ಸುಳ್ಳು ಆರೋಪ ಮತ್ತು ಪ್ರಕರಣಗಳಲ್ಲಿ ಜೈಲು ಸೇರಿರುವ ಖಾಲಿದ್, ಜೈಲಿನಿಂದ ಶೀಘ್ರವೇ ಹೊರಬರಲೆಂದು ಹಲವಾರು ಹೋರಾಟಗಾರರು ಎದುರು ನೋಡುತ್ತಿದ್ದಾರೆ. ನ್ಯಾಯಾಲಯಗಳು ತ್ವರಿತ ವಿಚಾರಣೆ ನಡೆಸಿ, ತೀರ್ಪು ನೀಡಬೇಕು. ಇಲ್ಲವೇ, ಜಾಮೀನನ್ನಾದರೂ ನೀಡಿ, ಖಾಲಿದ್ ಅವರಿಗೆ ಸೆರೆವಾಸದಿಂದ ಮುಕ್ತಿ ನೀಡಬೇಕು.
2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ವಿದ್ಯಾರ್ಥಿ ನಾಯಕ, ಯುವ ಹೋರಾಟಗಾರ ಉಮರ್ ಖಾಲಿದ್ ಜೈಲು ಸೇರಿ ಬರೋಬ್ಬರಿ ಐದು ವರ್ಷಗಳು ಕಳೆದಿವೆ. ಸರಿಯಾಗಿ ವಿಚಾರಣೆಯೂ ನಡೆಯದೆ, ಇತ್ತ ಜಾಮೀನೂ ದೊರೆಯದೆ, ಆರೋಪವೂ ಸಾಬೀತಾಗದೆ ಉಮರ್ ಸೆರೆವಾಸ ಅನುಭವಿಸುತ್ತಿದ್ದಾರೆ. ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಆದರೆ, ನ್ಯಾಯಾಲಯಗಳಿಗೆ ಅವರನ್ನು ಜೈಲಿನಿಂದ ಹೊರ ಕಳಿಸುವ ಇಚ್ಛೆ ಇದ್ದಂತಿಲ್ಲ. ಇದೀಗ, ಉಮರ್ ಖಾಲಿದ್ ಸೇರಿದಂತೆ ಪ್ರಕರಣದ 9 ಆರೋಪಿಗಳ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ದೇಶದಲ್ಲಿ ಕೊರೋನ ಆಕ್ರಮಣ ಆರಂಭವಾಗುವುದಕ್ಕೂ ಮುನ್ನ, 2020ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದವು. ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಎಸಗಿದ ದುಷ್ಕೃತ್ಯದಿಂದ ಹಿಂಚಾಸಾರ ಭುಗಿಲೆದ್ದಿತ್ತು. ಆ ಗಲಭೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪದ ಮೇಲೆ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಖಾಲಿದ್ ಸೈಫಿ, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್ ಸೇರಿದಂತೆ 18 ಮಂದಿಯನ್ನು 2020ರ ಸೆಪ್ಟೆಂಬರ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿದರು. ಧಾರ್ಮಿಕ ಭಾವನೆ ಕದಡಿದ್ದಾರೆ ಎಂಬ ಆರೋಪ ಹೊರಿಸಿ, ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (ಯುಎಪಿಎ) ಅಡಿ ಪ್ರಕರಣವನ್ನೂ ದಾಖಲಿಸಿದರು.
ಉಮರ್ ಖಾಲಿದ್ ಬಂಧನವಾಗಿ ಈ ವರ್ಷ ಸೆಪ್ಟೆಂಬರ್ 13ಕ್ಕೆ ಐದು ವರ್ಷಗಳಾಗಲಿವೆ. ಐದು ವರ್ಷಗಳಿಂದ ಖಾಲಿದ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಆದರೆ, ಅವರ ವಿರುದ್ದದ ಪ್ರಕರಣ ವಿಚಾರಣೆಗೆ ಬಂದಿಲ್ಲ. ದೆಹಲಿ ಪೊಲೀಸರು ಪರಿಪೂರ್ಣ ಚಾರ್ಜ್‌ಶೀಟ್ ಅನ್ನೂ ಸಲ್ಲಿಸಿಲ್ಲ. ದೆಹಲಿ ಗಲಭೆ ಆರೋಪದ ಮೇಲೆ ಖಾಲಿದ್ ಜೊತೆ ಬಂಧಿತರಾಗಿರುವ ಇತರ 18 ಆರೋಪಿಗಳಲ್ಲಿ 12 ಮಂದಿ ಇನ್ನೂ ಜಾಮೀನು ಪಡೆಯುವುದಕ್ಕಾಗಿ ಹೋರಾಡುತ್ತಿದ್ದಾರೆ.
ದೇಶದ ಅತ್ಯಂತ ಕಠಿಣ ಕಾನೂನುಗಳಲ್ಲಿ ಯುಎಪಿಎ ಮೊದಲನೆಯದ್ದು. ಜಾಮೀನು ಕಷ್ಟಸಾಧ್ಯವಾದ ಈ ಕಾಯ್ದೆಯಡಿ ಸಾವಿರಾರು ಮಂದಿ ಬಂಧನದಲ್ಲಿದ್ದಾರೆ. ತನಿಖೆ ಮತ್ತು ವಿಚಾರಣೆ ಪೂರ್ಣಗೊಳ್ಳದೆ ತೀರ್ಪು ವಿಳಂಬವಾಗುತ್ತಿರುವ ಕಾರಣ ಸಾವಿರಾರು ಆರೋಪಿಗಳು ಹಲವು ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿದ್ದಾರೆ. ತನ್ನ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ತನ್ನ ಅಸ್ತ್ರವನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪವೂ ಪ್ರಬಲವಾಗಿದೆ.
ಯಾವುದೇ ಪ್ರಕರಣದಲ್ಲಿ ವಿಚಾರಣೆಗಳು ವಿಳಂಬವಾದಲ್ಲಿ, ಮಾನವ ಹಕ್ಕುಗಳ ಉಲ್ಲಂಘನೆ ಆಧಾರದಲ್ಲಿ ಜಾಮೀನು ನೀಡಲಾಗುತ್ತಿದೆ. ಆದರೂ, ಖಾಲಿದ್ ವಿಚಾರದಲ್ಲಿ ನ್ಯಾಯಾಲಯಗಳು ಮೌನಕ್ಕೆ ಜಾರಿವೆ. ಜಾಮೀನು ಅರ್ಜಿ, ಪ್ರಕರಣದ ವಿಚಾರಣೆಯನ್ನು ಪದೇ-ಪದೇ ಮುಂದೂಡುತ್ತಲೇ ಬಂದಿವೆ. ಜಾಮೀನು ನೀಡಲು ನಿರಾಕರಿಸುತ್ತಿವೆ.
ಖಾಲಿದ್ ಮತ್ತು ಇತರ ಆರೋಪಿಗಳ ವಿರುದ್ಧ ಮೊದಲ ಚಾರ್ಜ್‌ಶೀಟ್ ಅನ್ನು 2020ರ ನವೆಂಬರ್ 20ರಂದು ಸಲ್ಲಿಸಲಾಗಿತ್ತು. ಅಲ್ಲದೆ, ನಾಲ್ಕನೇ ಪೂರಕ ಚಾರ್ಜ್‌ಶೀಟ್ ಅನ್ನು 2023ರ ಜೂನ್ 8ರಂದು ಸಲ್ಲಿಸಲಾಗಿದೆ. ಆದರೆ, ಈವರೆಗೆ, ಪರಿಪೂರ್ಣ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ.
2021ರ ಜುಲೈ ತಿಂಗಳಿನಲ್ಲಿ ಖಾಲಿದ್ ಮೊದಲ ಬಾರಿಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದೇ ವರ್ಷದ ಆಗಸ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಅದಾದ ಎಂಟು ತಿಂಗಳ ನಂತರ, ಅಂದರೆ, 2022ರ ಮಾರ್ಚ್ 24ರವರೆಗೂ ವಿಚಾರಣೆ ಮುಂದುವರೆದು, ಅಂದು ದೆಹಲಿ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿತು. ಅಲ್ಲದೆ, ಖಾಲಿದ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ 14 ಬಾರಿ ಮರು ನಿಗದಿಪಡಿಸಲಾಗಿದೆ. ಸೆಷನ್ಸ್ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್ ತಲಾ ಎರಡು ಬಾರಿ ಜಾಮೀನು ನೀಡಲು ನಿರಾಕರಿಸಿವೆ. ಹೀಗಾಗಿ, ಖಾಲಿದ್ ಕಂಬಿಗಳ ಹಿಂದೆ ದಿನ ದೂಡುತ್ತಿದ್ದಾರೆ.
ಈ ಲೇಖನ ಓದಿದ್ದೀರಾ?: ಭಾರತ-ಚೀನಾ ‘ಭಾಯಿ ಭಾಯಿ’ ಎನ್ನುತ್ತಿದ್ದಾರೆ ಮೋದಿ; ಇದು ಸಾಧ್ಯವೇ?
ಇನ್ನು ಅಕ್ಟೋಬರ್ 2022ರಲ್ಲಿ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಮೂವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿಗಳು ಉಮರ್ ಖಾಲಿದ್ ವಿರುದ್ಧದ ಯುಎಪಿಎ ಪ್ರಕರಣವನ್ನು ಪರಿಶೀಲಿಸಿದ್ದರು. ಖಾಲಿದ್ ವಿರುದ್ಧ ಭಯೋತ್ಪಾದನೆಯ ಆರೋಪಗಳನ್ನು ವಿಧಿಸಲು ಯಾವುದೇ ಸಮರ್ಥನೀಯ ಪುರಾವೆಗಳಿಲ್ಲ ಎಂಬುದನ್ನ ಅವರು ಗಮನಿಸಿದ್ದರು. ಅದರೂ, ಖಾಲಿದ್ ಜಾಮೀನು ದೊರೆತಿಲ್ಲ.
ಅಲ್ಲದೆ, ಕಳೆದ ವರ್ಷ (2024) ಡಿಸೆಂಬರ್‌ನಲ್ಲಿ, ”ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಿತೂರಿ ಆರೋಪದ ಮೇಲೆ ನನ್ನ ವಿರುದ್ಧ ದೆಹಲಿ ಪೊಲೀಸರು ಯುಎಪಿಎ ಪ್ರಕರಣ ದಾಖಲಿಸಿದ್ದಾರೆ. ಆದರೆ, ಅವರು ಯಾವ ಆಧಾರದಲ್ಲಿ ನನ್ನನ್ನು ಆರೋಪಿಯನ್ನಾಗಿ ಮಾಡಿದ್ದಾರೆ. ಹಿಂಸಾಚಾರ ಅಥವಾ ಪಿತೂರಿಯಲ್ಲಿ ನಾನು ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ನೇರವಾದ ಸಾಕ್ಷ್ಯಗಳಿಲ್ಲ. ಆದರೂ, ನನ್ನನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗಿದೆ” ಎಂದು ದೆಹಲಿ ಹೈಕೋರ್ಟ್ ಮುಂದೆ ಖಾಲಿದ್ ಹೇಳಿಕೊಂಡಿದ್ದರು.
ಬಳಿಕ, ಇದೇ ವರ್ಷದ (2025) ಜನವರಿಯಲ್ಲಿ ಖಾಲಿದ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್, ”ಪ್ರತಿಭಟನೆಯನ್ನು ಆಯೋಜನೆ ಮಾಡಿದ್ದ ಕಾರಣವನ್ನಿಟ್ಟುಕೊಂಡು ಓರ್ವ ವ್ಯಕ್ತಿಯ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಬಹುದಾ? ಯುಎಪಿಎ ಅಡಿ ಪ್ರಕರಣ ದಾಖಲಿಸಲು ಪ್ರತಿಭಟನಾ ಸ್ಥಳ ನಿಗದಿ ಮಾಡುವುದು ಅಥವಾ ಪ್ರತಿಭಟನೆ ಆಯೋಜಿಸಿದ ಕಾರಣವಷ್ಟೇ ಸಾಕಾ? ಅಥವಾ ಆ ಪ್ರತಿಭಟನಾ ಸ್ಥಳದಲ್ಲಿ ಹಿಂಸಾಚಾರ ನಡೆದಿರಬೇಕಾ? ನಿಮ್ಮ ವಾದ ಏನು? ಈಗ ಯಾವುದನ್ನು ಯುಎಪಿಎ ಅಡಿ ಪರಿಗಣಿಸಬೇಕು” ಎಂದು ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು.
ಆದಾಗ್ಯೂ, ದೆಹಲಿ ಹೈಕೋರ್ಟ್ ಕೂಡ ಈವರೆಗೆ ಉಮರ್ ಖಾಲಿದ್‌ಗೆ ಜಾಮೀನು ನೀಡಿಲ್ಲ. ಈಗಲೂ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಈ ನಡುವೆ, ಕುಟುಂಬದ ವಿವಾಹ ಸಮಾರಂಭದಲ್ಲಿ ಹಾಜರಾಗಲು ಕೇವಲ 7 ದಿನಗಳ ಕಾಲ ಮಾತ್ರವೇ ಖಾಲಿದ್‌ಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಕಳೆದ ಐದು ವರ್ಷಗಳಲ್ಲಿ 7 ದಿನಗಳಷ್ಟೇ ಉಮರ್ ಜೈಲಿನಿಂದ ಹೊರಗಿದ್ದರು. ವಿಚಾರಣೆಗಳ ವಿಳಂಬ, ಜಾಮೀನಿಗೆ ನಕಾರ, ಚಾರ್ಜ್‌ಶೀಟ್ ಸಲ್ಲಿಸುವಲ್ಲಿ ಪೊಲೀಸರ ನಿರ್ಲಕ್ಷ್ಯ ಹಾಗೂ ಆಳುವ ಸರ್ಕಾರದ ಧೋರಣೆಯಿಂದಾಗಿ ಯುವ ಪ್ರತಿಭೆಯೊಂದು ಸೆರೆಯಲ್ಲಿ ಕಮರಿಹೋಗುತ್ತಿದೆ.
ಗಮನಾರ್ಹವಾಗಿ, ಯುಎಪಿಎ ಮತ್ತು ಅಕ್ರಣ ಹಣ ವರ್ಗಾವಣೆ ರೀತಿಯ ಕರಾಳ ಕಾನೂನಿನ ಅಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿಯೂ ಜಾಮೀನು ದೊರೆಯವ ವ್ಯವಸ್ಥೆ ಇರಬೇಕೆಂದು ಸುಪ್ರೀಂ ಕೋರ್ಟ್ ಹಲವಾರು ಸಂದರ್ಭಗಳಲ್ಲಿ ಹೇಳಿದೆ. ಜೊತೆಗೆ, ವಿಕೃತ ಕೃತ್ಯ ಎಸಗಿದ ಆರೋಪಿಗಳಿಗೂ ನ್ಯಾಯಾಲಯಗಳು ತ್ವರಿತವಾಗಿ ಜಾಮೀನು ನೀಡಿವೆ. ಅಪ್ತಾಪ್ತ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ ಆರೋಪಿ ಧರ್ಮಗುರು ಆಸಾರಾಮ್ ಬಾಪು ಬಂಧನವಾದ ಕೆಲವೇ ದಿನಗಳಲ್ಲಿ ಜಾಮೀನು ದೊರೆಯಿತು. ಪೋಕ್ಸೋ ಪ್ರಕರಣದ ಆರೋಪಿ ಬಿ.ಎಸ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ನಿರೀಕ್ಷಣಾ ಜಾಮೀನು ದೊರೆಯಿತು. ಹಲವು ಕೊಲೆ ಮತ್ತು ಅತ್ಯಾಚಾರಗಳ ಅಪರಾಧಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಧರ್ಮಗುರು ಗುರ್ಮೀತ್ ಸಿಂಗ್ ರಾಮ್ ರಹೀಮ್‌ಗೆ ಹಲವು ಸಂದರ್ಭಗಳಲ್ಲಿ ತಿಂಗಳಾನುಗಟ್ಟಲೆ ಜಾಮೀನು ದೊರೆಯುತ್ತಿದೆ. ಮಾಲೆಂಗಾವ್ ಸ್ಪೋಟ ಪ್ರಕರಣದ ಆರೋಪಿಗಳಾಗಿದ್ದ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಮತ್ತು ಇತರ ಆರೋಪಿಗಳೂ (ಪ್ರಕರಣ ಈಗ ಖುಲಾಸೆಯಾಗಿದೆ) ಬಂಧನದ ಕೆಲವೇ ದಿನಗಳಲ್ಲಿ ಜಾಮೀನು ಪಡೆದಿದ್ದರು. ಆದರೆ, ಸರಿಯಾದ ಸಾಕ್ಷ್ಯಗಳೇ ಇಲ್ಲದ, ಚಾರ್ಜ್‌ಶೀಟ್ ಕೂಡ ಸಲ್ಲಿಕೆಯಾಗದ ಪ್ರಕರಣದಲ್ಲಿ ಖಾಲಿದ್‌ಗೆ ಜಾಮೀನು ದೊರೆಯುತ್ತಿಲ್ಲ. ಯಾಕಾಗಿ?

ಅಂದಹಾಗೆ, ಖಾಲಿದ್ ಅವರು ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ ಇತಿಹಾಸ ಅಧ್ಯಯನ ಮಾಡಿದವರು. ನಂತರ, ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಇತಿಹಾಸದಲ್ಲಿ ತಮ್ಮ ಸ್ನಾತಕೋತ್ತರ ಮತ್ತು ಎಂಫಿಲ್ ಪದವಿ ಪಡೆದವರು. ಲೋಕಜ್ಞಾನ ಹೊಂದಿರುವ ಖಾಲಿದ್, ಉತ್ತಮ ವಿಚಾರಧಾರೆಗಳನ್ನು ಹೊಂದಿರುವವರು. ಜಾರ್ಖಂಡ್‌ನ ಆದಿವಾಸಿಗಳ ಬದುಕಿನ ಬಗ್ಗೆ ಅಧ್ಯಯನ ಮಾಡಿ ಜೆಎನ್‌ಯು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಗಮನಿಸಬೇಕಾದ ವಿಚಾರವೆಂದರೆ, ಜೆಎನ್‌ಯು ಕೂಡ ಆರಂಭದಲ್ಲಿ ಖಾಲಿದ್ ಅವರ ಸಂಶೋಧನಾ ಪ್ರಬಂಧವನ್ನು ಸ್ವೀಕರಿಸಲು ನಿರಾಕರಿಸಿತ್ತು. 2018ರಲ್ಲಿ ನ್ಯಾಯಾಲಯದ ಸೂಚನೆಯ ಮೇರೆಗೆ ಅವರ ಪ್ರಬಂಧವನ್ನು ಅಂಗೀಕರಿಸಿತ್ತು.
ಜೆಎನ್‌ಯು ಕ್ಯಾಂಪಸ್‌ನಲ್ಲಿ ಫೆಬ್ರುವರಿ 9ರ 2016ರಂದು ನಡೆದ ಪ್ರತಿಭಟನೆ ಮತ್ತು ಘಟನೆಗಳ ತನಿಖೆಗಾಗಿ ಜೆಎನ್‌ಯು ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿ ಖಾಲಿದ್ ಅವರನ್ನು ಕ್ಯಾಂಪಸ್‌ನಿಂದ ಅಮಾನತು ಮಾಡಿತ್ತು. ತಮ್ಮ ಅಮಾನತನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದ ಖಾಲಿದ್, ಜೆಎನ್‌ಯುನ ಇತರ ವಿದ್ಯಾರ್ಥಿ ನಾಯಕರಾದ ಕನ್ಹಯ್ಯಾ ಕುಮಾರ್ ಮತ್ತು ಶೆಹ್ಲಾ ರಶೀದ್ ಅವರೊಂದಿಗೆ ಮುನ್ನೆಲೆಗೆ ಬಂದರು. ಈ ವಿದ್ಯಾರ್ಥಿ ನಾಯಕರು ತಮ್ಮದೇ ರಾಜಕೀಯ ವಿಚಾರ, ತಿಳಿವಳಿಕೆಯಲ್ಲಿ ಮುಂದೆ ಸಾಗಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ, ಫ್ಯಾಸಿಸ್ಟ್ ಧೋರಣೆ, ಹಿಂದುತ್ವವಾದಿ ಕೋಮು ರಾಜಕಾರಣವನ್ನು ತೀವ್ರವಾಗಿ ಟೀಕಿಸುವ ಮೂಲಕ, ದೇಶದ ಗಮನ ಸೆಳೆದಿದ್ದಾರೆ.
2019ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟ ರೂಪಿಸುವಲ್ಲಿ ಉಮರ್ ಖಾಲಿದ್ ಕೂಡ ಮುಂಚೂಣಿಯಲ್ಲಿದ್ದರು. ಅವರು ಜೆಎನ್‌ಯುನಲ್ಲಿ ಸಿಎಎ ವಿರುದ್ಧ ಮಾಡಿದ್ದ ಭಾಷಣ ಇಡೀ ದೇಶದ ಗಮನ ಸೆಳೆದಿತ್ತು.
ಈ ಲೇಖನ ಓದಿದ್ದೀರಾ?: ಬಂಗಾಳಕ್ಕೂ ಕಾಲಿಟ್ಟ ಎಸ್‌ಐಆರ್ ಭೂತ; ಜನನ ಪ್ರಮಾಣಪತ್ರಕ್ಕಾಗಿ ಜನರ ಪರದಾಟ
ಆ ಕಾರಣದಿಂದಲೇ ಅವರನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಭಾರೀ ಕಸರತ್ತು ನಡೆಸಿದ್ದರು. ಅವರಿಗೆ ಅಸ್ತ್ರವಾಗಿ ಸಿಕ್ಕಿದ್ದು, 2020ರಲ್ಲಿ ನಡೆದ ದೆಹಲಿ ಗಲಭೆ. ಅದನ್ನೇ ನೆಪವಾಗಿಟ್ಟುಕೊಂಡು ಖಾಲಿದ್ ಅವರನ್ನು ಬಂಧಿಸಿರುವ ಪೊಲೀಸರು, ಅವರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜೈಲಿನಲ್ಲಿ ಕೂಡಿ ಹಾಕಿದ್ದಾರೆ. ”ಜೈಲಿನಲ್ಲಿರುವ ಖಾಲಿದ್ ಉತ್ಸಾಹವು ಇನ್ನೂ ಹೆಚ್ಚಾಗುತ್ತಿದೆ. ಆದರೂ ವಿಳಂಬಗಳು ಕೆಲವೊಮ್ಮೆ ಅವರನ್ನು ಕುಗ್ಗಿಸುತ್ತಿದೆ. ಮಿತಿಮೀರಿದ ವಿಳಂಬಗಳು ಪರಿಸ್ಥಿತಿಯನ್ನು ಅತ್ಯಂತ ನಿರಾಶಾದಾಯಕವಾಗಿಸಿದೆ” ಎಂದು ಉಮರ್ ಅವರನ್ನು ಒತ್ತೀಚೆಗೆ ಜೈಲಿನಲ್ಲಿ ಭೇಟಿಯಾಗಿದ್ದ ಅವರ ಒಡನಾಡಿ ಬನೋಜ್ಯೋತ್ಸ್ನಾ ಲಾಹಿರಿ ಹೇಳಿದ್ದಾರೆ.
ಇನ್ನು ರೋಹಿತ್ ಕುಮಾರ್ ಎಂಬವರು ಉಮರ್ ಖಾಲಿದ್ ಅವರಿಗೆ 2022ರ ಆಗಸ್ಟ್ 15ರಂದು ಪತ್ರ ಬರೆದಿದ್ದರು. ಅವರ ಪತ್ರಕ್ಕೆ ಉಮರ್ ಖಾಲಿದ್ ಬರೆದ ಪ್ರತ್ಯುತ್ತರವು ರೋಹಿತ್ ಅವರಿಗೆ 2022ರ ಸೆಪ್ಟೆಂಬರ್ 12ರಂದು ತಲುಪಿತ್ತು.
ಆ ಪತ್ರದಲ್ಲಿ, ”ನಿತ್ಯ ಜೈಲಿನಲ್ಲಿ ಬಿಡುಗಡೆಯಾಗುವವರ ಹೆಸರುಗಳ ಪಟ್ಟಿಯನ್ನ ಮೈಕ್‌ನಲ್ಲಿ ಹೇಳುತ್ತಾರೆ. ನಾನು ಕೂಡ ನನ್ನ ಹೆಸರು ಬರುವುದಾ ಎಂದು ಕಾಯುತ್ತಿರುತ್ತೇನೆ. ಹಲವು ಬಾರಿ ಈ ಜೈಲಿನ ಕಗ್ಗತ್ತಲು ಇನ್ನೂ ಎಷ್ಟು ದೂರ ಇರಬಹುದು ಎಂದು ಯೋಚಿಸುತ್ತೇನೆ. ಎಂದಾದರೂ ಈ ಸುರಂಗದ ಕೊನೆಯಲ್ಲಿ ಬೆಳಕು ಕಾಣಸಿಗಬಹುದೇ? ನಾನು ಸುರಂಗದ ಕೊನೆಯಲ್ಲಿದ್ದೇನೋ? ಅಥವಾ ನಡುವೆ ಸಿಲುಕಿದ್ದೇನೋ? ಅಥವಾ ನನ್ನ ಸುದೀರ್ಘ ಪ್ರಯಾಣವೇ ಈಗ ಪ್ರಾರಂಭವಾಗಿದೆಯೋ? ಗೊತ್ತಿಲ್ಲ. ಕೆಲವೊಮ್ಮೆ ನಾನು ಹತಾಶನಾಗುತ್ತೇನೆ. ಏಕಾಂಗಿ ಏನಿಸತೋಡಗುತ್ತೆ” ಎಂದು ಖಾಲಿದ್ ಅವರು ಎರಡು ವರ್ಷಗಳ ಜೈಲು ವಾಸದ ಬಗ್ಗೆ ಪತ್ರದಲ್ಲಿ ಹೇಳಿಕೊಂಡಿದ್ದರು.
ಪ್ರಕರಣದ ತನಿಖೆ ಐದು ವರ್ಷಗಳಿಂದ ಆಮೆಯಂತೆ ಸಾಗುತ್ತಿದೆ. ಪೊಲೀಸರು ತನಿಖೆಯಲ್ಲಿ ವಿಳಂಬ ಮಾಡುತ್ತಿದ್ದಾರೆ. ಪರಿಪೂರ್ಣ ಚಾರ್ಜ್‌ಶೀಟ್ ಅನ್ನೂ ಸಲ್ಲಿಸಿಲ್ಲ. ನ್ಯಾಯಾಲಯಗಳು ಜಾಮೀನು ಕೊಡಲೂ ಹಿಂದೇಟು ಹಾಕುತ್ತಿವೆ. ಪರಿಣಾಮವಾಗಿ ಖಾಲಿದ್ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಸುಳ್ಳು ಆರೋಪ ಮತ್ತು ಪ್ರಕರಣಗಳಲ್ಲಿ ಜೈಲು ಸೇರಿರುವ ಖಾಲಿದ್, ಜೈಲಿನಿಂದ ಶೀಘ್ರವೇ ಹೊರಬರಲೆಂದು ಹಲವಾರು ಹೋರಾಟಗಾರರು ಎದುರು ನೋಡುತ್ತಿದ್ದಾರೆ. ನ್ಯಾಯಾಲಯಗಳು ತ್ವರಿತ ವಿಚಾರಣೆ ನಡೆಸಿ, ತೀರ್ಪು ನೀಡಬೇಕು. ಇಲ್ಲವೇ, ಜಾಮೀನನ್ನಾದರೂ ನೀಡಿ, ಖಾಲಿದ್ ಅವರಿಗೆ ಸೆರೆವಾಸದಿಂದ ಮುಕ್ತಿ ನೀಡಬೇಕು.