ಹಲವು ತಿಂಗಳುಗಳ ನಂತರ ಮಣಿಪುರದದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಇಂಫಾಲ್ ಪಶ್ಚಿಮದ ಕೌತ್ರುಕ್ ಪ್ರದೇಶದಲ್ಲಿ ಗುಂಡಿನ ದಾಳಿ ಮತ್ತು ಬಾಂಬ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರು ಪೊಲೀಸ್ ಸಿಬ್ಬಂದಿ, ಟಿವಿ ವರದಿಗಾರ ಸೇರಿದಂತೆ ಹತ್ತು ಜನರು ಗಾಯಗೊಂಡಿದ್ದಾರೆ.
ಕೌತ್ರುಕ್‌ನಲ್ಲಿ ನಡೆದ ದಾಳಿಯಲ್ಲಿ, ಕುಕಿ ಸಮುದಾಯಕ್ಕೆ ಸೇರಿದಂತೆ ಬಂಡುಕೋರರು ಡ್ರೋನ್‌ಗಳನ್ನು ಬಳಸಿಕೊಂಡು ಹಲವಾರು ಆರ್‌ಪಿಜಿಗಳನ್ನು (ರಾಕೆಟ್ ಚಾಲಿತ ಗ್ರೆನೇಡ್‌ಗಳು) ಪ್ರಯೋಗಿಸಿದ್ದಾರೆ ಎಂದು ಮಣಿಪುರ ಪೊಲೀಸರ ಅಧಿಕೃತ ಹೇಳಿಕೆ ತಿಳಿಸಿದೆ. ಹಳ್ಳಿಯನ್ನು ಗುರಿಯಾಗಿಸಲು ಏಳು ಸ್ಪೋಟಕಗಳನ್ನು ಬಳಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
“ಮಣಿಪುರದಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಇನ್ನು ಆರು ತಿಂಗಳಲ್ಲೇ ಮಣಿಪುರದಲ್ಲಿ ಸಂಪೂರ್ಣ ಶಾಂತಿ ತರಲಾಗುವುದು. ಈ ವಿಚಾರದಲ್ಲಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿಕೆ ಕೆಲವೇ ದಿನಗಳಲ್ಲಿ ಮತ್ತೆ ಹಿಂಸಾಚಾರ ನಡೆದು ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಮೊದಲ ಬಾರಿ ಸಿಎಂ ಬಿರೇನ್ ಸಿಂಗ್ ಭೇಟಿ ಮಾಡಿದ ಮೋದಿ
“ಯುದ್ಧಗಳಲ್ಲಿ ಡ್ರೋನ್ ಬಾಂಬ್‌ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಮಣಿಪುರದಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಗುರಿಯಾಗಿ ಡ್ರೋನ್‌ಗಳ ದಾಳಿ ಅಧಿಕವಾಗುತ್ತಿದೆ. ಪ್ರಾಯಶಃ ತಾಂತ್ರಿಕ ಪರಿಣತಿ ಮತ್ತು ಬೆಂಬಲದಿಂದ ಹೆಚ್ಚು ತರಬೇತಿ ಪಡೆದ ವೃತ್ತಿಪರರು ಇದನ್ನು ಮಾಡುತ್ತಿದ್ದಾರೆ ಎಂಬುದನ್ನು ನಾವು ತಳ್ಳಿಹಾಕಲಾಗದು” ಎಂದು ಮಣಿಪುರ ಪೊಲೀಸರ ಅಧಿಕೃತ ಹೇಳಿಕೆ ತಿಳಿಸಿದೆ.
ಭಾನುವಾರ ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ಪ್ರಾರಂಭವಾಗಿದೆ. ರಾತ್ರಿ 7:30 ವೇಳೆಗೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಗ್ರಾಮದಲ್ಲಿನ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಅದಾದ ಬಳಿಕ ಹೆಚ್ಚಿನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
