ತನ್ನ ನಾಲ್ಕು ವರ್ಷದ ಮಗನನ್ನು ಅಪಾರ್ಟ್‌ಮೆಂಟ್‌ನಲ್ಲಿ ಕೊಂದ ಆರೋಪ ಹೊತ್ತಿರುವ ಬೆಂಗಳೂರಿನ ಎಐ ಸ್ಟಾರ್ಟ್‌ಅಪ್‌ನ ಸಿಇಒ ವಿರುದ್ಧ ಗೋವಾ ಪೊಲೀಸರು ಸುಮಾರು 642 ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಗೋವಾದಲ್ಲಿ ಮಗನನ್ನು ಹತ್ಯೆ ಮಾಡಿದ ಆರೋಪಿಯಾಗಿರುವ ‘ಮೈಂಡ್‌ಫುಲ್ ಎಐ ಲ್ಯಾಬ್’ನ ಸಿಇಒ ಸುಚನಾ ಸೇಠ್ (39) ಅವರನ್ನು ಗೋವಾ ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿದ್ದರು.
ಸ್ಟಾರ್ಟ್‌ಅಪ್‌ನ ಸಿಇಒ ಸಿಇಒ ಆಗಿರುವ ಪಶ್ಚಿಮ ಬಂಗಾಳದ ಸುಚನಾಗೆ 2010ರಲ್ಲಿ ಕೇರಳದ ವ್ಯಕ್ತಿ ಜತೆ ಮದುವೆಯಾಗಿತ್ತು. 2019ರಲ್ಲಿ ಅವರಿಗೆ ಮಗ ಜನಿಸಿದ್ದ. ಆದರೆ ಮರು ವರ್ಷವೇ ಅವರಿಬ್ಬರೂ ಬೇರ್ಪಟ್ಟಿದ್ದರು. 2020ರಲ್ಲಿ ವಿಚ್ಛೇದನಕ್ಕ ಅರ್ಜಿ ಸಲ್ಲಿಸಿದ್ದರು. ಮಗನನ್ನು ತಂದೆ ಭಾನುವಾರ ಭೇಟಿ ಮಾಡಬಹುದು ಎಂದು ಕೋರ್ಟ್ ಅನುಮತಿ ನೀಡಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಮಗನನ್ನು ಹತ್ಯೆಗೈದಿದ್ದ ಆರೋಪ ಹೊರಿಸಲಾಗಿತ್ತು. ಇದಲ್ಲದೇ, ಈ ಹತ್ಯೆಯ ಬಗ್ಗೆ ಹಲವಾರು ವಿವರಗಳನ್ನು ಪೊಲೀಸರು ದೋಷಾರೋಷಣಾ ಪಟ್ಟಿಯಲ್ಲಿ ಬಹಿರಂಗಪಡಿಸಿದ್ದಾರೆ.
ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಜನವರಿ 8 ರಂದು ಸುಚನಾ ಸೇಠ್ ಅವರನ್ನು ಬಂಧಿಸಲಾಗಿತ್ತು. ಗೋವಾದ ಮಕ್ಕಳ ನ್ಯಾಯಾಲಯದಲ್ಲಿ ಸೇಠ್ ವಿರುದ್ಧ 642 ಪುಟಗಳ ಚಾರ್ಜ್‌ಶೀಟ್ ಅನ್ನು ಕಲಾಂಗುಟ್ ಪೊಲೀಸರು ಸಲ್ಲಿಸಿದ್ದಾರೆ.
ದೋಷಾರೋಷಣಾ ಪಟ್ಟಿಯಲ್ಲಿ ಉಲ್ಲೇಖಿಸಲಾದ 10 ಪ್ರಮುಖ ವಿವರಗಳು ಹೀಗಿವೆ.
- ಸುಚನಾ ಸೇಠ್ ಅವರು ತಮ್ಮ ಪತಿ ವೆಂಕಟ್ ರಾಮನ್ ಅವರೊಂದಿಗೆ ಮಗುವಿನ ವಿಚಾರದಲ್ಲಿ ಜಗಳಾಡಿದ್ದರು. ಜನವರಿ 6 ರಂದು ಕಳುಹಿಸಿದ್ದ ಸಂದೇಶದಲ್ಲಿ ಅವರು ಮರುದಿನ ಮಗುವನ್ನು ಭೇಟಿಯಾಗಬಹುದು ಎಂದು ತನ್ನ ವಿಚ್ಛೇದಿತ ಪತಿಗೆ ತಿಳಿಸಿದ್ದರು. ಆದರೆ ಬೆಂಗಳೂರಿಗೆ ಪತಿ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ.
- ತಮ್ಮ ಪತಿ ವೆಂಕಟ್ ರಾಮನ್ ಮಗುವನ್ನು ಭೇಟಿಯಾಗಲು ಇಷ್ಟಪಡದ ಕಾರಣ ಸುಚನಾ ಸೇಠ್ ಜನವರಿ 6 ರಂದು ಕಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್ ಅನ್ನು ಬುಕ್ ಮಾಡಿದ್ದರು.
- ಹೋಟೆಲ್‌ಗೆ ಮಗನ ಜತೆ ಸುಚನಾ ಭೇಟಿ ನೀಡಿದ್ದರು. ಆದರೆ, ಹೋಟೆಲ್‌ನಿಂದ ಒಬ್ಬರೇ ಹೊರಬಂದಿದ್ದರು. ಬೆಂಗಳೂರಿಗೆ ಟ್ಯಾಕ್ಸಿ ಬುಕ್ ಮಾಡುವಂತೆ ಹೋಟೆಲ್ ಸಿಬ್ಬಂದಿಗೆ ಕೇಳಿದ್ದರು.
- ಅವರು ಅಲ್ಲಿಂದ ಹೊರಟ ಬಳಿಕ, ಅವರೊಂದಿಗೆ ಮಗ ಇಲ್ಲದಿರುವುದನ್ನು ಕಂಡು ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಪರಿಶೀಲಿಸಿದಾಗ, ಅವರಿದ್ದ ಕೊಠಡಿಯಲ್ಲಿ ರಕ್ತದ ಕಲೆಗಳು ಕಂಡು ಬಂದಿದ್ದವು ಮತ್ತು ಕೈಬರಹದ ಟಿಪ್ಪಣಿಯನ್ನು ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
- ತನ್ನ ಪತಿಯೊಂದಿಗೆ ವೈಷಮ್ಯ ಮತ್ತು ನ್ಯಾಯಾಲಯದ ವಿಚಾರಣೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದನ್ನು ಕೈಬರಹದ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದರು.
- ಟಿಶ್ಯೂ ಪೇಪರ್ ಮೇಲೆ ಐಲೈನರ್ ಬಳಸಿ ಟಿಪ್ಪಣಿ ಬರೆಯಲಾಗಿದ್ದು, ಕೈಬರಹ ತಜ್ಞರು ಇದರ ಸತ್ಯಾಸತ್ಯತೆಯನ್ನು ದೃಢಪಡಿಸಿದ್ದಾರೆ.
- ಮಗು ಇಲ್ಲದ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಕೂಡಲೇ ಆಕೆ ಬುಕ್ ಮಾಡಿದ್ದ ಟ್ಯಾಕ್ಸಿ ಚಾಲಕನನ್ನು ಸಂಪರ್ಕಿಸಿ ಸೇಠ್‌ನೊಂದಿಗೆ ಮಾತನಾಡಿದ್ದರು. ಮಡಗಾಂವ್‌ನಲ್ಲಿರುವ ಸ್ನೇಹಿತನ ಮನೆಯಲ್ಲಿ ಮಗನನ್ನು ಬಿಟ್ಟು ಹೋಗಿದ್ದೆ ಮತ್ತು ಹೋಟೆಲ್ ಕೋಣೆಯಲ್ಲಿನ ಕಲೆಗಳು ಮುಟ್ಟಿನ ರಕ್ತ ಎಂದು ಹೇಳಿಕೊಂಡಿದ್ದರು.
- ಆಕೆ ನಕಲಿ ವಿಳಾಸ ನೀಡಿದ್ದಾಳೆ ಎಂದು ತಿಳಿದ ಪೊಲೀಸರು, ಟ್ಯಾಕ್ಸಿ ಚಾಲಕನೊಂದಿಗೆ ಮಾತನಾಡಿ, ಆಕೆಯನ್ನು ಚಿತ್ರದುರ್ಗ ಸಮೀಪದ ಐಮಂಗಲ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಸೂಚನೆ.
- ಮಗುವನ್ನು ಬಟ್ಟೆ ಅಥವಾ ತಲೆದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆ.
- ಕತ್ತು ಹಿಸುಕಿದ ಪರಿಣಾಮವಾಗಿ ಮಗು ಉಸಿರುಕಟ್ಟಿ ಸಾವನ್ನಪ್ಪಿದೆ ಎಂಬಿತ್ಯಾದಿ ವಿವರಗಳನ್ನು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
