ಭಕ್ತರಿಗೆ ಒಳ್ಳೆಯದಾಗುವ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದರೆ ದೇವರೂ ಕೂಡ ಕ್ಷಮಿಸುತ್ತಾರೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಚೆನ್ನೈನಲ್ಲಿ ಮೆಟ್ರೋ ಕಾಮಗಾರಿಗಾಗಿ ದೇವಾಲಯದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುಮತಿ ನೀಡಿದೆ.
ಚೆನ್ನೈನಲ್ಲಿ ಮೆಟ್ರೋ ರೈಲು ಕಾಮಗಾರಿ ನಡೆಸಲು ಎರಡು ದೇವಾಲಯಗಳ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ‘ಚೆನ್ನೈ ಮೆಟ್ರೋ ರೈಲು ನಿಗಮ’ (ಸಿಎಂಆರ್‌ಎಲ್) ಮುಂದಾಗಿತ್ತು. ಚೆನ್ನೈನ ರತಿನ ವಿನಾಯಗರ್ ದೇವಸ್ಥಾನ ಮತ್ತು ದುರ್ಗಾಯಿ ಅಮ್ಮನ್ ದೇವಸ್ಥಾನ ಭೂಮಿ ಸ್ವಾಧೀನದ ವಿರುದ್ಧ ದೇವಾಲಯಕ್ಕೆ ಸಂಬಂಧಿಸಿದವರು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು.
ಅರ್ಜಿದಾರರ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ವಿಚಾರಣೆ ನಡೆಸಿದ್ದಾರೆ. “ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಭೂಮಿಯನ್ನು ಸಾರ್ವಜನಿಕ ಯೋಜನೆಗಳಿಗಾಗಿ ಸ್ವಾಧೀನ ಮಾಡಿಕೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ. ಭೂಸ್ವಾಧೀನದಿಂದ ವಿನಾಯಿತಿ ನೀಡಲಾಗುವುದಿಲ್ಲ” ಎಂದು ಹೇಳಿದೆ.
ಅಲ್ಲದೆ, ಇದೇ ಸಮಯದಲ್ಲಿ ದೇವಾಲಯಗಳ ಭೂಮಿಯ ಬದಲಾಗಿ ‘ಅಣ್ಣಾ ಸಾಲೈನಲ್ಲಿರುವ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್’ ಕಂಪನಿಯ ಕಟ್ಟಡ ಇರುವ ಜಾಗವನ್ನು ವಶಕ್ಕೆ ಪಡೆಯುವುದಾಗಿ ಸಿಎಂಆರ್‌ಎಲ್ ಹೇಳಿತ್ತು. ಸಿಎಂಆರ್‌ಎಲ್‌ನ ಧೋರಣೆಯ ವಿರುದ್ಧವೂ ವಿಮಾ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. “ಸಿಎಂಆರ್‌ಎಲ್‌ನಿಂದ ಎನ್‌ಒಸಿ ಪಡೆದ ನಂತರವೇ 250 ಕೋಟಿ ರೂ. ಖರ್ಚು ಮಾಡಿ ಕಂಪನಿಯ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈಗ ಸಿಎಂಎರ್‌ಎಲ್ ತನ್ನ ಕಚೇರಿಯನ್ನು ಕೆಡವಲು ಮುಂದಾಗಿದೆ. ಇದು ಅನ್ಯಾಯ” ಎಂದು ವಾದಿಸಿತ್ತು.
ವಿಮಾ ಕಂಪನಿಯ ವಾದವನ್ನು ಸಮ್ಮತಿಸಿರುವ ಹೈಕೋರ್ಟ್, “ವಿಮಾ ಕಂಪನಿಗೆ ಸಿಎಂಆರ್‌ಎಲ್‌ನಿಂದಲೇ ಎನ್‌ಒಸಿ ನೀಡಲಾಗಿದೆ. ಈಗ, ಅದನ್ನು ಸ್ವಾಧೀನಪಡಿಸಿಕೊಳ್ಳುವುದು ಎಲ್ಲ ಹಂತಗಳಲ್ಲಿ ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ. ಸಿಎಂಆರ್‌ಎಲ್ ಅಂತಹ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದೆ. ವಿಮಾ ಕಂಪನಿಗೆ ಸಿಎಂಆರ್‌ಎಲ್ ನೀಡಿದ್ದ ನೋಟಿಸ್‌ಅನ್ನು ರದ್ದುಗೊಳಿಸಿದೆ.