2023ರಲ್ಲಿ ಪಕ್ಷವು ಅಧಿಕಾರಕ್ಕೇರಲು ಸಿದ್ದರಾಮಯ್ಯನವರ ಮಾಸ್ ಲೀಡರ್ಶಿಪ್ ಮತ್ತು ಡಿಕೆ ಶಿವಕುಮಾರ್ ಅವರ ಸಂಘಟನಾ ಚತುರತೆ ನೆರವಾಗಿದ್ದವು. ಹೀಗಾಗಿ ಸಿದ್ದರಾಮಯ್ಯನವರ ಬಳಿಕ ಡಿಕೆಶಿಯವರೇ ಮುಖ್ಯಮಂತ್ರಿಯಾಗುತ್ತಾರೆ ಎಂಬ ಚರ್ಚೆ ಆರಂಭದಿಂದಲೂ ಇತ್ತು. ಕರ್ನಾಟಕದಲ್ಲಿ ಹೆಚ್ಚು ದಿನ ಅಧಿಕಾರ ನಡೆಸಿದ ಮುಖ್ಯಮಂತ್ರಿ ಎಂಬ ಖ್ಯಾತಿ ತಮ್ಮದಾಗಿಸಿಕೊಂಡ ಸಿದ್ದರಾಮಯ್ಯನವರು, ಪಂಚೆಯುಟ್ಟು ಆಡಳಿತ ನಡೆಸಿದ ಕೊನೆಯ ಮುಖ್ಯಮಂತ್ರಿಯೂ ಹೌದು. ಅಂತಿಮವಾಗಿ ಅವರು ನಿರ್ಗಮಿಸಿದ್ದಾರೆ.
ಬಂಡಾಯ ಏಳುವುದಕ್ಕೆ ಎಲ್ಲ ಅವಕಾಶಗಳಿದ್ದರೂ ಬಹಳ ಘನತೆಯಿಂದ ಅಧಿಕಾರ ತೊರೆದ ಸಿದ್ದರಾಮಯ್ಯನವರು, ಕರ್ನಾಟಕ ರಾಜಕೀಯ ಚರಿತ್ರೆಯ ಏಳುಬೀಳುಗಳನ್ನು ನಮಗೆ ನೆನಪಿಸುತ್ತಿರುವುದಂತೂ ದಿಟ. ಅರಸು ಕಾಲದಿಂದ ಹಿಡಿದು ಧರಂ ಸಿಂಗ್ ಅವರ ಕಾಲದವರೆಗೆ ಕಾಣಿಸುವ ನಾಯಕರು ಅಧಿಕಾರದ ಕಚ್ಚಾಟದ ನಡುವೆಯೂ ಕರ್ನಾಟಕದ ರಾಜಕಾರಣವನ್ನು ಬಹುವಿಧದಲ್ಲಿ ಮರುರೂಪಿಸಿದರು. ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ನಡುವಿನ ಗುದ್ದಾಟದಿಂದ ಮತ್ತು ಬಂಗಾರಪ್ಪನವರು ಕೆಲಕಾಲ ಬಿಜೆಪಿ ಜೊತೆ ಹೋಗಿದ್ದರಿಂದ ಕರ್ನಾಟಕದಲ್ಲಿ ಕೋಮುವಾದಿಗಳು ಬಲ ಹೆಚ್ಚಿಸಿಕೊಂಡರು. ಆದರೆ ದೊಡ್ಡ ಮಟ್ಟದಲ್ಲಿ ಮತೀಯವಾದಿಗಳಿಗೆ ಶಕ್ತಿ ಬಂದಿದ್ದು- ಕುಮಾರಸ್ವಾಮಿಯವರ ಎಡವಟ್ಟಿನಿಂದ. ಯಡಿಯೂರಪ್ಪನವರ ಜೊತೆ ಸೇರಿ, ಸಮ್ಮಿಶ್ರ ಸರ್ಕಾರವನ್ನು ಕೆಡವಿ ಮುಖ್ಯಮಂತ್ರಿಯಾದಾಗಲೇ ಕೋಮುಶಕ್ತಿಗಳಿಗೆ ಅಧಿಕಾರದ ರುಚಿ ಹತ್ತಿಸಿಯಾಗಿತ್ತು. ಇನ್ನೊಂದೆಡೆ ಒಪ್ಪಂದದ ಪ್ರಕಾರ ಯಡಿಯೂರಪ್ಪನವರಿಗೆ ಕುರ್ಚಿಯನ್ನು ಬಿಟ್ಟುಕೊಡದ ಕುಮಾರಸ್ವಾಮಿಯವರು ಕೋಮುರಾಜಕಾರಣದ ಬಲವರ್ಧನೆಗೆ ದೊಡ್ಡ ಕೊಡುಗೆ ನೀಡಿದರೆಂದೇ ಹೇಳಬೇಕಾಗುತ್ತದೆ. ಬಹುಶಃ ಅಧಿಕಾರ ಹಸ್ತಾಂತರ ರಾಜಕಾರಣದಲ್ಲಿ ಗುರುತಿಸಬೇಕಾದ ಮುಖ್ಯ ಘಟನೆಯಾಗಿ ಇದು ಉಳಿಯುತ್ತದೆ.
ಬಿಎಸ್ವೈ- ಎಚ್ಡಿಕೆ ನಡುವಿನ ಒಪ್ಪಂದದ ಪ್ರಕಾರ ಅಕ್ಟೋಬರ್ 3, 2007 ಕ್ಕೆ ಕುಮಾರಸ್ವಾಮಿಯವರ ಅವಧಿ ಮುಗಿಯುತ್ತಿತ್ತು. ಆದರೆ ಬಿಜೆಪಿಗೆ ಅಧಿಕಾರ ನೀಡಲು ಹಿಂಜರಿದಾಗ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿ, ಕುಮಾರಸ್ವಾಮಿ ರಾಜೀನಾಮೆ ನೀಡಿದರು. ರಾಜ್ಯದಲ್ಲಿ ಸ್ಥಿರ ಸರ್ಕಾರ ರಚನೆ ಸಾಧ್ಯವಾಗದ ಕಾರಣ ಅಕ್ಟೋಬರ್ 10, 2007 ರಂದು ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿತು. ರಾಷ್ಟ್ರಪತಿ ಆಳ್ವಿಕೆ ಬಂದ ಕೆಲವೇ ದಿನಗಳಲ್ಲಿ, ಜೆಡಿಎಸ್ ಶಾಸಕರು ಮತ್ತೆ ಬಿಜೆಪಿಗೆ ಬೆಂಬಲ ನೀಡಲು ಒಪ್ಪಿಕೊಂಡರು. ನವೆಂಬರ್ 12, 2007 ರಂದು ಬಿ. ಎಸ್. ಯಡಿಯೂರಪ್ಪನವರು ದಕ್ಷಿಣ ಭಾರತದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಈ ಮರುಮೈತ್ರಿಯೂ ದೀರ್ಘಕಾಲ ಉಳಿಯಲಿಲ್ಲ. ಖಾತೆಗಳ ಹಂಚಿಕೆ ಮತ್ತು ಕೆಲವು ಷರತ್ತುಗಳ ಒಪ್ಪಂದಕ್ಕೆ ಸಹಿ ಹಾಕಲು ಯಡಿಯೂರಪ್ಪ ನಿರಾಕರಿಸಿದರು ಎಂಬ ಕಾರಣಕ್ಕೆ ಜೆಡಿಎಸ್ ಕೇವಲ ಒಂದು ವಾರದಲ್ಲೇ (ನವೆಂಬರ್ 19, 2007) ಬೆಂಬಲ ವಾಪಸ್ ಪಡೆಯಿತು. ಯಡಿಯೂರಪ್ಪನವರು ಕೇವಲ 7 ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತದನಂತರ ರಾಜ್ಯದಲ್ಲಿ ಮತ್ತೆ ರಾಷ್ಟ್ರಪತಿ ಆಳ್ವಿಕೆ ಬಂದು, 2008ರಲ್ಲಿ ಮಧ್ಯಂತರ ಚುನಾವಣೆ ಎದುರಾಯಿತು.
ಇದನ್ನು ಓದಿದ್ದೀರಾ? ಅಧಿಕಾರ ಹಸ್ತಾಂತರ ಚರಿತ್ರೆ: ಸಿದ್ದರಾಮಯ್ಯ ಬಿಟ್ಟು ಹೋದ ಆ ಮುತ್ಸದ್ದಿತನ… (ಭಾಗ-1)
“ಕುಮಾರಸ್ವಾಮಿ ಮಹಾವಿಶ್ವಾಸದ್ರೋಹ ಮಾಡಿದ್ದಾರೆ ಮತ್ತು ಬೆನ್ನಿಗೆ ಇರಿದ ಕೆಲಸ ಮಾಡಿದ್ದಾರೆ” ಎಂದು ಯಡಿಯೂರಪ್ಪ ಸಾರ್ವಜನಿಕವಾಗಿ ಆಕ್ರೋಶ ಹೊರಹಾಕಿದರು. “ಒಬ್ಬ ಸಣ್ಣ ಮಗುವೂ ಕೊಟ್ಟ ಮಾತಿಗೆ ತಪ್ಪುವುದಿಲ್ಲ, ಆದರೆ ಕುಮಾರಸ್ವಾಮಿ ಇಡೀ ನಾಡಿನ ಜನತೆಯ ಮುಂದೆ ಕೊಟ್ಟ ಮಾತನ್ನು ತಪ್ಪಿದ್ದಾರೆ” ಎಂದು ಗುಡುಗಿದರು. ಯಡಿಯೂರಪ್ಪನವರು ತಮಗೆ ಆದ ಅನ್ಯಾಯವನ್ನು ನೇರವಾಗಿ ಜನರ ಬಳಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದರು. ಕಣ್ಣೀರು ಹಾಕುತ್ತಲೇ, “ನನಗೆ ಸಿಎಂ ಸ್ಥಾನ ಸಿಗಲಿಲ್ಲ ಎನ್ನುವುದಕ್ಕಿಂತ, ಜನತೆಗೆ ಕೊಟ್ಟ ಮಾತು ತಪ್ಪಿದ ಜೆಡಿಎಸ್ ನಡವಳಿಕೆಯಿಂದ ನೋವಾಗಿದೆ. ನಾನು ಜನರ ನ್ಯಾಯಾಲಯಕ್ಕೆ ಹೋಗುತ್ತೇನೆ” ಎಂದು ಘೋಷಿಸಿದರು. ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನಗಳನ್ನು ಗೆದ್ದಿತು. ಬಹುಮತ ಇಲ್ಲದ ಕಾರಣ ಆಪರೇಷನ್ ಕಮಲ ಎಂಬ ಕೆಟ್ಟ ರಾಜಕಾರಣಕ್ಕೆ ನಾಂದಿ ಹಾಡಿದ ಯಡಿಯೂರಪ್ಪನವರು ಮುಖ್ಯಮಂತ್ರಿ ಪದವಿಗೆ ಏರಿದರು.
ಸದಾನಂದಗೌಡರ ಪ್ರವೇಶ ಮತ್ತು ನಿರ್ಗಮನ
2011ರಲ್ಲಿ ಬಿ. ಎಸ್. ಯಡಿಯೂರಪ್ಪನವರಿಂದ ಡಿ. ವಿ. ಸದಾನಂದ ಗೌಡರಿಗೆ ಮುಖ್ಯಮಂತ್ರಿ ಸ್ಥಾನ ವರ್ಗಾವಣೆಯಾದ ಘಟನೆ ಕರ್ನಾಟಕ ರಾಜಕಾರಣದ ಮತ್ತೊಂದು ಅತ್ಯಂತ ರೋಚಕ ಮತ್ತು ನಾಟಕೀಯ ಅಧ್ಯಾಯ. ಯಡಿಯೂರಪ್ಪನವರು ಸುಲಭವಾಗಿ ಕುರ್ಚಿಯನ್ನು ಬಿಟ್ಟುಕೊಡಲಿಲ್ಲ. ಅದಕ್ಕಾಗಿ ಹೈಕಮಾಂಡ್ ಜೊತೆ ದೊಡ್ಡ ಮಟ್ಟದ ಜಿದ್ದಾಜಿದ್ದಿ ನಡೆಸಿಯೇ ಇಳಿಯಬೇಕಾಯಿತು.
ಅಂದಿನ ಲೋಕಾಯುಕ್ತರಾಗಿದ್ದ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆಯವರು ಜುಲೈ 2011ರಲ್ಲಿ ರಾಜ್ಯದ ಅಕ್ರಮ ಗಣಿಗಾರಿಕೆ ಹಗರಣದ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು. ಈ ವರದಿಯಲ್ಲಿ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪಗಳಿದ್ದವು. ವರದಿ ಹೊರಬೀಳುತ್ತಿದ್ದಂತೆ ಬಿಜೆಪಿಯ ರಾಷ್ಟ್ರೀಯ ನಾಯಕತ್ವಕ್ಕೆ ಬೇಸರವಾಯಿತು. ಯುಪಿಎ ಸರ್ಕಾರದ ಹಗರಣಗಳ ವಿರುದ್ಧ ಬಿಜೆಪಿ ಹೈಕಮಾಂಡ್ ಹೋರಾಡುವಾಗ ಬಿಎಸ್ ಯಡಿಯೂರಪ್ಪನವರ ಮೇಲಿನ ಆರೋಪಗಳು ಮಗ್ಗಲುಮುಳ್ಳಾಗಿದ್ದವು. ಪಕ್ಷದ ‘ಭ್ರಷ್ಟಾಚಾರ ವಿರೋಧಿ’ ಇಮೇಜ್ ಉಳಿಸಿಕೊಳ್ಳುವ ಸಲುವಾಗಿ ಯಡಿಯೂರಪ್ಪ ರಾಜೀನಾಮೆ ನೀಡಲೇಬೇಕು ಎಂಬ ಸಂದೇಶ ರವಾನೆಯಾಯಿತು.
ರಾಜೀನಾಮೆ ನೀಡುವುದು ಅನಿವಾರ್ಯವಾದಾಗ, ಯಡಿಯೂರಪ್ಪನವರು ತಮ್ಮ ರಾಜಕೀಯ ವಿರೋಧಿಯಾಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಅಧಿಕಾರ ಸಿಗಬಾರದು ಎಂದು ಪಟ್ಟುಹಿಡಿದರು. ತಮ್ಮ ಮಾತನ್ನು ಕೇಳುವ, ಯಾವುದೇ ವಿವಾದವಿಲ್ಲದ ಹಾಗೂ ಕರಾವಳಿ ಭಾಗದ ಪ್ರಭಾವಿ ಒಕ್ಕಲಿಗ ನಾಯಕರಾಗಿದ್ದ ಡಿ. ವಿ. ಸದಾನಂದ ಗೌಡರನ್ನು (ಅಂದು ಅವರು ಸಂಸದರಾಗಿದ್ದರು) ಯಡಿಯೂರಪ್ಪನವರೇ ಹೈಕಮಾಂಡ್ ಮುಂದೆ ತಮ್ಮ ‘ಡಮ್ಮಿ’ ಅಭ್ಯರ್ಥಿಯನ್ನಾಗಿ ಪ್ರಸ್ತಾಪಿಸಿದರು. ಆದರೆ ಡಿ. ವಿ. ಸದಾನಂದ ಗೌಡರು ಕೊನೆಯವರೆಗೂ ಬಿ. ಎಸ್. ಯಡಿಯೂರಪ್ಪನವರಿಗೆ ನಿಷ್ಠರಾಗಿ ಉಳಿಯಲಿಲ್ಲ. ಯಡಿಯೂರಪ್ಪನವರು ತಮ್ಮ ಮಾತು ಕೇಳುತ್ತಾರೆಂಬ ಏಕೈಕ ಕಾರಣಕ್ಕೆ ಸದಾನಂದ ಗೌಡರನ್ನು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂರಿಸಿದ್ದರು. ಆದರೆ, ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ಇಬ್ಬರ ನಡುವಿನ ಸಂಬಂಧ ಸಂಪೂರ್ಣವಾಗಿ ಹಳಸಿತು.
ಅಂದು ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಕಟುವಾಗಿ ವಿರೋಧಿಸುತ್ತಿದ್ದ ಅನಂತ ಕುಮಾರ್, ಕೆ. ಎಸ್. ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಬಣದೊಂದಿಗೆ ಸದಾನಂದ ಗೌಡರು ಆಪ್ತತೆ ಬೆಳೆಸಿಕೊಂಡರು. ಯಡಿಯೂರಪ್ಪನವರ ಹಿಡಿತವನ್ನು ತಪ್ಪಿಸಲು ಹೈಕಮಾಂಡ್ ಮತ್ತು ಈ ವಿರೋಧಿ ಬಣ ಡಿವಿಎಸ್ ಅವರಿಗೆ ಬೆಂಬಲವಾಗಿ ನಿಂತಿತು. ತಮಗೆ ಮುಖ್ಯಮಂತ್ರಿ ಸ್ಥಾನ ತಂದುಕೊಟ್ಟ ನಾಯಕನನ್ನೇ ಬದಿಗೊತ್ತಿ, ಅವರ ವಿರೋಧಿಗಳ ಜೊತೆ ಗೌಡರು ಕೈಜೋಡಿಸಿದ್ದು ಯಡಿಯೂರಪ್ಪನವರಿಗೆ ಮಾಡಿದ ‘ವಿಶ್ವಾಸದ್ರೋಹ’ ಎಂದು ಬಿಎಸ್ವೈ ಆಪ್ತರು ಬಿಂಬಿಸಿದರು.
ಹೈಕೋರ್ಟ್ನಿಂದ ತಮಗೆ ಸಮಾಧಾನಕರ ತೀರ್ಪು ಬಂದ ತಕ್ಷಣ ಯಡಿಯೂರಪ್ಪನವರು ತಮಗೆ ಮರಳಿ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಆದರೆ ಸದಾನಂದ ಗೌಡರು ಸ್ವಯಂಪ್ರೇರಿತರಾಗಿ ಕುರ್ಚಿ ಬಿಟ್ಟುಕೊಡಲು ನಿರಾಕರಿಸಿದರು. “ನನ್ನನ್ನು ಹೈಕಮಾಂಡ್ ಹೈಕೋರ್ಟ್ ಆದೇಶದ ಮೇರೆಗೆ ಸಿಎಂ ಮಾಡಿದೆ, ಹೈಕಮಾಂಡ್ ಹೇಳಿದರೆ ಮಾತ್ರ ನಾನು ಇಳಿಯುತ್ತೇನೆ” ಎಂದು ಪರೋಕ್ಷವಾಗಿ ಯಡಿಯೂರಪ್ಪನವರಿಗೆ ಸವಾಲು ಹಾಕಿದರು. ಜೊತೆಗೆ ಒಕ್ಕಲಿಗ ಸ್ವಾಮೀಜಿಗಳು ಸದಾನಂದ ಗೌಡರ ಪರ ನಿಂತು, ಶಕ್ತಿಪ್ರದರ್ಶನ ಮಾಡಿದರು.
ಇದನ್ನು ಓದಿದ್ದೀರಾ? ದೇವೇಗೌಡರ ಕೋಟೆಯಲ್ಲಿ ‘ಡಿಕೆಶಿ’ ಗುದ್ದಾಟ; ಒಕ್ಕಲಿಗ ನಾಯಕತ್ವ ಪಟ್ಟ ಸುಲಭವೇ?
ಸದಾನಂದ ಗೌಡರ ಈ ‘ಬಂಡಾಯ’ದಿಂದ ಕೋಪೋದ್ರಿಕ್ತರಾದ ಯಡಿಯೂರಪ್ಪ, ತಮ್ಮ ನಿಷ್ಠಾವಂತ ಶಾಸಕರನ್ನು ಕರೆದುಕೊಂಡು ಮತ್ತೆ ರೆಸಾರ್ಟ್ ರಾಜಕೀಯ ಆರಂಭಿಸಿದರು. ಡಿವಿಎಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುವುದಾಗಿ ಹೈಕಮಾಂಡ್ಗೆ ಅಂತಿಮ ಎಚ್ಚರಿಕೆ ನೀಡಿದರು.
ಕೊನೆಗೆ ಯಡಿಯೂರಪ್ಪನವರ ಒತ್ತಡಕ್ಕೆ ಮಣಿದ ಬಿಜೆಪಿ ಹೈಕಮಾಂಡ್, ಕೇವಲ 11 ತಿಂಗಳು ಅಧಿಕಾರ ನಡೆಸಿದ್ದ ಸದಾನಂದ ಗೌಡರನ್ನು ಜುಲೈ 2012ರಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಸಿತು. ವಿಶೇಷವೆಂದರೆ, ಅಂದು ಯಾರನ್ನು ಸೋಲಿಸಿ ಗೌಡರನ್ನು ಸಿಎಂ ಮಾಡಿದ್ದರೋ, ಅದೇ ಜಗದೀಶ್ ಶೆಟ್ಟರ್ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಯಡಿಯೂರಪ್ಪ ಆಯ್ಕೆ ಮಾಡಿದರು! ತಮ್ಮ ಸ್ವಾರ್ಥಕ್ಕಾಗಿ ಯಡಿಯೂರಪ್ಪನವರು ಇನ್ನೊಬ್ಬ ಲಿಂಗಾಯತ ನಾಯಕ ಬೆಳೆಯಲು ಬಿಡುತ್ತಿಲ್ಲ ಎಂಬ ಅಪವಾದವನ್ನು ತೊಳೆದುಕೊಳ್ಳಲು ಶೆಟ್ಟರ್ ಅವರ ಹೆಸರು ಸೂಚಿಸುವುದು ಅವರಿಗೆ ಅನಿವಾರ್ಯವಾಗಿತ್ತು.
ಅಂತಿಮವಾಗಿ ಹೈಕಮಾಂಡ್ ಸೂಚನೆಯಂತೆ ಜುಲೈ 10, 2012 ರಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆರಿಸಲಾಯಿತು. 12 ಜುಲೈ 2012 ರಂದು ಜಗದೀಶ್ ಶೆಟ್ಟರ್ ಕರ್ನಾಟಕದ 21ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಯಡಿಯೂರಪ್ಪನವರು ಸದಾನಂದ ಗೌಡರನ್ನು ಕೆಳಗಿಳಿಸಿ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಮಾಡಿದ್ದರ ಹಿಂದೆ, ತಮಗೆ ಮರಳಿ ಪಕ್ಷದಲ್ಲಿ ಸರ್ವಾಧಿಕಾರ ಸಿಗುತ್ತದೆ ಎಂಬ ಆಸೆಯಿತ್ತು. ಆದರೆ ಶೆಟ್ಟರ್ ಸಿಎಂ ಆದ ಮೇಲೆಯೂ ಹೈಕಮಾಂಡ್ ಯಡಿಯೂರಪ್ಪನವರನ್ನು ಕಡೆಗಣಿಸಿತು. ಇದರಿಂದ ತೀವ್ರ ನೊಂದ ಯಡಿಯೂರಪ್ಪ, ಕೆಲವೇ ತಿಂಗಳುಗಳಲ್ಲಿ (ಡಿಸೆಂಬರ್ 2012) ಬಿಜೆಪಿಗೆ ರಾಜೀನಾಮೆ ನೀಡಿ ‘ಕರ್ನಾಟಕ ಜನತಾ ಪಕ್ಷ’ (KJP) ಕಟ್ಟಿದರು. 2013ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರ ಈ ಆಂತರಿಕ ಜಗಳವೇ ಪ್ರಮುಖ ಕಾರಣವಾಯಿತು.
ಯಡಿಯೂರಪ್ಪನವರ ಅಧಿಕಾರ ಹಸ್ತಾಂತರ ಪರ್ವ
2013ರಲ್ಲಿ ಕಾಂಗ್ರೆಸ್ ಬಹುಮತ ಪಡೆದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಐದು ವರ್ಷ ಪೂರ್ಣಾವಧಿ ಅಧಿಕಾರ ನಡೆಸಿದ ಶ್ರೇಯಸ್ಸು ಅವರದ್ದಾಗಿತ್ತು. ಆದರೆ 2018ರಲ್ಲಿ ಸಿದ್ದರಾಮಯ್ಯನವರ ಮೊದಲ ಅವಧಿ ಮುಗಿದ ಬಳಿಕ ಕರ್ನಾಟಕ ರಾಜಕಾರಣದಲ್ಲಿ ನಡೆದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಭಾರತೀಯ ರಾಜಕೀಯ ಇತಿಹಾಸದಲ್ಲೇ ಅತ್ಯಂತ ರೋಚಕ, ವಿವಾದಾತ್ಮಕ ಮತ್ತು ದೊಡ್ಡ ಹೈಡ್ರಾಮಾಗಳಿಗೆ ಸಾಕ್ಷಿಯಾಯಿತು.
ಸಿದ್ದರಾಮಯ್ಯನವರ ನಂತರ ಮತ್ತೊಮ್ಮೆ ಬಿ. ಎಸ್. ಯಡಿಯೂರಪ್ಪನವರು ಕೇವಲ 3 ದಿನಕ್ಕೆ ಮುಖ್ಯಮಂತ್ರಿಯಾದರೆ, ತದನಂತರ ಎಚ್. ಡಿ. ಕುಮಾರಸ್ವಾಮಿಯವರು ಕಾಂಗ್ರೆಸ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು. ಈ ಅಧಿಕಾರ ಹಸ್ತಾಂತರವು ಯಾವುದೇ ಕಾರಣಕ್ಕೂ ಸುಲಭವಾಗಿ ಆಗಲಿಲ್ಲ.
224 ಸದಸ್ಯರ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 113 ಸ್ಥಾನಗಳ ಅಗತ್ಯವಿತ್ತು. ಬಿಜೆಪಿ 104 ಸ್ಥಾನ ಪಡೆದು ದೊಡ್ಡ ಪಕ್ಷವಾಗಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಚುನಾವಣೋತ್ತರ ಒಪ್ಪಂದ ಮಾಡಿಕೊಂಡವು. ಆದರೆ ಯಡಿಯೂರಪ್ಪನವರಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಿದರು. ಅಂದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿ. ಎಸ್. ಯಡಿಯೂರಪ್ಪನವರನ್ನು ಆಹ್ವಾನಿಸಿ ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದರು. ಅಂದರೆ ಕುದುರೆ ವ್ಯಾಪಾರ ನಡೆಸಲು ರಾಜ್ಯಪಾಲರೇ ಪ್ರೋತ್ಸಾಹಿಸಿದಂತಿತ್ತು. ಇದನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇತಿಹಾಸದಲ್ಲೇ ಮೊದಲ ಬಾರಿಗೆ ಮಧ್ಯರಾತ್ರಿ ಸುಪ್ರೀಂ ಕೋರ್ಟ್ ಕದ ತಟ್ಟಿದರು! ಸುಪ್ರೀಂ ಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ, ರಾಜ್ಯಪಾಲರು ನೀಡಿದ್ದ 15 ದಿನಗಳ ಕಾಲಾವಕಾಶವನ್ನು ಕಡಿತಗೊಳಿಸಿ, “ನಾಳೆಯೇ (ಮೇ 19) ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ” ಎಂದು ಯಡಿಯೂರಪ್ಪನವರಿಗೆ ಆದೇಶಿಸಿತು.
ಬಿಜೆಪಿಯವರು ತಮ್ಮ ಶಾಸಕರನ್ನು ಸೆಳೆಯಬಹುದು (ಆಪರೇಷನ್ ಕಮಲ) ಎಂಬ ಭಯದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಎಲ್ಲ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ನಿಂದ ರಾತ್ರೋರಾತ್ರಿ ಬಸ್ಗಳ ಮೂಲಕ ಹೈದರಾಬಾದ್ನ ಹೋಟೆಲ್ಗೆ ಶಿಫ್ಟ್ ಮಾಡಿದವು. ಮೇ 19, 2018 ರಂದು ಶಾಸಕರೆಲ್ಲರೂ ಬಿಗಿ ಭದ್ರತೆಯಲ್ಲಿ ವಿಧಾನಸಭೆಗೆ ಬಂದರು. ಸಂಖ್ಯಾಬಲದ ಕೊರತೆಯಿರುವುದು ಪಕ್ಕಾ ಆಗುತ್ತಿದ್ದಂತೆ, ಯಡಿಯೂರಪ್ಪನವರು ವಿಶ್ವಾಸಮತ ಯಾಚನೆಗೂ ಮುನ್ನವೇ ಭಾವನಾತ್ಮಕ ಭಾಷಣ ಮಾಡಿ ಕಣ್ಣೀರು ಹಾಕುತ್ತಾ ಕೇವಲ 3 ದಿನಕ್ಕೆ (55 ಗಂಟೆಗಳಲ್ಲಿ) ರಾಜೀನಾಮೆ ನೀಡಿದರು. ಅಂತಿಮವಾಗಿ ಕುಮಾರಸ್ವಾಮಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು.
ಕಿಂಗ್ ಮೇಕರ್ ಆಗಿ ಅಧಿಕಾರಕ್ಕೇರಿದ ಕುಮಾರಸ್ವಾಮಿಯವರು ತಮ್ಮನ್ನು ಸಾಂದರ್ಭಿಕ ಶಿಶು ಎಂದೇ ಭಾವಿಸಿದ್ದರು. ಆದರೆ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲೇ ಅವರು ಕಾಲ ಕಳೆದರು. 14 ತಿಂಗಳುಗಳ ಕಾಲ ನಿರಂತರ ಆಂತರಿಕ ಕಚ್ಚಾಟ ಹಾಗೂ ಅಸಮಾಧಾನದ ಬೆಂಕಿಯಲ್ಲಿ ಬೇಯುತ್ತಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ಅಂತಿಮವಾಗಿ “ಆಪರೇಷನ್ ಕಮಲ”ದ ಭಾರಿ ಬಿರುಗಾಳಿಗೆ ಸಿಲುಕಿ ಪತನಗೊಂಡಿತು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದ 28 ಕ್ಷೇತ್ರಗಳಲ್ಲಿ 25 ಸ್ಥಾನಗಳನ್ನು ಗೆದ್ದು ಬೀಗಿದರೆ, ಮೈತ್ರಿಯಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ತಲಾ ಒಂದೊಂದು ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಈ ಫಲಿತಾಂಶ ಹೊರಬೀಳುತ್ತಿದ್ದಂತೆ ಮೈತ್ರಿ ಸರ್ಕಾರದಲ್ಲಿ ಅಸ್ಥಿರತೆ ಶುರುವಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ನ ಸರಿಸುಮಾರು 15ಕ್ಕೂ ಹೆಚ್ಚು ಶಾಸಕರು ಹಠಾತ್ತನೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ನೀಡಿದ ತಕ್ಷಣ ಈ ಬಂಡಾಯ ಶಾಸಕರೆಲ್ಲರನ್ನೂ ವಿಶೇಷ ವಿಮಾನದ ಮೂಲಕ ಮುಂಬೈನ ಐಷಾರಾಮಿ ಹೋಟೆಲ್ಗೆ ಕರೆದೊಯ್ದು ಬಿಗಿ ಭದ್ರತೆಯಲ್ಲಿ ಇಡಲಾಯಿತು. ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿಯಿತು ಮತ್ತು ಕುಮಾರಸ್ವಾಮಿ ಸರ್ಕಾರ ಅಲ್ಪಮತಕ್ಕೆ ಸಿಲುಕಿತು. ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಮತ್ತು ಅಂದಿನ ಸಮ್ಮಿಶ್ರ ಸರ್ಕಾರದ ನಾಯಕರು (ವಿಶೇಷವಾಗಿ ಡಿ. ಕೆ. ಶಿವಕುಮಾರ್) ಕೊನೆಕ್ಷಣದವರೆಗೂ ಪ್ರಯತ್ನ ನಡೆಸಿದರು.
ಕುಮಾರಸ್ವಾಮಿಯವರು ಕೊನೆ ಶಾಸಕನ ಮತ ಸಿಗುವವರೆಗೂ ಹೋರಾಟ ನಡೆಸಿಯೇ ಕೆಳಗಿಳಿದರು. ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮತ್ತು ರಾಜ್ಯಪಾಲರ ಕಠಿಣ ಗಡುವುಗಳ ನಂತರ, ಅಂತಿಮವಾಗಿ 23 ಜುಲೈ 2019 ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಕ್ರಿಯೆ ನಡೆಯಿತು. ವಿಶ್ವಾಸಮತದ ಪರವಾಗಿ (ಸರ್ಕಾರದ ಪರ) 99 ಮತಗಳು ಚಲಾಯಿಸಲ್ಪಟ್ಟರೆ, ವಿರುದ್ಧವಾಗಿ (ಬಿಜೆಪಿ ಪರ) 105 ಮತಗಳು ಬಿದ್ದವು. ವಿಶ್ವಾಸಮತದಲ್ಲಿ ಸೋಲುತ್ತಲೇ ಕುಮಾರಸ್ವಾಮಿಯವರು ಸದನದಲ್ಲಿ ಭಾವನಾತ್ಮಕವಾಗಿ ಮಾತನಾಡಿ, “ನಾನು ವಿಷಕಂಠನಂತೆ ನೋವು ನುಂಗಿ ಈ ಸರ್ಕಾರ ನಡೆಸಿದ್ದೇನೆ” ಎಂದು ಹೇಳಿ, ಅಂದೇ ರಾತ್ರಿ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದರು. ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾದರು. ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದ 17 ಬಂಡಾಯ ಶಾಸಕರನ್ನು ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು “ಅನರ್ಹ” ಎಂದು ಘೋಷಿಸಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಕೋರ್ಟ್ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತು.
ಇದನ್ನು ಓದಿದ್ದೀರಾ? ಸಾಲುಸಾಲು ಸವಾಲು ಗೆಲ್ಲಲು ‘ಇಮೇಜ್’ ಬದಲಾಯಿಸಿಕೊಳ್ಳಬಲ್ಲರೆ ‘ಡಿಕೆಶಿ’?
ಅಂತಿಮವಾಗಿ ಚುನಾವಣೆಯಲ್ಲಿ ಗೆದ್ದು, ಅಧಿಕಾರ ಹಿಡಿದ ಯಡಿಯೂರಪ್ಪನವರು ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಆಂತರಿಕ ಕಚ್ಚಾಟ ಮಿತಿಮೀರಿತು. ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರ ವಿಪರೀತ ಹಸ್ತಕ್ಷೇಪದ ವಿರುದ್ಧ ಸ್ವಪಕ್ಷೀಯರಿಂದಲೇ ಟೀಕೆಗಳು ವ್ಯಕ್ತವಾದವು. ಯಡಿಯೂರಪ್ಪನವರಿಂದ ಅಧಿಕಾರ ವಾಪಸ್ ಪಡೆಯಬೇಕೆಂಬ ಆಗ್ರಹಗಳು ಹೆಚ್ಚಾದವು. 2021ರ ಜುಲೈ ತಿಂಗಳಿನಲ್ಲಿ ಬಿ. ಎಸ್. ಯಡಿಯೂರಪ್ಪನವರು ನಾಲ್ಕನೇ ಹಾಗೂ ಕೊನೆಯ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಅಧಿಕಾರ ಹಸ್ತಾಂತರಿಸಲು ಯಡಿಯೂರಪ್ಪನವರಿಗೆ ಇಷ್ಟವಿರಲಿಲ್ಲ. ಲಿಂಗಾಯತ ಸಮುದಾಯದ ನೂರಾರು ಪ್ರಭಾವಿ ಮಠಾಧೀಶರು ಬೆಂಗಳೂರಿನ ಯಡಿಯೂರಪ್ಪನವರ ಅಧಿಕೃತ ನಿವಾಸ ‘ಕಾವೇರಿ’ಗೆ ಧಾವಿಸಿದ್ದರು. “ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿಗೆ ಉಳಿಗಾಲವಿಲ್ಲ” ಎಂದು ಹೈಕಮಾಂಡ್ಗೆ ಎಚ್ಚರಿಕೆ ನೀಡಿದರು. ಜುಲೈ 2021ರಲ್ಲಿ ಯಡಿಯೂರಪ್ಪನವರು ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆ. ಪಿ. ನಡ್ಡಾ ಅವರನ್ನು ಭೇಟಿ ಮಾಡಿದರು. ಕನಿಷ್ಠ ಪಕ್ಷ 2023ರ ಚುನಾವಣೆಯವರೆಗೂ ತಮಗೆ ಅಧಿಕಾರದಲ್ಲಿರಲು ಅವಕಾಶ ನೀಡಬೇಕೆಂದು ವಿನಂತಿಸಿದರು. ಪಕ್ಷದೊಳಗಿನ ತಮ್ಮ ನಿಷ್ಠಾವಂತ ಶಾಸಕರಿಂದ ಹೈಕಮಾಂಡ್ ನಾಯಕರಿಗೆ ಪತ್ರ ಬರೆಸಿ, ನಾಯಕತ್ವ ಬದಲಾವಣೆ ಸದ್ಯಕ್ಕೆ ಬೇಡ ಎಂದು ಒತ್ತಡ ಹೇರಿದರು. ಹೈಕಮಾಂಡ್ ತನ್ನ ನಿರ್ಧಾರದಿಂದ ಒಂದು ಹೆಜ್ಜೆಯೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟವಾದಾಗ, ಅಧಿಕಾರದಿಂದ ಇಳಿಯುವುದೇ ಅಂತಿಮ ಆಯ್ಕೆಯಾಗಿತ್ತು. 26 ಜುಲೈ 2021 ರಂದು ಯಡಿಯೂರಪ್ಪನವರ ಸರ್ಕಾರಕ್ಕೆ ಭರ್ತಿ 2 ವರ್ಷ ತುಂಬಿತ್ತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಾಧನಾ ಸಮಾವೇಶದ ವೇದಿಕೆಯಲ್ಲೇ ಮಾತನಾಡಿದ ಯಡಿಯೂರಪ್ಪನವರು ಭಾಷಣದುದ್ದಕ್ಕೂ ಭಾವುಕರಾಗಿ ಕಣ್ಣೀರು ಹಾಕಿದರು. “ನನಗೆ ಹೈಕಮಾಂಡ್ ಯಾವುದೇ ಅನ್ಯಾಯ ಮಾಡಿಲ್ಲ, ನಾನೇ ಸ್ವಪ್ರೇರಣೆಯಿಂದ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಗದ್ಗದಿತರಾಗಿ ಘೋಷಿಸಿದರು. ಆದರೆ ಯಡಿಯೂರಪ್ಪನವರು ರಾಜೀನಾಮೆ ನೀಡಿದರೂ, ತಮ್ಮ ಉತ್ತರಾಧಿಕಾರಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವಲ್ಲಿ ಮೇಲುಗೈ ಆಯಿತು. ತಮ್ಮ ವಿರೋಧಿ ಬಣದ ಯಾರಿಗೂ ಸಿಎಂ ಪಟ್ಟ ಸಿಗಬಾರದು ಎಂದು ತಂತ್ರ ಹೂಡಿದ ಬಿಎಸ್ವೈ, ಕೊನೆಗೆ ತಮ್ಮ ಅತ್ಯಂತ ಆಪ್ತ ವಲಯದಲ್ಲಿದ್ದ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಹೈಕಮಾಂಡ್ ಮುಂದೆ ಪ್ರಸ್ತಾಪಿಸಿದರು. ಅಧಿಕಾರ ಹಿಡಿದ ಬಸವರಾಜ ಬೊಮ್ಮಾಯಿಯವರು ಕರ್ನಾಟಕದಲ್ಲಿ ಇನ್ನೆಂದೂ ಕಾಣದಂತಹ ಕೋಮುರಾಜಕಾರಣ ನಡೆಸಿ, ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲು ಕಾರಣವಾದರು. ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು, 2ನೇ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.
2023ರಲ್ಲಿ ಪಕ್ಷವು ಅಧಿಕಾರಕ್ಕೇರಲು ಸಿದ್ದರಾಮಯ್ಯನವರ ಮಾಸ್ ಲೀಡರ್ಶಿಪ್ ಮತ್ತು ಡಿಕೆ ಶಿವಕುಮಾರ್ ಅವರ ಸಂಘಟನಾ ಚತುರತೆ ನೆರವಾಗಿದ್ದವು. ಹೀಗಾಗಿ ಸಿದ್ದರಾಮಯ್ಯನವರ ಬಳಿಕ ಡಿಕೆಶಿಯವರೇ ಮುಖ್ಯಮಂತ್ರಿಯಾಗುತ್ತಾರೆ ಎಂಬ ಚರ್ಚೆ ಆರಂಭದಿಂದಲೂ ಇತ್ತು. ಕರ್ನಾಟಕದಲ್ಲಿ ಹೆಚ್ಚು ದಿನ ಅಧಿಕಾರ ನಡೆಸಿದ ಮುಖ್ಯಮಂತ್ರಿ ಎಂಬ ಖ್ಯಾತಿ ತಮ್ಮದಾಗಿಸಿಕೊಂಡ ಸಿದ್ದರಾಮಯ್ಯನವರು, ಪಂಚೆಯುಟ್ಟು ಆಡಳಿತ ನಡೆಸಿದ ಕೊನೆಯ ಮುಖ್ಯಮಂತ್ರಿಯೂ ಹೌದು. ಅಂತಿಮವಾಗಿ ಅವರು ನಿರ್ಗಮಿಸಿದ್ದಾರೆ. ಆದರೆ ಅವರು ಮನಸ್ಸು ಮಾಡಿದ್ದರೆ, ಕುಮಾರಸ್ವಾಮಿ, ಯಡಿಯೂರಪ್ಪನವರಂತೆ ಕುರ್ಚಿಗೆ ಅಂಟಿಕೂರಬಹುದಿತ್ತು; ಬಂಗಾರಪ್ಪ ಮತ್ತು ವೀರೇಂದ್ರ ಪಾಟೀಲ್ ಅವರಂತೆ ಹೈಕಮಾಂಡ್ಗೆ ಸವಾಲು ಎಸೆಯಬಹುದಿತ್ತು. ಆದರೆ ಇಂದಿನ ಕೋಮುವಾದಿ ರಾಜಕಾರಣದ ಕಾಲದಲ್ಲಿ, ಚುನಾವಣೆಗಳನ್ನು ನಡೆಸುವ ತಂತ್ರಗಳೇ ಬದಲಾಗಿರುವ ಕಾಲಘಟ್ಟದಲ್ಲಿ ಯಾವುದೇ ಹೆಚ್ಚಿನ ಕಸರತ್ತು ಮಾಡದೆ, ನಗುಮುಖದಿಂದಲೇ ವಿದಾಯ ಹೇಳಿದ ಸಿದ್ದರಾಮಯ್ಯ ಅವರ ಮುತ್ಸದಿತನ ರಾಜಕಾರಣದಲ್ಲಿ ಬಹುಕಾಲ ಚರ್ಚೆಯಾಗುವುದು ಖಚಿತ.
ಸಿದ್ದರಾಮಯ್ಯನವರು ಯಾವುದೇ ಅಹಂ ಇಲ್ಲದೆ ಅಧಿಕಾರ ಬಿಟ್ಟುಕೊಟ್ಟ ರೀತಿಗೆ ನಾದಬ್ರಹ್ಮ ಹಂಸಲೇಖ ಅವರು ಆರು ಸಾಲುಗಳಲ್ಲಿ ಹೀಗೆ ಬಣ್ಣಿಸಿದ್ದಾರೆ:
ನಿಮ್ಮ ನಡೆ; “ಮುನ್ನಡೆ” !
ನಿಮ್ಮ ನುಡಿ ; “ಚೆನ್ನುಡಿ” !
ನಿಮ್ಮ ನಡತೆ ; ಘನತೆಗೆ “ಮುನ್ನುಡಿ” !
ನೀವಿಂದು
“ಪ್ರಬುದ್ಧ ರಾಮಯ್ಯ”
ಕನ್ನಡದ ಕಹಳೆಯೇ
ಉಘೇ ಉಘೇ




