ಕಳೆದ ಹಲವು ದಿನಗಳಿಂದ ಹಲವು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿದೆ. ಈ ನಡುವೆ ಇಂಡಿಗೋ, ಏರ್ ಇಂಡಿಯಾ, ವಿಸ್ತಾರಾ ಮತ್ತು ಆಕಾಶ ಏರ್‌ನ ಕನಿಷ್ಠ 85 ವಿಮಾನಗಳಿಗೆ ಗುರುವಾರ ಮತ್ತೆ ಬಾಂಬ್ ಬೆದರಿಕೆ ಬಂದಿದೆ. ಕಳೆದ ಹತ್ತು ದಿನಗಳಲ್ಲಿ 250ಕ್ಕೂ ಅಧಿಕ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿದೆ.
ಅಧಿಕಾರಿಗಳ ಪ್ರಕಾರ 25 ಆಕಾಶ ಏರ್ ವಿಮಾನಗಳಿಗೆ ಮತ್ತು ಏರ್ ಇಂಡಿಯಾ, ಇಂಡಿಗೋ, ವಿಸ್ತಾರಾದ ತಲಾ 20 ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈಗಾಗಲೇ 170ಕ್ಕೂ ಅಧಿಕ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಪೈಕಿ ಅಧಿಕ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಬಂದಿದೆ. ಅವೆಲ್ಲವೂ ಕೂಡಾ ಹುಸಿ ಬಾಂಬ್ ಬೆದರಿಕೆ ಆಗಿದ್ದವು.
ಇದನ್ನು ಓದಿದ್ದೀರಾ? ರಾಜ್ಯದ ಮೂರು ವಿಮಾನಗಳಿಗೆ ಬಾಂಬ್ ಬೆದರಿಕೆ
ಬಾಂಬ್ ಬೆದರಿಕೆ ಬಂದ ಕಾರಣದಿಂದಾಗಿ ಹಲವು ವಿಮಾನಗಳ ಸೇವೆ ವ್ಯತ್ಯಯವಾಗಿದೆ. ಹಾಗೆಯೇ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ, “ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡುವುದು ದೊಡ್ಡ ಅಪರಾಧವನ್ನಾಗಿ ಮಾಡಲಾಗುವುದು” ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ದೇಶದಾದ್ಯಂತ ವಿವಿಧ ದೇಶೀಯ ಮತ್ತು ಅಂತರಾಷ್ಟ್ರೀಯ ಹಾರಾಟ ನಡೆಸುವ ಆಕಾಶ ಏರ್, ಏರ್ ಇಂಡಿಯಾ, ಇಂಡಿಗೋ ಮತ್ತು ವಿಸ್ತಾರಾ ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ಬೆದರಿಕೆಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಂಟು ಪ್ರಕರಣಗಳನ್ನು ದಾಖಲಿಸಿದ್ದಾರೆ.
