ಮಹಿಳೆಯನ್ನು ಕನ್ಯತ್ವ ಪರೀಕ್ಷೆಗೆ ಒಳಗಾಗಲು ಒತ್ತಾಯಿಸಬಾರದು, ಅದು ಘನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ. ಜೊತೆಗೆ ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ 21 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಹೇಳಿದೆ.
ಕನ್ಯತ್ವ ಪರೀಕ್ಷೆಗೆ ಅನುಮತಿ ನೀಡುವುದು ಮೂಲಭೂತ ಹಕ್ಕುಗಳು, ಮಹಿಳೆಯ ಗೌಪ್ಯತೆಗೆ ವಿರುದ್ಧವಾಗಿದೆ. ‘ಮೂಲಭೂತ ಹಕ್ಕುಗಳ ಹೃದಯ’ವಾದ 21ನೇ ವಿಧಿ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಒತ್ತಿ ಹೇಳಿದೆ.
ಇದನ್ನು ಓದಿದ್ದೀರಾ? ಮೃತದೇಹದೊಂದಿಗೆ ಸಂಭೋಗ ಅತ್ಯಾಚಾರವಲ್ಲ: ಛತ್ತೀಸ್‌ಗಢ ಹೈಕೋರ್ಟ್
ತನ್ನ ಪತ್ನಿ ಇನ್ನೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಆಕೆಯ ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿ ವ್ಯಕ್ತಿಯೊಬ್ಬರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಮಧ್ಯಂತರ ಅರ್ಜಿಯನ್ನು ಕೋರ್ಟ್ ಅಕ್ಟೋಬರ್ 15, 2024 ರಂದು ತಿರಸ್ಕರಿಸಿದೆ.
ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಛತ್ತೀಸ್‌ಗಢ ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅರವಿಂದ್ ಕುಮಾರ್ ವರ್ಮಾ ಅವರ ಪೀಠ ನಡೆಸಿದೆ.
ಪತ್ನಿ ತನ್ನ ಪತಿ ಲೈಂಗಿಕ ದೌರ್ಬಲ್ಯ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಆದ್ದರಿಂದ ಜೊತೆಗೆ ಜೀವಿಸಲಾಗದು ಎಂದು ಹೇಳಿದ್ದರು. ಅರ್ಜಿದಾರರು ತನ್ನ ವಿರುದ್ಧವಿರುವ ಆರೋಪಗಳು ಆಧಾರರಹಿತವೆಂದು ಸಾಬೀತುಪಡಿಸಲು ಬಯಸಿದರೆ, ಅವರು ಸಂಬಂಧಿತ ವೈದ್ಯಕೀಯ ಪರೀಕ್ಷೆಗೆ ಒಳಗಾಗಬಹುದು ಅಥವಾ ಯಾವುದೇ ಇತರ ಪುರಾವೆಗಳನ್ನು ನೀಡಬಹುದು ಎಂದು ಹೈಕೋರ್ಟ್ ಹೇಳಿದೆ.
“ಪತ್ನಿಯನ್ನು ಕನ್ಯತ್ವ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ. ತನ್ನ ಪತ್ನಿಯ ಕನ್ಯತ್ವ ಪರೀಕ್ಷೆಗೆ ಒತ್ತಾಯಿಸುವ ಅರ್ಜಿದಾರರ ವಾದವು ಸಂವಿಧಾನಬಾಹಿರವಾಗಿದೆ. ಮಹಿಳೆಯರ ಘನತೆಯ ಹಕ್ಕನ್ನು ಒಳಗೊಂಡಿರುವ ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸುತ್ತದೆ” ಎಂದು ಹೈಕೋರ್ಟ್ ತಿಳಿಸಿದೆ.
