ಲೋಕಸಭೆಯಿಂದ ಉಚ್ಚಾಟನೆಗೊಂಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ನವಹೆಹಲಿಯ ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ.
“ನವದೆಹಲಿಯ ಟೆಲಿಗ್ರಾಪ್ ಮಾರ್ಗದಲ್ಲಿನ ನಿವಾಸ ಸಂಖ್ಯೆ 9ಬಿಯಲ್ಲಿ ವಾಸವಾಗಿದ್ದ ಮಹುವಾ ಮೊಯಿತ್ರಾ ಅವರು ಇಂದು ಬೆಳಗ್ಗೆ 10 ಗಂಟೆಗೆ ಅಧಿಕಾರಿಗಳು ಬರುವ ಮುನ್ನ ಖಾಲಿ ಮಾಡಿದ್ದಾರೆ. ಯಾವುದೇ ತೆರವು ಕಾರ್ಯಾಚರಣೆ ನಡೆದಿಲ್ಲ” ಎಂದು ಮೊಯಿತ್ರಾ ಅವರ ವಕೀಲ ಶದಾನ್ ಫರಸಾತ್ ತಿಳಿಸಿದ್ದಾರೆ.
ನಿವಾಸದ ಅಧಿಕಾರವನ್ನು ಎಸ್ಟೇಟ್ ನಿರ್ದೇಶನಾಲಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಶದಾನ್ ಫರಸಾತ್ ತಿಳಿಸಿದ್ದಾರೆ.
ನಿವಾಸ ತೆರವುಗೊಳಿಸುವುದನ್ನು ತಡೆಯಲು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ತಡೆ ನೀಡಲು ನಿರಾಕರಿಸಿದ ಹಿನ್ನಲೆಯಲ್ಲಿ ಎಸ್ಟೇಟ್ ನಿರ್ದೇಶನಾಲಯ ಅಧಿಕಾರಿಗಳು ಬಂಗಲೆ ತೆರವುಗೊಳಿಸಲು ಆದೇಶಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ಈ ಕಚ್ಚಾಟ, ‘ಆತ್ಮಹತ್ಯೆ’ಯ ಹುಚ್ಚಾಟ
ನ್ಯಾಯಮೂರ್ತಿ ಗಿರೀಶ್ ಕತಪಾಲಿಯಾ ಅವರು ಸಂಸದ ಸ್ಥಾನದಿಂದ ಉಚ್ಚಾಟನೆಗೊಂಡ ನಂತರ ತಮ್ಮ ಸಂಸದ ಸ್ಥಾನದ ಸೌಲಭ್ಯಗಳೆಲ್ಲವೂ ಕೊನೆಗೊಳ್ಳುತ್ತದೆ. ಸಂವಿಧಾನದ 226ನೇ ವಿಧಿಯ ಪ್ರಕಾರ ಅರ್ಜಿದಾರರು ಕೇಳಿದಂತೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದರು.
ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಕಳೆದ ವರ್ಷ ಡಿಸೆಂಬರ್ 8ರಂದು ಸಂಸತ್ತಿನ ಚಳಿಗಾಲದ ಅಧಿವೇಶನಲ್ಲಿ ಉಚ್ಚಾಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜನವರಿ 7ರ ವೇಳೆಗೆ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು.