ರಷ್ಯಾದ ತೈಲ ಖರೀದಿಸುವ ರಾಷ್ಟ್ರಗಳ ಮೇಲಿನ ದಿಗ್ಬಂಧನ ಮತ್ತು ಆಮದು ಸುಂಕದ ನಿರ್ಧಾರದ ಕುರಿತು ಅಮೆರಿಕ ಮಹತ್ವದ ಹೇಳಿಕೆ ನೀಡಿದೆ. ಭಾರತದಂತಹ ದೇಶಗಳು ರಾತ್ರೋರಾತ್ರಿ ರಷ್ಯಾದ ಇಂಧನ ಮೂಲಗಳಿಂದ ಸಂಪೂರ್ಣವಾಗಿ ದೂರ ಸರಿಯುವುದು ಅಸಾಧ್ಯ ಎಂಬುದು ವಾಸ್ತವ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸ್ಪಷ್ಟಪಡಿಸಿದ್ದಾರೆ. ಜಾಗತಿಕ ಆರ್ಥಿಕತೆ ಮತ್ತು ಅಮೆರಿಕದ ಆರ್ಥಿಕತೆಯ ಮೇಲೆ ಈ ದಿಗ್ಬಂಧನಗಳು ಮತ್ತು ಸುಂಕಗಳು ಬೀರುವ ಪರಿಣಾಮಗಳನ್ನು ಕೂಲಂಕಷವಾಗಿ ವಿಶ್ಲೇಷಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ 60 ದಿನಗಳ ಕಾಲಾವಕಾಶ ಬಯಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಉಜ್ಬೇಕಿಸ್ತಾನ್ ಮತ್ತು ಭಾರತಕ್ಕೆ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮಾರ್ಕೊ ರೂಬಿಯೊ, “ರಷ್ಯಾ ಮೇಲಿನ ದಿಗ್ಬಂಧನಗಳು ಕೇವಲ ಮಾಸ್ಕೋಗೆ (ರಷ್ಯಾ) ಮಾತ್ರವಲ್ಲದೆ ಭಾರತದಂತಹ ಹಲವಾರು ಪ್ರಮುಖ ದೇಶಗಳ ಮೇಲೂ ಆಮದು ಸುಂಕದ ಪರಿಣಾಮ ಬೀರುತ್ತವೆ. ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಯುಎಸ್-ಇರಾನ್ ಯುದ್ಧ, ಸೌದಿ ಅರೇಬಿಯಾ ಮೇಲಿನ ಹೌತಿ ದಾಳಿ ಹಾಗೂ ಉಕ್ರೇನ್-ರಷ್ಯಾ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯ ಮೇಲೆ ತೀವ್ರ ಒತ್ತಡವಿದ್ದು, ತೈಲ ಬೆಲೆಗಳ ಏರಿಕೆಯ ಮೇಲೂ ಇದು ಪ್ರಭಾವ ಬೀರುತ್ತಿದೆ” ಎಂದು ಅವರು ವಿವರಿಸಿದ್ದಾರೆ.
“ರಷ್ಯಾದ ತೈಲದ ಮೇಲಿನ ಅವಲಂಬನೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿಕೊಳ್ಳುತ್ತಿರುವ ಭಾರತವು ಅಮೆರಿಕದ ಪ್ರಮುಖ ಮಿತ್ರ ಮತ್ತು ಪಾಲುದಾರ ರಾಷ್ಟ್ರವಾಗಿರುವುದರಿಂದ, ಜಾಗತಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲು ಈ ಅಧ್ಯಯನ ಅವಶ್ಯಕವಾಗಿದೆ” ಎಂದಿದ್ದಾರೆ.
ಕಳೆದ ಶುಕ್ರವಾರವಷ್ಟೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರಷ್ಯಾ ಮತ್ತು ಇರಾನ್ ಮೇಲಿನ ದಿಗ್ಬಂಧನ ಕಾಯ್ದೆಯಡಿ ವಿಧಿಸಬಹುದಾಗಿದ್ದ ಸುಂಕ ವಿನಾಯಿತಿಗಳನ್ನು ಘೋಷಿಸಿದ್ದರು. ಉಕ್ರೇನ್ ಪರ ನಿಲುವು ಹೊಂದಿದ್ದ ದಿವಂಗತ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಾಮ್ ಅವರ ಹೆಸರಿನ ಈ ಕಾಯ್ದೆಯು ರಷ್ಯಾದ ತೈಲ ಅಥವಾ ನೈಸರ್ಗಿಕ ಅನಿಲವನ್ನು ಅತಿ ಹೆಚ್ಚು ಖರೀದಿಸುವ ಭಾರತ ಮತ್ತು ಚೀನಾ ಸೇರಿದಂತೆ ಐದು ಪ್ರಮುಖ ರಾಷ್ಟ್ರಗಳ ಮೇಲೆ 100% ಸುಂಕ ವಿಧಿಸಲು ಟ್ರಂಪ್ಗೆ ಅಧಿಕಾರ ನೀಡಿದೆ.
ನವೆಂಬರ್ನಲ್ಲಿ ಮಧ್ಯಂತರ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶೀಯ ಇಂಧನ ಬೆಲೆಗಳನ್ನು ನಿಯಂತ್ರಿಸುವ ಸಲುವಾಗಿ ಅಮೆರಿಕವು ರಷ್ಯಾದಿಂದ ಡೀಸೆಲ್ ಆಮದು ಮಾಡಿಕೊಳ್ಳುವುದಾಗಿ ಘೋಷಿಸಿದ ಬೆನ್ನಲ್ಲೇ ಈ ವಿನಾಯಿತಿ ಹೊರಬಿದ್ದಿದೆ.
2022ರ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಪಾಶ್ಚಾತ್ಯ ರಾಷ್ಟ್ರಗಳ ದಿಗ್ಬಂಧನಗಳಿಂದಾಗಿ ರಷ್ಯಾದ ಕಚ್ಚಾ ತೈಲವು ಭಾರತೀಯ ತೈಲ ಕಂಪನಿಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುತ್ತಿತ್ತು. ವಿಶ್ವದ ಮೂರನೇ ಅತಿ ದೊಡ್ಡ ಕಚ್ಚಾ ತೈಲ ಗ್ರಾಹಕರಾಗಿರುವ ಭಾರತವು, ಇಂಧನ ಭದ್ರತೆ ಮತ್ತು ಆರ್ಥಿಕ ಅನುಕೂಲಕ್ಕಾಗಿ ರಷ್ಯಾದಿಂದ ತೈಲ ಆಮದನ್ನು ವೇಗವಾಗಿ ಹೆಚ್ಚಿಸಿತು. ಯುದ್ಧಕ್ಕೂ ಮುನ್ನ ಭಾರತದ ಒಟ್ಟು ಆಮದಿನಲ್ಲಿ 2%ರಷ್ಟು ಮಾತ್ರವಿದ್ದ ರಷ್ಯಾದ ತೈಲ ಪಾಲು, ನಂತರ 40ರಿಂದ 50%ರವರೆಗೆ ಏರಿಕೆಯಾಯಿತು. ಕಳೆದ ತಿಂಗಳು ಕೂಡ ಭಾರತವು ದಿನಕ್ಕೆ ಸುಮಾರು 1.9 ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದ್ದು, ಇದು ದೇಶದ ಒಟ್ಟು ತೈಲ ಆಮದಿನ 35%ರಷ್ಟಿದೆ.




