ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ಈಶಾನ್ಯ ದೆಹಲಿಯ ವೆಲ್ಕಮ್ ಪ್ರದೇಶದಲ್ಲಿರುವ ಸೀಲಾಂಪುರದ ಜನತಾ ಮಜ್ದೂರ್ ಕಾಲೋನಿಯಲ್ಲಿ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ನಡೆದಿದೆ. ಘಟನೆಯಲ್ಲಿ ಕನಿಷ್ಠ ಹತ್ತು ಮಂದಿಯನ್ನು ರಕ್ಷಿಸಲಾಗಿದೆ.
ಇನ್ನೂ ಹಲವು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆಯಿದೆ. ಏಳು ಜನರನ್ನು ಜೆಪಿಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಒಬ್ಬರನ್ನು ಚಿಕಿತ್ಸೆಗಾಗಿ ಜಿಟಿಬಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೂವರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದಂತೆ ಸುಮಾರು 12 ಜನರು ಕಟ್ಟಡದಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ನಿಮ್ಮ ನೀತಿ ಬದಲಾಯಿಸದಿದ್ದರೆ, ನಿಮ್ಮನ್ನೇ ಬದಲಾಯಿಸುತ್ತೇವೆ: ಕೇಂದ್ರಕ್ಕೆ ‘ಮಹಾಧರಣಿ’ ಎಚ್ಚರಿಕೆ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಹಿರಿಯ ಅಧಿಕಾರಿಗಳು, ಅಗ್ನಿಶಾಮಕ ದಳ ಮತ್ತು ಇತರ ಸಂಸ್ಥೆಗಳು ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳೀಯರೂ ಕಾರ್ಯಚರಣೆಗೆ ಸಹಾಯ ಮಾಡಿದ್ದಾರೆ. ಕಟ್ಟಡ ಕುಸಿತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
“ಈದ್ಗಾ ಬಳಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಜಂತ ಕಾಲೋನಿಯ ಗಾಲಿ ಸಂಖ್ಯೆ 5 ರ ಎ-ಬ್ಲಾಕ್ ತಲುಪಿದಾಗ ಮೂರು ಅಂತಸ್ತು ಕುಸಿದಿದ್ದವು” ಎಂದು ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
