ಜಾಗತಿಕ ಸಮುದಾಯವು ಭಾರತದ ದುಃಸ್ಥಿತಿಯ ಬಗ್ಗೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯು ಭಾರತೀಯ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಮಾಡಲಾಗಿದೆ ಎಂಬುದನ್ನು ತಿಳಿದಿದೆ. ಭಯೋತ್ಪಾದನೆಯ ಕೇಂದ್ರಬಿಂದು ಪಾಕಿಸ್ತಾನದ ಗಡಿಯಾಚೆ ಇದೆ ಎಂಬುದನ್ನೂ ತಿಳಿದಿದೆ. ಜಾಗತಿಕವಾಗಿ ಪಾಕಿಸ್ತಾನವನ್ನು ‘ಭಯೋತ್ಪಾದನೆಯ ಕೇಂದ್ರಬಿಂದು’ ಎಂದು ಗುರುತಿಸಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ವಿದೇಶಾಂಗ ಸಚಿವಾಲಯದ ಪತ್ರಿಕಾಗೋಷ್ಠಿ ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ, “ಹಲವು ವಿದೇಶಿ ನಾಯಕರು ಭಾರತ ತನ್ನನ್ನು ತಾನು ರಕ್ಷಿಸಿಕೊಳ್ಳುವ ಮತ್ತು ತನ್ನ ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಕೈಗೊಂಡ ಕಾರ್ಯವನ್ನು ಒಪ್ಪಿಕೊಂಡಿದೆ. ಭಯೋತ್ಪಾದನೆಯ ಕೇಂದ್ರಬಿಂದು ಪಾಕಿಸ್ತಾನದಲ್ಲಿದೆ” ಎಂದು ಒತ್ತಿ ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಪರೇಷನ್ ಸಿಂಧೂರ – ಪಾಕ್ ಭಯೋತ್ಪಾದನೆಗೆ ತಕ್ಕ ಶಾಸ್ತಿ!
“ಏಪ್ರಿಲ್ 25ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪತ್ರಿಕಾ ಹೇಳಿಕೆಯತ್ತ ನಾನು ನಿಮ್ಮ ಗಮನ ಸೆಳೆಯುತ್ತೇನೆ. ‘ಈ ಖಂಡನೀಯ ಭಯೋತ್ಪಾದನಾ ಕೃತ್ಯದ ಅಪರಾಧಿಗಳು, ಸಂಘಟಕರು, ಹಣಕಾಸು ಒದಗಿಸುವವರು ಮತ್ತು ಪ್ರಾಯೋಜಕರನ್ನು ಹೊಣೆಗಾರರನ್ನಾಗಿ ಮಾಡುವ ಅವಶ್ಯಕತೆಯಿದೆ’ ಎಂದು ವಿಶ್ವಸಂಸ್ಥೆ ಹೇಳುತ್ತದೆ. ಈ ಹತ್ಯೆಗಳಿಗೆ (ಪಹಲ್ಗಾಮ್ ದಾಳಿ) ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು” ಎಂದು ಹೇಳಿದರು.
ಸಿಂಧೂ ಜಲ ಒಪ್ಪಂದ ಕೊನೆ ಮಾಡುವ ಬಗ್ಗೆಯೂ ಮಾತನಾಡಿದರು. ಒಪ್ಪಂದವನ್ನು ಉತ್ತಮ ಉದ್ದೇಶ ಮತ್ತು ಸ್ನೇಹದ ತತ್ವಗಳ ಆಧಾರದಲ್ಲಿ ಮಾಡಿಕೊಂಡಿದ್ದರೂ ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಉತ್ತೇಜಿಸುವ ಮೂಲಕ ಈ ತತ್ವಗಳನ್ನು ಮುರಿದಿದೆ ಎಂದು ಟೀಕಿಸಿದರು.
ಏಪ್ರಿಲ್ 22ರಂದು ಪಾಕಿಸ್ತಾನದ ಉಗ್ರ ಸಂಘಟನೆಯು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದನಾ ದಾಳಿ ನಡೆಸಿ 26 ಪ್ರವಾಸಿಗರನ್ನು ಕೊಂದಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಪಹಲ್ಗಾಮ್ ದಾಳಿಯ ಹೊಣೆ ಹೊತ್ತುಕೊಂಡಿದೆ.
ಈಗಾಗಲೇ ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ ಹೆಸರಲ್ಲಿ ದಾಳಿ ನಡೆಸಿವೆ. ಸದ್ಯ ಉಭಯ ದೇಶಗಳ ನಡುವೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ.
