ಮಿನಿ ಬಸ್ ಸಣ್ಣ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿ, 11 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 46 ರಲ್ಲಿ ಬೆಳಿಗ್ಗೆ 5 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಗುಜರಾತ್ ಮೂಲದ ಸಂಗೀತ ತಂಡವಿದ್ದ ಮಿನಿ ಬಸ್ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಸರ್ವಾಯ ಪೊಲೀಸ್ ಠಾಣೆಯ ಗೃಹ ಅಧಿಕಾರಿ (SHO) ಅರವಿಂದ್ ಚಾರಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಛತ್ತೀಸ್‌ಗಢ | ಭೀಕರ ಅಪಘಾತ: ಮೂವರ ಸಾವು, ಆರು ಮಂದಿಗೆ ಗಾಯ
ಬಸ್ ಚಾಲಕನ ನಿಯಂತ್ರಣ ತಪ್ಪಿದ್ದು, ಬೇರೆಯೇ ದಾರಿಗೆ ನುಗ್ಗಿ ಸಣ್ಣ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಸಂಗೀತ ತಂಡದ ಗಾಯಕ ಹಾರ್ದಿಕ್ ಡೇವ್ (37), ಸಂಗೀತ ತಂಡದ ಗಾಯಕ ರಾಜಾ ಠಾಕೂರ್ (28), ಅಂಕಿತ್ ಠಾಕೂರ್ (17) ಮತ್ತು ರಾಜೇಂದ್ರ ಸೋಲಂಕಿ (47) ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 17 ಜನರಿದ್ದ ಮಿನಿ ಬಸ್‌ನ ಚಾಲಕ ನಿದ್ರೆಗೆ ಜಾರಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
