ಸಿಂಧು ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರವು ‘ಕಾನೂನುಬಾಹಿರ’ ಎಂಬ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಆರೋಪವನ್ನು ಭಾರತ ತಿರಸ್ಕರಿಸಿದೆ. “ಈ ನಿರ್ಧಾರವು ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಕಾನೂನುಬದ್ಧವಾಗಿದೆ” ಎಂದು ಭಾರತ ಹೇಳಿದೆ.
ಶುಕ್ರವಾರ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಸಿಂಧು ಜಲ ಒಪ್ಪಂದವನ್ನು ಮುರಿದು ಲಕ್ಷಾಂತರ ಜನರ ಜೀವಕ್ಕೆ ಅಪಾಯವನ್ನುಂಟುಮಾಡುವ ಮೂಲಕ ಭಾರತ ಕೆಂಪು ರೇಖೆಯನ್ನು ದಾಟಲು ಪ್ರಯತ್ನಿಸುತ್ತಿದೆ. ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಶಿಮ್ಲಾ ಒಪ್ಪಂದದತ್ತ ಕಣ್ಣು ಹಾಯಿಸಬೇಕಿದೆ ಭಾರತ-ಪಾಕ್
ಈ ಬಗ್ಗೆ ಜಲಶಕ್ತಿ ಸಚಿವಾಲಯದ ಸಿಂಧು ಜಲ ಒಪ್ಪಂದದ ಸಲಹೆಗಾರ ಮತ್ತು ಮಾಜಿ ಆಯುಕ್ತ(ಸಿಂಧು) ಕುಶ್ವಿಂದರ್ ವೋಹ್ರಾ ಎನ್‌ಡಿಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಸಿಂಧು ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರವು ಚಾಲ್ತಿಯಲ್ಲಿರುವ ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಕಾನೂನುಬದ್ಧವಾಗಿ ಮಾನ್ಯವಾಗಿದೆ” ಎಂದರು.
“ಅಂತಾರಾಷ್ಟ್ರೀಯ ಒಪ್ಪಂದಗಳ ಮೇಲಿನ ವಿಯೆನ್ನಾ ಸಮಾವೇಶವು ಸಿಂಧು ಜಲ ಒಪ್ಪಂದದ ಮೇಲೆ ಕಟ್ಟುನಿಟ್ಟಾಗಿ ಅನ್ವಯಿಸುವುದಿಲ್ಲ. ಏಕೆಂದರೆ ಅದು 1980ರಲ್ಲಿ ಮಾತ್ರ ಜಾರಿಗೆ ಬಂದಿದೆ. 1980ರ ಮೊದಲು ಮಾಡಲಾದ ಒಪ್ಪಂದಗಳು ಅದರ ವ್ಯಾಪ್ತಿಗೆ ಬರುವುದಿಲ್ಲ. ಸಿಂಧು ಜಲ ಒಪ್ಪಂದಕ್ಕೆ 1960ರಲ್ಲಿ ಸಹಿ ಮಾಡಲಾಗಿದೆ” ಎಂದು ಹೇಳಿದ್ದಾರೆ.
ಮೂಲಭೂತ ಸಂದರ್ಭಗಳು ಬದಲಾದಾಗ, ಪರಿಸ್ಥಿತಿ ಬಂದಾಗ ಸಿಂಧು ಜಲ ಒಪ್ಪಂದವನ್ನು ಅಮಾನತುಗೊಳಿಸಬಹುದು ಅಥವಾ ರದ್ದುಗೊಳಿಸಬಹುದು ಎಂದೂ ಹೇಳಿದರು. “ಸಿಂಧು ಜಲ ಒಪ್ಪಂದದ ಮೂಲಾಧಾರವಾಗಿದ್ದ ಸೌಹಾರ್ದತೆ ಮತ್ತು ಸ್ನೇಹದ ಮನೋಭಾವಕ್ಕೆ ವಿರುದ್ಧವಾಗಿ ಪಾಕಿಸ್ತಾನ ನಿರಂತರವಾಗಿ ವರ್ತಿಸುತ್ತಿರುವುದರಿಂದ ಭಾರತ ತನ್ನ ಹಕ್ಕು ಬಳಸಿಕೊಂಡು ಒಪ್ಪಂದವನ್ನು ಸ್ಥಗಿತಗೊಳಿಸಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಸಿಂಧು ನದಿ ನೀರು ಹರಿಸಲೇಬೇಕು – ಇಲ್ಲದಿದ್ದರೆ ಭಾರತಕ್ಕೇ ಗಂಭೀರ ಸಮಸ್ಯೆ!
“ಭಾರತದ ನಿರ್ಧಾರವನ್ನು ಪ್ರಶ್ನಿಸಲು ಪಾಕಿಸ್ತಾನ ಅಂತಾರಾಷ್ಟ್ರೀಯ ವೇದಿಕೆಗಳಿಗೆ ಹೋದರೂ, ಇಂದಿನ ಸನ್ನಿವೇಶಗಳು ಬದಲಾಗಿವೆ. ವಿಶೇಷವಾಗಿ ಇಸ್ಲಾಮಾಬಾದ್ ಸೌಹಾರ್ದತೆ ಮತ್ತು ಸ್ನೇಹದ ಮನೋಭಾವಕ್ಕೆ ವಿರುದ್ಧವಾಗಿ ವರ್ತಿಸುವುದು, ತಾಂತ್ರಿಕ ಬದಲಾವಣೆಗಳು, ಹವಾಮಾನ ಬದಲಾವಣೆಯ ಪರಿಣಾಮಗಳು ಸೇರಿದಂತೆ ಇತರವುಗಳಿವೆ” ಎಂದಿದ್ದಾರೆ.
1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿರುವ ಸಿಂಧು ಜಲ ನೀರಿನ ಒಪ್ಪಂದವು ಎರಡೂ ದೇಶಗಳ ನಡುವೆ ಸಿಂಧು ನದಿ ವ್ಯವಸ್ಥೆಯ ನೀರಿನ ಹಂಚಿಕೆಗೆ ಸಂಬಂಧಿಸಿದೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲಕ ಭಯೋತ್ಪಾದನಾ ಸಂಘಟನೆ ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಕೊಂದ ಬಳಿಕ ಈ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿದೆ.
