ಕಳೆದ ಎರಡು ದಿನಗಳಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ನಾನಾ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಸಿಲುಕಿದ್ದು, ಈವರೆಗೆ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪ್ರವಾಹ ಸಂಬಂಧ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಸಿಎಂ ಎ ರೇವಂತ್ ರೆಡ್ಡಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಹ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ 26 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ.
ತೆಲಂಗಾಣದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 16 ಜನರು ಪ್ರಾಣ ಕಳೆದುಕೊಂಡಿದ್ದರೆ, ಆಂಧ್ರಪ್ರದೇಶದಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಆಂಧ್ರ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಪ್ರವಾಹ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಪವರ್ ಬೋಟ್‌ಗಳು ಮತ್ತು ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಭಾನುವಾರ ಮನವಿ ಮಾಡಿದ್ದಾರೆ.
ಎರಡೂ ರಾಜ್ಯಗಳಲ್ಲಿ ಒಟ್ಟು ಸುಮಾರು 2,76,000 ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ. ಉಭಯ ರಾಜ್ಯಗಳಿಗೆ ಸಂಚರಿಸುವ 140ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ. ಹಲವು ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ.
ಸೋಮವಾರ ಮತ್ತು ಮುಂದಿನ ದಿನಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಹೈದರಾಬಾದ್ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ತೆಲಂಗಾಣ ರಾಜ್ಯ ಸರ್ಕಾರದ ಪ್ರಕಾರ, ತೆಲಂಗಾಣದಾದ್ಯಂತ 115ಕ್ಕೂ ಹೆಚ್ಚು ಹಳ್ಳಿಗಳಿಗೆ ಹೋಗುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಹಳ್ಳಿಗಳು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದೆ. ಖಮ್ಮಂ, ವಾರಂಗಲ್, ತಿರುಮಲಯಪಾಲೆಂ ಜಿಲ್ಲೆಗಳಲ್ಲಿ ಭಾನುವಾರ 52.2 ಸೆಂ.ಮೀ ಮಳೆಯಾಗಿದೆ.
ಖಮ್ಮಂ ಜಿಲ್ಲೆಯಲ್ಲಿ 30 ವರ್ಷಗಳ ಬಳಿಕ ಮುನ್ನೇರು ನದಿ ಸಂಪೂರ್ಣ ಉಕ್ಕಿ ಹರಿಯುತ್ತಿದೆ. ಹಲವಾರು ಜನರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಅವರ ಮನೆಗಳು ನೀರಿನಲ್ಲಿ ಮುಳುಗಿವೆ.