ಬಿಹಾರದಲ್ಲಿ ಸೀತಾ ಮಂದಿರ ಶಿಲಾನ್ಯಾಸ; ಮುಂದುವರೆದ ಬಿಜೆಪಿ ಧರ್ಮ ರಾಜಕಾರಣ

Date:

Advertisements

ಹಿಂದೂಗಳ ಪವಿತ್ರ ಮಹಾಕಾವ್ಯ ರಾಮಾಯಣದ ಶಕ್ತಿ ಸ್ವರೂಪಿ ಸೀತಾ ಮಾತೆಯ ದಿವ್ಯ ನಾಮವನ್ನು ರಾಷ್ಟ್ರ ರಾಜಕೀಯ ವೇದಿಕೆಯ ಮೇಲೆ ಪಠಿಸುವ ಕೆಲಸಕ್ಕೆ ಕೇಂದ್ರದ ನಾಯಕರು ಮುಂದಾಗಿದ್ದಾರೆ. ಬಿಹಾರದ ಸೀತಾಮಢಿಯಲ್ಲಿ ಸುಮಾರು ₹882 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೀತಾಮಾತೆಯ ದೇವಾಲಯಕ್ಕೆ ಇಂದು (ಆ.8) ಕೇಂದ್ರ ಗೃಹಮಂತ್ರಿ ಅಮಿತ್‌ ಶಾ ಶಿಲಾನ್ಯಾಸ ನೆರವೇರಿಸಿದ್ದಾರೆ. 67 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯ ಸೀತಾ ಮಂದಿರದ ಶಿಲಾನ್ಯಾಸವು, ಧಾರ್ಮಿಕ ಚಟುವಟಿಕೆಯೊಂದಿಗೆ ಮಿಳಿತಗೊಂಡ ರಾಜಕೀಯವಾಗಿದೆಯೇ ಎನ್ನುವ ಚರ್ಚೆಗಳು ಶುರುವಾಗಿವೆ.

ಬಿಹಾರದ ಸೀತಾಮಢಿ ಜಿಲ್ಲೆಯಲ್ಲಿರುವ ಪುನೌರಾ ಧಾಮವು ಹಿಂದೂ ಪುರಾಣದ ಪ್ರಕಾರ ಸೀತಾ ಮಾತೆಯ ಜನ್ಮಸ್ಥಳ. ಈ ಸ್ಥಳವನ್ನು ದೀರ್ಘಕಾಲದಿಂದಲೇ ಅಭಿವೃದ್ಧಿಪಡಿಸಲು ಸ್ಥಳೀಯ ಜನತೆ ಹಾಗೂ ಹಿಂದೂ ಸಂಘಟನೆಗಳು ಒತ್ತಡ ಹಾಕುತ್ತ ಬಂದಿದ್ದವು. ಈಗ ಕೇಂದ್ರ ಸರ್ಕಾರ ಇದನ್ನು ಭವ್ಯ ದೇವಸ್ಥಾನ ಹಾಗೂ ತೀರ್ಥಯಾತ್ರಾ ಸ್ಥಳವನ್ನಾಗಿ ರೂಪಿಸಲು ಮುಂದಾಗಿದೆ. ಇದೊಂದು ಬೃಹತ್ ವೆಚ್ಚದ ಯೋಜನೆ. ಇದರಲ್ಲಿ ದೇವಸ್ಥಾನ, ಯಾತ್ರಾರ್ಥಿಗಳಿಗೆ ವಸತಿ, ಶಾಪಿಂಗ್ ಕಾಂಪ್ಲೆಕ್ಸ್, ಪ್ರವೇಶ ದ್ವಾರ, ಆಧ್ಯಾತ್ಮಿಕ ಸಂಸ್ಕೃತಿ ಕೇಂದ್ರಗಳು ಸೇರಿದಂತೆ ಮುಂತಾದವು ಸೇರಿವೆ. ಇದರ ಉದ್ದೇಶ ಸಾಂಸ್ಕೃತಿಕ ಪುನರುತ್ಥಾನ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದಾಗಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರ ಹೇಳಿದೆ. ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬೃಹತ್‌ ಯೋಜನೆಗಳನ್ನು ತರುವುದು ಉತ್ತಮವೇ. ಆದರೆ, ಯೋಜನೆಯ ಪ್ರಾಮುಖ್ಯತೆಯ ಜತೆಗೆ ಯಾವ ಸಂದರ್ಭದಲ್ಲಿ ರೂಪಿಸಲಾಗುತ್ತಿದೆ ಎಂಬುದೂ ಗಣ್ಯವಾಗುತ್ತದೆ.

ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದೆ. ಈ ವರ್ಷಾಂತ್ಯಕ್ಕೆ ಅಂದರೆ ಅಕ್ಟೋಬರ್-ನವೆಂಬರ್‌ ವೇಳೆಗೆ ಚುನಾವಣೆ ನಡೆಯಲಿದೆ. ಚುನಾವಣೆಯ ಹೊಸ್ತಿಲಲ್ಲೇ ಧಾರ್ಮಿಕ ಕಟ್ಟಡವೊಂದರ ಶಿಲಾನ್ಯಾಸ ಕಾರ್ಯಕ್ರಮ ರಾಜಕೀಯವಾಗಿ ಮಹತ್ವದ್ದಾಗಿದೆ ಎನ್ನುತ್ತಾರೆ ವಿಶ್ಲೇಷಕರು. 2023ರಲ್ಲಿ ನಿತೀಶ್ ಕುಮಾರ್ ಅವರು ದೇವಾಲಯದ ಆವರಣಕ್ಕಾಗಿ ₹72 ಕೋಟಿ ಮಂಜೂರು ಮಾಡಿದ್ದರು. ಇದೀಗ ಎನ್‌ಡಿಎ ಸರ್ಕಾರ ಸಂಪೂರ್ಣ ಯೋಜನೆಗಾಗಿ ₹882 ಕೋಟಿ ಮಂಜೂರು ಮಾಡಿದೆ.

Advertisements
WhatsApp Image 2025 08 08 at 4.45.53 PM

ಉತ್ತರ ಪ್ರದೇಶದ ಅಯೋಧ್ಯ ರಾಮ ಮಂದಿರ ನಿರ್ಮಾಣದ ವಿಚಾರದಲ್ಲೂ ಇದೇ ಆಗಿದ್ದು. 1984ರ ವೇಳೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಹೇಳಿಕೊಳ್ಳುವಂತ ಸಾಧನೆಯನ್ನೇನೂ ಮಾಡಿರಲಿಲ್ಲ. ಬಹುತೇಕ ಶೂನ್ಯ. ಮುಂದೆ 1989ರಲ್ಲಿ ಪಕ್ಷ 8 ಸ್ಥಾನಗಳಲ್ಲಿ ಖಾತೆ ತೆರೆದಿತ್ತು. ಅಷ್ಟು ಹೊತ್ತಿಗಾಗಲೇ ರಾಮಮಂದಿರ ನಿರ್ಮಾಣದ ಪರವಾದ ಚಳವಳಿಗಳು ಉತ್ತರ ಭಾರತದಲ್ಲಿ ಬಿರುಸು ಪಡೆದಿದ್ದವು. ಇದನ್ನ ದಾಳವಾಗಿ ಎಸೆಯಲು ಯೋಜಿಸಿದ ಬಿಜೆಪಿ, ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಿಸುವ ಭರವಸೆ ನೀಡಿತ್ತು. ಇದರಿಂದ ಉತ್ತರದಲ್ಲಿ ಬಿಜೆಪಿ ನಿಧಾನವಾಗಿ ಬೇರೂರತೊಡಗಿತ್ತು. ಪರಿಣಾಮವಾಗಿ 1991ರ ಸಂಸತ್‌ ಚುನಾವಣೆಯಲ್ಲಿ ಯುಪಿಯಲ್ಲಿ ಬಿಜೆಪಿ ಮೊದಲ ಬಾರಿಗೆ 50 ಸ್ಥಾನಗಳನ್ನು ಗಳಿಸಿತ್ತು. ನಂತರ 1996ರಲ್ಲಿ 52, 1998ರಲ್ಲಿ 57 ಕ್ಷೇತ್ರಗಳಲ್ಲಿ ಬಿಜೆಪಿ ಜಯಶಾಲಿಯಾಯಿತು.

ವಾಜಪೇಯಿ ಅವರ ಅವಧಿಯನ್ನು ಹೊರತುಪಡಿಸಿ, ಬಿಜೆಪಿ ನಿಧಾನವಾಗಿ ಹೆಚ್ಚು ಹೆಚ್ಚು ಸೀಟ್‌ ಗೆಲ್ಲಲು ಮುಂದಡಿಯಿಟ್ಟಿತು. 2014ರಲ್ಲಿ ಮೋದಿ ಆಗಮನದೊಂದಿಗೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸ್ಥಾನ ಗಳಿಕೆ 71ಕ್ಕೆ ಏರಿತು. 2019ರಲ್ಲಿ62 ಕ್ಷೇತ್ರಗಳಲ್ಲಿ ಗೆದ್ದಿತ್ತು. ಅಯೋಧ್ಯೆ ಚಳವಳಿಯ ಬಳಿಕ ಉತ್ತರ ಪ್ರದೇಶದಲ್ಲಿ ಹಿಂದುತ್ವ ಆಧಾರಿತ ಸಾಂಸ್ಕೃತಿಕ ರಾಜಕಾರಣ ಮೇಲುಗೈ ಸಾಧಿಸಿತ್ತು. ಉತ್ತರ ಪ್ರದೇಶದ ಹಲವೆಡೆ ಮುಸ್ಲಿಮರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಇದರ ನಡುವೆಯೂ ಸೆಕ್ಯೂಲರ್‌ ಎನಿಸಿಕೊಳ್ಳುವ ಪಕ್ಷಗಳು ಸತತ ಹಿನ್ನಡೆ ಅನುಭವಿಸುತ್ತಿರುವುದಕ್ಕೆ ಬಿಜೆಪಿ ತೋಡಿರುವ ಖೆಡ್ಡಾವೇ ಕಾರಣ. ವಿಕಾಸದ ಬಗ್ಗೆ ಬಹುವಾಗಿ ಮಾತನಾಡುವ ಬಿಜೆಪಿ, ಚುನಾವಣೆ ಬಂದಾಗ ಧ್ರುವೀಕರಣದ ಅಸ್ತ್ರ ಹಿಡಿಯುತ್ತದೆ. ಕಳೆದ ಲೋಕಸಭೆ ಚುನಾವಣೆ ಅಂಚಿನಲ್ಲಿ ಮಂಗಳಸೂತ್ರದಿಂದ ಹಿಡಿದು ಮತ, ಧರ್ಮಕೇಂದ್ರಿತ ಸಂಗತಿಗಳನ್ನೇ ಕಣದಲ್ಲಿ ಪ್ರಸ್ತಾಪಿಸಿ ಗೆದ್ದಿದ್ದು ಇತಿಹಾಸ ಎನ್ನುತ್ತಾರೆ ರಾಜಕೀಯ ತಜ್ಞರು. ಆದರೆ, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿಸಿದರೂ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಮಕಾಡೆ ಮಲಗಿತ್ತು. ಸ್ವತಃ ಅಯೋಧ್ಯೆ ಇರುವ ಫೈಜಾಬಾದ್‌ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿತ್ತು. ಬಿಜೆಪಿಯ ಈ ಧಾರ್ಮಿಕ ನಾಟಕಗಳಿಗೆ ಜನರೇ ತೆರೆ ಎಳೆದಿದ್ದು ಗಮನಾರ್ಹ.

2024ರ ಜನವರಿ 22ರಂದು ನಡೆದ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು, ಪ್ರಮುಖ ಕ್ರೀಡಾಪಟುಗಳು, ವ್ಯಾಪಾರ ದೊರೆಗಳು ಮತ್ತು ಆಧ್ಯಾತ್ಮಿಕ ನಾಯಕರು ಸೇರಿದಂತೆ ಸುಮಾರು 7,000 ಅತಿಥಿಗಳು ಭಾಗವಹಿಸಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಮಾರಂಭವನ್ನು ಅದೆಷ್ಟು ತೀವ್ರವಾಗಿ ವಿಜೃಂಭಿಸಲಾಯಿತೆಂದರೆ, ಪಿವಿಆರ್-ಐನಾಕ್ಸ್‌ನಂತಹ ಚಿತ್ರಮಂದಿರಗಳು, ಟಿವಿ ಚಾನೆಲ್‌ಗಳು ವೀಕ್ಷಕರಿಗೆ ನೇರ ಪ್ರಸಾರವನ್ನು ಆಯೋಜಿಸುತ್ತಿದ್ದವು. ಉದ್ಘಾಟನಾ ದಿನದಂದು ದೆಹಲಿ ಮತ್ತು ಅಯೋಧ್ಯೆಯ ನಡುವೆ ವಿಮಾನಯಾನ ಸಂಸ್ಥೆಗಳು ವಿಶೇಷ ವಿಮಾನಗಳನ್ನು ಒದಗಿಸಿದ್ದವು. ಈ ಘಟನೆಯು ದೇಶದ ಅರ್ಧಕ್ಕಿಂತಲೂ ಹೆಚ್ಚಿನ ಜನರಲ್ಲಿ ಟೀಕೆಗೆ ಗುರಿಯಾಗಿದ್ದು ಸುಳ್ಳಲ್ಲ. ಅದೇ ರೀತಿ ಈಗ ಯೋಜಿಸಿರುವ ಸೀತಾಮಾತೆಯ ದೇವಾಲಯದ ಶಿಲಾನ್ಯಾಸದ ಹಿಂದೆಯೂ ರಾಜಕೀಯ ಹುನ್ನಾರ ನಡೆದಿದೆ ಎನ್ನಲಾಗುತ್ತಿದೆ.

ಪ್ರಸ್ತುತ ಬಿಹಾರ ವಿಧಾನಸಭೆಯು ಒಟ್ಟು 243 ಸದಸ್ಯರನ್ನೊಳಗೊಂಡಿದೆ. ಈ ಪೈಕಿ, ಎನ್‌ಡಿಎ ಮೈತ್ರಿಕೂಟದ ಬಳಿ 131 ಶಾಸಕರ ಬೆಂಬಲವಿದೆ. ಬಿಜೆಪಿ 80, ಜೆಡಿಯು 45, HAM(S) 4 ಮತ್ತು 2 ಸ್ವತಂತ್ರ ಶಾಸಕರಿದ್ದಾರೆ. ಇದು ಸರ್ಕಾರ ರಚಿಸಲು ಅಗತ್ಯವಿರುವ 122 ಸ್ಥಾನಕ್ಕಿಂತ ಹೆಚ್ಚು. ಇನ್ನು ಇಂಡಿಯಾ ಬ್ಲಾಕ್ ಮೈತ್ರಿಕೂಟದಲ್ಲಿ ಒಟ್ಟು 111 ಶಾಸಕರಿದ್ದಾರೆ. ಆರ್‌ಜೆಡಿ 77, ಕಾಂಗ್ರೆಸ್ 19, CPI(ML) 11, CPI(M) 2 ಮತ್ತು CPI 2 ಶಾಸಕರು. ಸಂಖ್ಯೆಯ ಪ್ರಕಾರ ಎನ್‌ಡಿಎ ಸದ್ಯಕ್ಕೆ ಭದ್ರ ಸ್ಥಿತಿಯಲ್ಲಿ ಇದೆ. ಆದರೆ ರಾಜಕೀಯದಲ್ಲಿ ಮೈತ್ರಿಕೂಟಗಳ ತೊಡಕುಗಳು ಮತ್ತು ಹೊಸ ಹೊಂದಾಣಿಕೆಗಳು ಸಾಮಾನ್ಯ. ಯಾವುದೇ ಪಕ್ಷದ ತಾಕತ್ತೂ ಶಾಶ್ವತವಲ್ಲ ಎಂಬುದನ್ನು ಇತಿಹಾಸ ಕಲಿಸಿದೆ. ಆಗಾಗ್ಗೆ ಬದಲಾಗುವ ಗೆಲುವಿನ ಸಮೀಕರಣದ ನಡುವೆ ಮತದಾರರ ನಂಬಿಕೆ ಮುಖ್ಯ. ಈ ಮತದಾರರನ್ನು ತನ್ನತ್ತ ಸೆಳೆಯುವ ತಂತ್ರವನ್ನು ಬಿಜೆಪಿ ಸದ್ಯ ʼಸೀತಾಮಾತೆʼಯ ರೂಪದಲ್ಲಿ ಹೆಣೆಯುತ್ತಿದೆ.

ಅದೇ ರೀತಿ ಬಿಹಾರ ರಾಜ್ಯವು ದೇಶದ ಅತಿದಾರಿದ್ರ್ಯ ಮತ್ತು ನಿರುದ್ಯೋಗಪೀಡಿತ ರಾಜ್ಯಗಳಲ್ಲಿ ಒಂದಾಗಿದೆ. ಕಡಿಮೆ ಉದ್ಯೋಗಾವಕಾಶಗಳು, ಕುಂಟುತ್ತಾ ಸಾಗುತ್ತಿರುವ ಶಿಕ್ಷಣ, ಬಡತನದಂತಹ ನಿಜವಾದ ಸಮಸ್ಯೆಗಳಿಗೆ ಪರಿಹಾರ ನೀಡಲು ಸರ್ಕಾರ ಹೆಚ್ಚು ಪ್ರಯತ್ನಿಸಿಲ್ಲ ಎಂಬ ಆರೋಪಗಳಿವೆ. ಇಂತಹ ಸಂದರ್ಭದಲ್ಲಿ ಧರ್ಮದ ಹೆಸರಿನಲ್ಲಿ ಭವ್ಯ ದೇವಸ್ಥಾನ ನಿರ್ಮಾಣ ಮಾಡುವುದರಿಂದ ಜನರ ಬದುಕಿನಲ್ಲಿ ನಿಜ ಬದಲಾವಣೆ ತರಲು ಸಾಧ್ಯವೇ ಎನ್ನುವುದು ಗಂಭೀರ ಪ್ರಶ್ನೆ. ಚುನಾವಣೆ ಸಮೀಪ ಬಂದಾಗಲೆ ದೇವಾಲಯಗಳ ನೆಪದಲ್ಲಿ ಸಾಮಾನ್ಯ ಜನರ ಧಾರ್ಮಿಕ ಭಾವನೆಗಳನ್ನು ರಾಜಕೀಯವಾಗಿ ಬಳಸುವುದು ಬಿಜೆಪಿಯ ಸಿದ್ಧಸೂತ್ರ. 2019ರ ಲೋಕಸಭಾ ಚುನಾವಣೆ ಮೊದಲು ರಾಮ ಮಂದಿರದ ವಿಚಾರ ಹೆಚ್ಚು ಓಡಾಡಿದಂತೆ ಈಗ ಸೀತಾ ಮಂದಿರವನ್ನು ಬಿಜೆಪಿ ಮುನ್ನೆಲೆಗೆ ತಂದಿರುವಂತೆ ತೋರುತ್ತಿದೆ. ಚುನಾವಣೆಯ ಸಮಯಲ್ಲಿ ಶಿಲಾನ್ಯಾಸ ಮಾಡಿ ಅರ್ಧಕ್ಕೆ ಬಿಟ್ಟರೆ, ಅದನ್ನು ಪೂರ್ತಿಮಾಡಲಾದರೂ ಜನ ಇವರನ್ನು ಅಧಿಕಾರಕ್ಕೆ ತರಬೇಕು. ಇದು ಬಿಜೆಪಿಗರ ಹಿಡನ್‌ ಅಜೆಂಡಾ!

ಇದನ್ನೂ ಓದಿ: ಶೇ. 50 ಸುಂಕ ವಿಧಿಸಿದ ಡೊನಾಲ್ಡ್‌ ಟ್ರಂಪ್‌: ಭಾರತದ ಮೇಲಾಗುವ ಪರಿಣಾಮವೇನು?

ಕಳೆದ ಮೇ ಮಾಹೆಯಲ್ಲಿ ಬಿಹಾರದ ಕರಕಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ₹48,520 ಕೋಟಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರ ದಾಳಿಯಾದ ಸಮಯವದು. ಆ ಸಂದಿಗ್ಧ ಸಮಯದಲ್ಲಿ ಮೋದಿ ಕಾಶ್ಮೀರಕ್ಕೆ ತೆರಳುವ ಬದಲು ಸೀದಾ ಬಿಹಾರಕ್ಕೆ ನಡೆದರು. ಅಲ್ಲಿ ಬೃಹತ್‌ ಕಾರ್ಯಕ್ರಮದ ವೇದಿಕೆ ಮೇಲೆ ನಿಂತು “ಪಾಕಿಸ್ತಾನದಲ್ಲಿ ಕುಳಿತು ನಮ್ಮ ಸಹೋದರಿಯರ ಸಿಂಧೂರವನ್ನು ನಾಶಪಡಿಸಿದರು; ನಮ್ಮ ಸೈನ್ಯವು ಅವರ ಅಡಗುತಾಣಗಳನ್ನು ನಾಶಮಾಡಿತು”, “ಭಾರತದ ಹೆಣ್ಣುಮಕ್ಕಳ ಸಿಂಧೂರದ ಶಕ್ತಿಯನ್ನು ಪಾಕಿಸ್ತಾನ ಮತ್ತು ಜಗತ್ತು ನೋಡಿದೆ” ಎಂದು ಭಾಷಣ ಮಾಡಿದರು. ಈ ಕಾರ್ಯಕ್ರಮವೂ ಬಹುತೇಕರ ಟೀಕೆಗೆ ಗುರಿಯಾಯಿತು.

WhatsApp Image 2025 08 08 at 4.14.17 PM

ಸೀತಾಮಾತೆಯ ದೇವಾಲಯದ ಶಿಲಾನ್ಯಾಸ ಸಾಂಸ್ಕೃತಿಕವಾಗಿ ಸಾರ್ಥಕ, ಧಾರ್ಮಿಕವಾಗಿ ಪವಿತ್ರವಾದದ್ದು ಎನಿಸಬಹುದು. ಆದರೆ, ಇದರ ಹಿಂದಿರುವ ರಾಜಕೀಯ ಲೆಕ್ಕಾಚಾರವನ್ನು ಕಂಡೂ ಕಾಣದಂತೆ ಮರೆಮಾಚಲಾಗದು. ಧರ್ಮವು ರಾಜಕೀಯ ಸಾಧನೆಯ ಮಾರ್ಗವಾಗಬಾರದು ಎಂಬ ಜನರ ಸಾಮಾನ್ಯ ನಿರೀಕ್ಷೆ, ಇಂದು ರಾಷ್ಟ್ರೀಯ ಪಕ್ಷಗಳ ತಂತ್ರಗಳ ನಡುವೆ ಹುಸಿಯಾಗುವಂತಾಗಿದೆ. ಬಿಹಾರ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ನಡೆಯುತ್ತಿರುವ ಈ ರೀತಿಯ ಧರ್ಮಕೇಂದ್ರಿತ ರಾಜಕೀಯವು ನಿಜವಾಗಿ ಜನರ ಬದುಕನ್ನು ಸುಧಾರಿಸಲು ಮಾಡುತ್ತಿರುವ ಅಭಿವೃದ್ಧಿ ಕೆಲಸವೋ ಅಥವಾ ಮತದಾನಕ್ಕೂ ಮುನ್ನ ಜಾಗೃತ ಭಾವನೆಗಳನ್ನು ಕದ್ದುಕೊಳ್ಳುವ, ಪ್ರಶ್ನಿಸುವ ದನಿಯನ್ನು ಹತ್ತಿಕ್ಕುವ, ಧಾರ್ಮಿಕ ಭಾವನೆಗಳನ್ನ ತಿರುಚುವ ರಾಜಕೀಯ ಕಸರತ್ತೋ? ಉತ್ತರಿಸುವವರು ಬೇಕಾಗಿದ್ದಾರೆ.

ಮತದಾರರ ಬುದ್ಧಿವಂತಿಕೆ ಮತ್ತು ವಿಚಾರಪೂರ್ಣ ನಿರ್ಣಯವೇ ಅಂತಿಮವಾಗಿ ಪ್ರಜಾಪ್ರಭುತ್ವದ ಶಕ್ತಿ. ಈ ಹಿನ್ನೆಲೆಯಲ್ಲಿ, ಸೀತಾಮಂದಿರದ ಶಿಲಾನ್ಯಾಸದ ಉದ್ದೇಶ; ವಾಸ್ತವಿಕ ಅಭಿವೃದ್ಧಿ ಅಥವಾ ಮತ ಧ್ರುವೀಕರಣ ಎಂಬುದನ್ನು ಭವಿಷ್ಯದ ಚುನಾವಣೆಯಲ್ಲಿ ಜನರೇ ನಿರ್ಧರಿಸಬೇಕಾಗಿದೆ.

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X