ಅಸ್ಸಾಂನ ಮಾಜಿ ಗೃಹ ಸಚಿವ ದಿವಂಗತ ಭೃಗು ಕುಮಾರ್ ಫುಕನ್ ಅವರ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಉಪಾಸ ಫುಕನ್ (28) ಭಾನುವಾರ ಗುವಾಹಟಿಯ ಖಾರ್ಘುಲಿ ಪ್ರದೇಶದಲ್ಲಿರುವ ತನ್ನ ಮನೆಯ ಎರಡನೇ ಮಹಡಿಯಿಂದ ಜಿಗಿದಿದ್ದಾರೆ ಎಂದು ವರದಿಯಾಗಿದೆ. ಮನೆಯಲ್ಲಿ ತನ್ನ ತಾಯಿಯೊಂದಿಗೆ ಉಪಾಸ ವಾಸಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ| ಕುಟುಂಬದ ಏಳು ಮಂದಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
“ಆಕೆಯನ್ನು ತಕ್ಷಣ ಗೌಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ನಾವು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದೇವೆ, ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದರು.
ಉಪಾಸ ದೀರ್ಘಕಾಲದಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು. ನಿನ್ನೆ, ಅವರ ತಾಯಿ ಮನೆಕೆಲಸದಲ್ಲಿ ನಿರತರಾಗಿದ್ದಾಗ, ಅವರು ಮನೆಯ ಎರಡನೇ ಮಹಡಿಯಿಂದ ಜಿಗಿದಿದ್ದಾರೆ ಎಂದು ಆರೋಪಿಸಲಾಗಿದೆ” ಎಂದು ಅಧಿಕಾರಿ ಹೇಳಿದರು. ಮನೆಯಲ್ಲಿ ಯಾವುದೇ ಸುಸೈಡ್ ನೋಟ್ ಕಂಡುಬಂದಿಲ್ಲ ಎಂದು ಹೇಳಲಾಗಿದೆ.
2006ರಲ್ಲಿ ನಿಧನರಾದ ಭೃಗು ಕುಮಾರ್ ಫುಕನ್ 1985ರಲ್ಲಿ ಮೊದಲ ಎಜಿಪಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದರು. ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ ಒಬ್ಬರು.
ಇದನ್ನು ಓದಿದ್ದೀರಾ? ರಾಯಚೂರು | ಸಾಲಬಾಧೆ ಆತ್ಮಹತ್ಯೆ ಮಾಡಿಕೊಂಡ ರೈತ
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಅಸ್ಸಾಂ ಕೃಷಿ ಸಚಿವ ಮತ್ತು ಎಜಿಪಿ ಅಧ್ಯಕ್ಷ ಅತುಲ್ ಬೋರಾ, “ಐತಿಹಾಸಿಕ ಅಸ್ಸಾಂ ಚಳವಳಿಯ ಪ್ರಮುಖ ನಾಯಕ, ಹಿರಿಯ ಎಜಿಪಿ ನಾಯಕ ಮತ್ತು ಅಸ್ಸಾಂನ ಮಾಜಿ ಗೃಹ ಸಚಿವ ದಿವಂಗತ ಭೃಗು ಕುಮಾರ್ ಫುಕನ್ ಅವರ ಪುತ್ರಿ ಉಪಾಸಾ ಫುಕನ್ ಅವರ ಅಕಾಲಿಕ ಮತ್ತು ದುರದೃಷ್ಟಕರ ನಿಧನದಿಂದ ನಾನು ತೀವ್ರವಾಗಿ ದುಃಖಿತನಾಗಿದ್ದೇನೆ” ಎಂದು ಹೇಳಿದರು.
“ಈ ತೀವ್ರ ದುಃಖದ ಕ್ಷಣದಲ್ಲಿ ನಾನು ದುಃಖಿತ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳನ್ನು ಅರ್ಪಿಸುತ್ತೇನೆ. ಅಗಲಿದ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ ಎಂದು ಸರ್ವಶಕ್ತನಲ್ಲಿ ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
