ಸುಮಾರು 19 ವರ್ಷದ ಯುವತಿಯ ಮೇಲೆ ಆಕೆಯ ಸ್ನೇಹಿತನೋರ್ವ ಅತ್ಯಾಚಾರ ಎಸಗಿದ್ದು, ಇನ್ನಿಬ್ಬರು ಸ್ನೇಹಿತರು ಅದರ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಯುವತಿಯ 22 ವರ್ಷದ ಸ್ನೇಹಿತ, ಆಕೆಯ ಸ್ನೇಹಿತೆ ಮತ್ತು ಇನ್ನೋರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಮತ್ತೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನ; ಆರೋಪಿ ಬಂಧನ
ಪೊಲೀಸರ ಪ್ರಕಾರ ಈ ಘಟನೆಯು 2024ರ ಡಿಸೆಂಬರ್ 29ರಂದು ಭಿವಾಂಡಿಯ ಕಮಾತ್‌ಘರ್ ಪ್ರದೇಶದಲ್ಲಿ ನಡೆದಿದೆ. ಮಧ್ಯಾಹ್ನದ ವೇಳೆ ಯುವತಿಯ ಸ್ನೇಹಿತ ವಾಕಿಂಗ್‌ಗೆ ಬರುವಂತೆ ಒತ್ತಾಯಿಸಿದ್ದಾನೆ. ಬಳಿಕ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಯುವಕ ಅತ್ಯಾಚಾರ ಎಸಗುತ್ತಿದ್ದಾಗ ಇನ್ನಿಬ್ಬರು ಅದರ ವಿಡಿಯೋವನ್ನು ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಯುವತಿ ಅತ್ಯಾಚಾರದ ಬಗ್ಗೆ ದೂರು ದಾಖಲಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
“ಯುವತಿಯ ದೂರಿನ ಆಧಾರದಲ್ಲಿ ನಾವು ಇಬ್ಬರು ಯುವಕರು ಮತ್ತು ಯುವತಿಯ ಸ್ನೇಹಿತೆಯನ್ನು ಬಂಧಿಸಿದ್ದೇವೆ. ಮೂವರನ್ನು ನ್ಯಾಯಾಲಯವು ಫೆಬ್ರವರಿ 12ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಕೃಷ್ಣದೇವ ಖರಾಡೆ ಮಾಹಿತಿ ನೀಡಿದ್ದಾರೆ.
