ಮುಂಬೈನ ಜೀವನಾಡಿಯಾಗಿದ್ದ ರೈಲ್ವೆ ಜಾಲವು ಈಗ ಜೀವ ತೆಗೆಯುವ ಜಾಲವಾಗಿ ಮಾರ್ಪಟ್ಟಿದೆ. ಅಧಿಕ ಜನದಟ್ಟಣೆಯಿಂದ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಕರು ಸಾವಿಗೀಡಾಗುವ ಘಟನೆಗಳು ಪದೇ ಪದೆ ನಡೆಯುತ್ತಲೇ ಇವೆ. ಆದ್ದರಿಂದ, ಜನದಟ್ಟಣೆಯನ್ನು ನಿಭಾಯಿಸಲು ಮಹಾರಾಷ್ಟ್ರ ಸರ್ಕಾರವು ಹೊಸ ಕ್ರಮವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಖಾಸಗಿ ಕಂಪನಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ‘ಪೀಕ್-ಅವರ್’ನಲ್ಲಿ (ಪ್ರಮುಖ ಸಮಯ) ಜನದಟ್ಟಣೆಯನ್ನು ಕಡಿಮೆ ಮಾಡಿ, ಕೆಲಸದಲ್ಲಿ ವಿಶೇಷ ಸಮಯಗಳನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ.
ಹೊಸ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ರಾಜ್ಯ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ದೃಢಪಡಿಸಿದ್ದಾರೆ. ಸಾರಿಗೆ ಇಲಾಖೆ, ಭಾರತೀಯ ರೈಲ್ವೆ ಮತ್ತು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಟಾಸ್ಕ್ ಫೋರ್ಸ್ ರಚಿಸಲಾಗುತ್ತದೆ. ಇದು ಸಾಂಪ್ರದಾಯಿಕ ಅನುಸರಿಸುತ್ತಿರುವ ಕೆಲಸದ ಅವಧಿ ‘9 ರಿಂದ 5 ಗಂಟೆ’ ಪಾಳಿಯ ಬದಲಾಗಿ ಬೆಳಿಗ್ಗೆ 8 ರಿಂದ ಸಂಜೆ 4 ಅಥವಾ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಹೊಂದಿಕೊಳ್ಳುವ ಕೆಲಸದ ಸಮಯವನ್ನು ಜಾರಿಗೆ ತರಲು ಟಾಸ್ಕ್ ಫೋರ್ಸ್ ನಿರ್ಧರಿಸಲಿದೆ.
ಮುಂಬೈ ಉಪನಗರ ರೈಲು ಜಾಲದಲ್ಲಿ ಪ್ರತಿದಿನ ಸುಮಾರು 80 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಬೆಳಿಗ್ಗೆ 8 ರಿಂದ 11 ಮತ್ತು ಸಂಜೆ 5 ರಿಂದ 8ರ ನಡುವೆ ಅತ್ಯಂತ ತೀವ್ರ ಜನದಟ್ಟಣೆ ಕಂಡುಬರುತ್ತದೆ. ಪಶ್ಚಿಮ, ಮಧ್ಯ ಹಾಗೂ ಬಂದರು ರೈಲು ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದು ಪೀಕ್ ಅವರ್‌ನಲ್ಲಿ ಪ್ಲಾಟ್‌ಫಾರ್ಮ್‌ಗಳು ಮತ್ತು ರೈಲುಗಳಲ್ಲಿ ತೀವ್ರ ಒತ್ತಡವನ್ನು ಉಂಟುಮಾಡುತ್ತಿದೆ.
ಹೊಸ ಯೋಜನೆಯ ಪೈಲಟ್ ಹಂತವು ಆಯ್ದ ಕಂಪನಿಗಳು ಅಥವಾ ಪ್ರದೇಶಗಳಲ್ಲಿ ಜಾರಿಗೆ ಬರಲಿದೆ. ಯಶಸ್ವಿಯಾದರೆ, ನಗರದಾದ್ಯಂತ ಯೋಜನೆಯನ್ನು ವಿಸ್ತರಿಸಲಾಗುತ್ತದೆ. ಕಚೇರಿ ಸಮಯವನ್ನು ಹೆಚ್ಚಿಸುವುದರಿಂದ ಸಾರ್ವಜನಿಕ ಸಾರಿಗೆಯ ಮೇಲಿನ ಒತ್ತಡ ಕಡಿಮೆಯಾಗುವುದಲ್ಲದೆ, ಜನದಟ್ಟಣೆಯ ಸಮಯದಲ್ಲಿ ರಸ್ತೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.