ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಮೀಪದ ಮಥುರಾ ರಸ್ತೆಯಲ್ಲಿ ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸಲು ಸೂಕ್ತ ಫುಟ್ಪಾತ್ ಮತ್ತು ಜಿಬ್ರಾ ಕ್ರಾಸಿಂಗ್ ವ್ಯವಸ್ಥೆಯನ್ನು ಕಲ್ಪಿಸದಿರುವ ವಿಚಾರವಾಗಿ ದೆಹಲಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಮುಂದಿನ ವಿಚಾರಣೆಯ ದಿನಾಂಕದೊಳಗೆ ಈ ಮೂಲಭೂತ ಸೌಕರ್ಯಗಳನ್ನು ಸರಿಪಡಿಸದಿದ್ದರೆ, ನ್ಯಾಯಮೂರ್ತಿಗಳೇ ಸ್ವತಃ ಹೈಕೋರ್ಟ್ ಮುಖ್ಯ ದ್ವಾರದ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಮಥುರಾ ರಸ್ತೆಯಲ್ಲಿ ಸರಿಯಾದ ಫುಟ್ಪಾತ್ ವ್ಯವಸ್ಥೆ ಇಲ್ಲದೇ ಇರವುದರ ವಿಚಾರವಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆ. ಬಿ. ಪರ್ದಿವಾಲಾ ಮತ್ತು ಕೆ. ವಿ. ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿದೆ. ಈ ವೇಳೆ ಅಡಿಷನಲ್ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ಅವರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಪೀಠ, “ಮುಂದಿನ ವಿಚಾರಣೆಯ ಒಳಗೆ ಕೆಲಸ ಪೂರ್ಣಗೊಳ್ಳದಿದ್ದರೆ ತಾವುಗಳೇ ದೆಹಲಿ ಹೈಕೋರ್ಟ್ ಗೇಟ್ ಬಳಿ ಬಂದು ಕುಳಿತುಕೊಳ್ಳುತ್ತೇವೆ ಮತ್ತು ಕೆಲಸ ಮುಗಿಯುವವರೆಗೆ ಮನೆಗೆ ಹೋಗದೆ, ಧರಣಿ ನಡೆಸುತ್ತೇವೆ” ಎಂದು ಕಠಿಣ ಸಂದೇಶ ರವಾನಿಸಿದೆ.
“ಕೇವಲ ಕಾಗದದ ಮೇಲೆ ಸಮಿತಿಗಳನ್ನು ರಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ನೆಲದ ಮಟ್ಟದಲ್ಲಿ ನೈಜ ಬದಲಾವಣೆ ಮತ್ತು ಕೆಲಸಗಳು ಆಗಬೇಕು. ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ವಿಫಲವಾದರೆ, ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಖುದ್ದಾಗಿ ನ್ಯಾಯಾಲಯಕ್ಕೆ ಕರೆಸಬೇಕಾಗುತ್ತದೆ” ಎಂದೂ ಎಚ್ಚರಿಕೆ ನೀಡಿದೆ.
ಪಾದಚಾರಿಗಳ ಹಕ್ಕುಗಳ ಮಹತ್ವವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, ಈ ಹಿಂದೆ 2026ರ ಜೂನ್ನಲ್ಲಿ ನೀಡಿದ್ದ ಐತಿಹಾಸಿಕ ತೀರ್ಪನ್ನು ನೆನಪಿಸಿದೆ. “ಸುರಕ್ಷಿತವಾದ ಫುಟ್ಪಾತ್ಗಳಲ್ಲಿ ನಡೆದಾಡುವುದು ಸಂವಿಧಾನದ ವಿಧಿ 21ರ ಅಡಿಯಲ್ಲಿ ಬದುಕುವ ಹಕ್ಕು ಮತ್ತು ವಿಧಿ 19(1)(d) ಅಡಿಯಲ್ಲಿ ಸಂಚಾರ ಸ್ವಾತಂತ್ರ್ಯದಡಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ವಾಹನಗಳ ಭರಾಟೆ ಮತ್ತು ಸಂಚಾರಕ್ಕಿಂತ ಪಾದಚಾರಿಗಳ ಸುರಕ್ಷತೆಗೇ ಮೊದಲ ಆದ್ಯತೆ ಸಿಗಬೇಕು” ಎಂದು ಬಲವಾಗಿ ಪ್ರತಿಪಾದಿಸಿದೆ.




