ಉತ್ತರ ಪ್ರದೇಶದ ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ (FSL) ಕನಿಷ್ಠ ಸೌಕರ್ಯ ಹಾಗೂ ತಂತ್ರಜ್ಞಾನದ ಕೊರತೆಯಿಂದಾಗಿ ಅತ್ಯಾಚಾರ ಮತ್ತು ಕೊಲೆಯಂತಹ ಘೋರ ಅಪರಾಧಗಳ ಆರೋಪಿಗಳು ಸುಲಭವಾಗಿ ಜಾಮೀನು ಪಡೆಯುತ್ತಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಹೈಕೋರ್ಟ್ ಈ ಗಂಭೀರ ನ್ಯೂನ್ಯತೆಗಳನ್ನು ಸರಿಪಡಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹಸ್ತಕ್ಷೇಪ ಕೋರಿದ್ದು, ಆದೇಶದ ಪ್ರತಿಯನ್ನು ಅವರಿಗೆ ರವಾನಿಸಲು ಸೂಚಿಸಿದೆ.
ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರಿದ್ದ ಪೀಠವು ಮೇ.21 ರಂದು ನೀಡಿದ ಆದೇಶದಲ್ಲಿ, “ರಾಜ್ಯ ಸರ್ಕಾರವು FSLಗಳಿಗೆ ಅತ್ಯಾಧುನಿಕ ಯಂತ್ರಗಳು ಮತ್ತು ಅಗತ್ಯ ಸಿಬ್ಬಂದಿಯನ್ನು ಒದಗಿಸುವ ಮೂಲಕ ಈ ಕೊರತೆಗಳನ್ನು ತಕ್ಷಣವೇ ನೀಗಿಸಬೇಕು” ಎಂದಿದೆ.
ಕಳೆದ ವರ್ಷ (ನವೆಂಬರ್ 2025 ರಿಂದ ಜೈಲಿನಲ್ಲಿದ್ದ) ಮಹಿಳೆಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಮನೋಜ್ ಎಂಬಾತನ ಜಾಮೀನು ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅವಲೋಕನಗಳನ್ನು ಮಾಡಿದೆ.
ಆರೋಪಿಯ ಪರ ವಕೀಲರು, “ಎಫ್‌ಎಸ್‌ಎಲ್ ವರದಿಯಲ್ಲಿ ಆರೋಪಿಯ ಡಿಎನ್‌ಎ ಸಂತ್ರಸ್ತೆಯ ಮಾದರಿಗೆ ಹೊಂದಾಣಿಕೆಯಾಗಿಲ್ಲ, ಆದ್ದರಿಂದ ಆತ ನಿರಪರಾಧಿ” ಎಂದು ವಾದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಇದು ಅತ್ಯಂತ ಘೋರವಾದ ಅಪರಾಧವಾಗಿದ್ದರೂ, ಸೂಕ್ತ ವೈಜ್ಞಾನಿಕ ಪುರಾವೆಗಳ ಕೊರತೆಯಿಂದಾಗಿ ನಾನು ಭಾರವಾದ ಹೃದಯ ಮತ್ತು ತೀವ್ರ ನೋವಿನಿಂದ ಆರೋಪಿಗೆ ಜಾಮೀನು ನೀಡಲು ಅನಿವಾರ್ಯವಾಗಿ ನಿರ್ಬಂಧಿತನಾಗಿದ್ದೇನೆ” ಎಂದರು. ವರದಿಯಲ್ಲಿ ಹೊಂದಾಣಿಕೆಯಾಗದಿರಲು ಆರೋಪಿ ನಿರಪರಾಧಿಯಾಗಿರುವುದು ಕಾರಣವಲ್ಲ, ಬದಲಿಗೆ ಎಫ್‌ಎಸ್‌ಎಲ್‌ನ ಕಳಪೆ ತಂತ್ರಜ್ಞಾನದಿಂದಾಗಿ ಡಿಎನ್‌ಎ ಪ್ರೊಫೈಲ್ ಸರಿಯಾಗಿ ಮೂಡಿಬರದಿರುವುದೇ ಕಾರಣ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಲವು ಪ್ರಕರಣಗಳು ನ್ಯಾಯಾಲಯದ ಮುಂದೆ ಬರುತ್ತಿವೆ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತೆಯ ಸ್ವ್ಯಾಬ್ (Vaginal Swab) ಮತ್ತು ಆರೋಪಿಯ ಡಿಎನ್‌ಎ ಮಾದರಿಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುತ್ತದೆಯಾದರೂ, ತಾಂತ್ರಿಕ ಕೊರತೆಯಿಂದಾಗಿ ಹೆಚ್ಚಿನ ವರದಿಗಳು “ಡಿಎನ್‌ಎ ಪ್ರೊಫೈಲ್ ಅಪೂರ್ಣವಾಗಿದೆ” ಎಂದೇ ಬರುತ್ತಿವೆ. ಇದರಿಂದಾಗಿ ಅಪರಾಧದ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ.
ಎಫ್‌ಎಸ್‌ಎಲ್‌ಗಳಲ್ಲಿ ಹಳೆಯ ಯಂತ್ರಗಳು ಮತ್ತು ಅಪೂರ್ಣ ಮೂಲಸೌಕರ್ಯಗಳೇ ಇದಕ್ಕೆ ಮುಖ್ಯ ಕಾರಣ. ಎಫ್‌ಎಸ್‌ಎಲ್‌ಗಳಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ವಿಷಯಗಳೇ ಮುಖ್ಯವಾಗಿವೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶ ಎಫ್‌ಎಸ್‌ಎಲ್ ನಿರ್ದೇಶಕರು ರಾಜ್ಯದ ಲ್ಯಾಬ್‌ಗಳಲ್ಲಿ ತೀವ್ರ ಸಿಬ್ಬಂದಿ ಕೊರತೆ ಇರುವುದನ್ನು ಕೋರ್ಟ್ ಗಮನಕ್ಕೆ ತಂದಿದ್ದರು.
ನಿಖರವಾದ ಪುರಾವೆಗಳಿಲ್ಲದೆ ಆರೋಪಿಯನ್ನು ಜೈಲಿನಲ್ಲಿಡಲು ಸಾಧ್ಯವಾಗದ ಕಾರಣ ನ್ಯಾಯಾಲಯವು ಅಂತಿಮವಾಗಿ ಜಾಮೀನು ಮಂಜೂರು ಮಾಡಿದೆ, ಆದರೆ ತನಿಖಾ ವ್ಯವಸ್ಥೆಯಲ್ಲಿನ ಈ ಬೃಹತ್ ಲೋಪವನ್ನು ಸರಿಪಡಿಸಲು ಯುಪಿ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.





