ಗ್ರಾಮಗಳ ಮೇಲೆ ದಾಳಿ ಮಾಡುತ್ತಿರುವ ಚಿರತೆಯನ್ನು ಅರಣ್ಯಾಧಿಕಾರಿಗಳು ಹಿಡಿಯಲು ಸಾಧ್ಯವಾಗದ ಹಿನ್ನಲೆಯಲ್ಲಿ ಬಿಜೆಪಿ ನಾಯರೊಬ್ಬರು ಸೊಳ್ಳೆ ಪರದೆ ಮೂಲಕ ಚಿರತೆ ಹಿಡಿಯಲು ಮುಂದಾಗಿದ್ದಾರೆ. ಮಧ್ಯಪ್ರದೇಶದ ರೇವಾದಲ್ಲಿ ಬಿಜೆಪಿ ಮಾಜಿ ಶಾಸಕ ಶ್ಯಾಮಲಾಲ್ ದ್ವಿವೇದಿ ಅವರು ಚಿರತೆ ಹಿಡಿಯಲು ಸೊಳ್ಳೆ ಪರದೆ ತೆಗೆದುಕೊಂಡು ಜಮೀನಿಗೆ ತೆರಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ರೇವಾ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಲ್ಲಿ ಸುಮಾರು ಐದು ಮಂದಿಯ ಮೇಲೆ ಚಿರತೆ ದಾಳಿ ಮಾಡಿದೆ. ಆ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಕಸರತ್ತು ನಡೆಸುತ್ತಿದೆ. ಆದರೂ, ಚಿರತೆಯನ್ನು ಹಿಡಿಯಲಾಗಿಲ್ಲ. ಹೀಗಾಗಿ, ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಮಾಜಿ ಶಾಸಕ ದ್ವಿವೇದಿ ಅವರು ಕೆಲ ಜನರನ್ನು ಜೊತೆಗೂಡಿಸಿಕೊಂಡು ಸೊಳ್ಳೆ ಪರದೆಯೊಂದಿಗೆ ಚಿರತೆ ಹಿಡಿಯಲು ಜಮೀನಿಗೆ ಹೋಗಿದ್ದಾರೆ.
“ಚಿರತೆ ದಾಳಿಗೆ ತುತ್ತಾದವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಎಮ್ಮೆಯೊಂದು ಸಾವನ್ನಪ್ಪಿದೆ. ಚಿರತೆ ಹಿಡಿಯಲು ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಒತ್ತಡ ಹೇರಿದ್ದೇವೆ. ಚಿರತೆ ದಾಳಿಯಿಂದ ಜನರನ್ನು ರಕ್ಷಿಸುವಂತೆ ಒತ್ತಾಯಿಸಿದ್ದೇವೆ” ಎಂದು ದ್ವಿವೇದಿ ಹೇಳಿದ್ದಾರೆ.
“ಚಿರತೆ ದಾಳಿಗೆ ಒಳಗಾಗುವ ಭೀತಿಯಿಂದ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಜನರಿಗಾಗಿ ಚಿರತೆ ದಾಳಿಯ ಅತಂಕವಿರುವ ಪ್ರದೇಶದಲ್ಲಿ ಮೊಕ್ಕಾಂ ಹೂಡುತ್ತೇನೆ. ಚಿರತೆ ಹಿಡಿಯುವವರೆಗೂ ಅಲ್ಲಿಂದ ಕದಲುವುದಿಲ್ಲ” ಎಂದಿದ್ದಾರೆ.
“ಜನರಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ. ಚಿರತೆ ದಾಳಿ ಕುರಿತು ಜಿಲ್ಲಾಧಿಕಾರಿ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದೇನೆ” ಎಂದು ಹೇಳಿದ್ದಾರೆ.