ ಎಂದು ವರದಿಯಾಗಿದೆ.
ಆ ಬಗ್ಗೆ ವಿಸ್ತಾರಾ ವಿಮಾನ ಸಂಸ್ಥೆ ಕೂಡ ಟ್ವೀಟ್ ಮಾಡಿದ್ದು, ‘ಗೋವಾ ವಿಮಾನ ನಿಲ್ದಾಣದ ರನ್‌ವೇ ನಿರ್ಬಂಧದ ಕಾರಣದಿಂದ ವಿಮಾನವನ್ನು ಬೆಂಗಳೂರಿಗೆ ತಿರುಗಿಸಲಾಗಿದೆ” ಎಂದು ಹೇಳಿದೆ.