ಕೇವಲ ಬಿಜೆಪಿಯೇತರ ರಾಜ್ಯಗಳಲ್ಲಿ ಮಾತ್ರವೇ ರಾಜ್ಯಪಾಲರು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಮತ್ತು ಅವರೆಲ್ಲ ಬಿಜೆಪಿ ನೇಮಿಸಿದ ರಾಜ್ಯಪಾಲರು ಎನ್ನುವುದು ಗಮನಾರ್ಹ. ತಮ್ಮ ರಾಜಕೀಯ ವಿರೋಧಿಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಸರ್ಕಾರಗಳು ಸುಗಮವಾಗಿ ಕೆಲಸ ಮಾಡಲು ಬಿಡಬಾರದು ಎನ್ನುವಂತೆ ಬಿಜೆಪಿ ರಾಜ್ಯಪಾಲರ ಮೂಲಕ ಈ ರೀತಿ ಮಾಡಿಸುತ್ತಿದೆ ಎನ್ನುವ ಆರೋಪಗಳಿವೆ.
‘ಶಾಸಕಾಂಗವು ಅಂಗೀಕರಿಸುವ ವಿಧೇಯಕಗಳನ್ನು ರಾಜ್ಯಪಾಲರು ಪರಿಶೀಲಿಸಿ, ಅಂಕಿತ ಹಾಕುವಂತೆ ಮಾಡಲು ರಾಜ್ಯ ಸರ್ಕಾರಗಳು ನ್ಯಾಯಾಲಯಗಳ ಮೊರೆ ಹೋಗಬೇಕೆ? ಸರ್ಕಾರವು ನ್ಯಾಯಾಲಯವನ್ನು ಸಂಪರ್ಕಿಸಿದ ನಂತರವೇ ರಾಜ್ಯಪಾಲರು ಮಸೂದೆಗಳ ಮೇಲೆ ಕಾರ್ಯನಿರ್ವಹಿಸುವ ಪ್ರವೃತ್ತಿಯನ್ನು ನಿಲ್ಲಿಸಬೇಕು..’
ಹೀಗೆ ರಾಜ್ಯಪಾಲರ ಕಾರ್ಯವೈಖರಿ ಬಗ್ಗೆ ಹೀಗೆ ಬೇಸರ ವ್ಯಕ್ತಪಡಿಸಿರುವುದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು. ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಏಳು ಮಸೂದೆಗಳಿಗೆ ಅಂಕಿತ ಹಾಕುವ ವಿಚಾರದಲ್ಲಿ ನಿಷ್ಕ್ರಿಯತೆ ತೋರುತ್ತಿರುವುದನ್ನು ಪ್ರಶ್ನಿಸಿ ಪಂಜಾಬ್ ಸರ್ಕಾರ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಮೌಖಿಕ ಅವಲೋಕನ ಮಾಡಿದೆ.
ಸಿಜೆಐ ಬೇಸರಕ್ಕೂ ಕಾರಣವಿದೆ. ದೇಶದ ಒಂದಲ್ಲಾ ಒಂದು ರಾಜ್ಯ ಸರ್ಕಾರ ರಾಜ್ಯಪಾಲರು ವಿಧೇಯಕ ಅಂಗೀಕರಿಸುತ್ತಿಲ್ಲ ಎಂದು ಕೋರ್ಟ್ ಮೆಟ್ಟಿಲು ಹತ್ತುವುದು ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಒಂದು ಸಹಜ ಪ್ರಕ್ರಿಯೆಯೇ ಆಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಈ ಪ್ರವೃತ್ತಿ ನಿಲ್ಲಿಸಿ ಎಂದು ರಾಜ್ಯಪಾಲರಿಗೆ ತಾಕೀತು ಮಾಡಿದ್ದಾರೆ.
ವಾರದ ಹಿಂದಷ್ಟೇ ಕೇರಳ ಸರ್ಕಾರವು ಅಲ್ಲಿನ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಇಂಥದ್ದೇ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿನ ವಿಧಾನಸಭೆಯಲ್ಲಿ ಒಪ್ಪಿಗೆ ಪಡೆದ ಎಂಟು ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿರಲಿಲ್ಲ. ಅವುಗಳಲ್ಲಿ ಮೂರು ವಿಧೇಯಕಗಳು ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ರಾಜ್ಯಪಾಲರ ಬಳಿ ಬಾಕಿ ಉಳಿದಿವೆ ಮತ್ತು ಇನ್ನು ಮೂರು ವಿಧೇಯಕಗಳು ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದಲೂ ಬಾಕಿ ಇವೆ. ಹೀಗಾದರೆ, ರಾಜ್ಯದ ಅವಕಾಶ ವಂಚಿತ ಜನರಿಗೆ ಕಲ್ಯಾಣ ಕಾರ್ಯಕ್ರಮಗಳ ಲಾಭ ನಿರಾಕರಣೆಯಾಗುತ್ತದೆ ಎಂದು ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ವಾದ ಮಂಡಿಸಿದೆ. ಇದು ಕಲ್ಯಾಣ ಯೋಜನೆಗಳ ಲಾಭ ಪಡೆಯುವ ಜನರ ಹಕ್ಕಿನ ನಿರಾಕರಣೆ ಹಾಗೂ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾದ ನಡವಳಿಕೆ ಎಂದೂ ಕೇರಳ ಸರ್ಕಾರ ಹೇಳಿದೆ.
ಪಂಜಾಬ್ ಹಾಗೂ ಕೇರಳ ಸರ್ಕಾರಗಳಿಗಿಂತಲೂ ಹಿಂದೆ ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ ಮುಂತಾದ ಬಿಜೆಪಿಯೇತರ ರಾಜ್ಯಗಳಲ್ಲೂ ಇಂಥದ್ದೇ ಪರಿಸ್ಥಿತಿ ಉದ್ಭವವಾಗಿತ್ತು. ಅದರಲ್ಲೂ ಮುಖ್ಯವಾಗಿ ಸತತ ಪ್ರಯತ್ನಗಳ ಹೊರತಾಗಿಯೂ ಕನಿಷ್ಠ ನೆಲೆಯೂರಲೂ ಸಾಧ್ಯವಾಗದಿರುವ ದಕ್ಷಿಣದ ಕೇರಳ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯಪಾಲರ ಮೂಲಕ ಭಾರಿ ‘ರಾಜಕೀಯ’ವನ್ನೇ ಮಾಡುತ್ತಿದೆ.
ಈ ಮೂರು ರಾಜ್ಯಗಳಲ್ಲೂ ರಾಜ್ಯಪಾಲರು ಮತ್ತು ಆಡಳಿತಾರೂಢ ಸರ್ಕಾರಗಳ ನಡುವಿನ ಸಂಘರ್ಷ ತಾರಕಕ್ಕೇರಿತ್ತು. 2019ರಲ್ಲಿ ತೆಲಂಗಾಣಕ್ಕೆ ರಾಜ್ಯಪಾಲರಾಗಿ ಬಂದ ತಮಿಳಿಸೈ ಸೌಂದರರಾಜನ್, ಎಂದೂ ರಾಜಭವನದೊಳಗೆ ಸುಮ್ಮನೆ ಕೂತವರೇ ಅಲ್ಲ. ರಾಜ್ಯಪಾಲರಾಗಿ ಬಂದ ಗಳಿಗೆಯಿಂದಲೇ ವಿಪಕ್ಷ ನಾಯಕರಂತೆ ಅವರು ರಾಜ್ಯವನ್ನು ಪ್ರವಾಸ ಮಾಡಿದ್ದರು. ಗಣರಾಜ್ಯೋತ್ಸವದಲ್ಲಿ ಮಾತನಾಡಲು ಸರ್ಕಾರ ತಮಿಳಿಸೈ ಅವರಿಗೆ ರಾಜ್ಯಪಾಲರ ಭಾಷಣ ನೀಡಿರಲಿಲ್ಲ. ಕಾರ್ಯಕ್ರಮದಲ್ಲಿ ತಮ್ಮದೇ ಭಾಷಣ ಓದಿದ್ದ ರಾಜ್ಯಪಾಲರು ಭಾಷಣದಲ್ಲಿ ಅಲ್ಲಿನ ಸಿಎಂ ಕೆಸಿಆರ್ ಅವರನ್ನು ಟೀಕಿಸಿ, ಪ್ರಧಾನಿ ಮೋದಿ ಅವರನ್ನು ಹೊಗಳಿದ್ದರು.
ಎಲ್ಲಕ್ಕಿಂತ ಹೆಚ್ಚಾಗಿ, ತಮಿಳಿಸೈ ತೆಲಂಗಾಣ ಸರ್ಕಾರ ಮಂಡಿಸಿದ್ದ 10 ಮಸೂದೆಗಳಿಗೆ ಅಂಕಿತ ಹಾಕದೇ ಹಾಗೆಯೇ ಇಟ್ಟುಕೊಂಡಿದ್ದರು. ಕೊನೆಗೆ ಮುಖ್ಯಮಂತ್ರಿ ಕೆಸಿಆರ್ ಈ ವಿಚಾರವನ್ನು ಸುಪ್ರೀಂ ಕೋರ್ಟ್‌ಗೆ ಒಯ್ದಿದ್ದರು. ಆಗಲೂ ಕೆಲವು ಮಸೂದೆಗಳಿಗೆ ಮಾತ್ರ ಅಂಕಿತ ಹಾಕಿದ್ದ ರಾಜ್ಯಪಾಲರು ಕೆಲವನ್ನು ವಾಪಸ್ ಕಳಿಸಿ, ಮತ್ತೆ ಕೆಲವನ್ನು ರಾಷ್ಟ್ರಪತಿಗೆ ಕಳಿಸಿದ್ದರು. ತಮಿಳಿಸೈ 2023ರ ತೆಲಂಗಾಣ ಬಜೆಟ್ ಅನ್ನು ಕೂಡ ಅನುಮೋದಿಸಿರಲಿಲ್ಲ. ಕೋರ್ಟ್ ಮಧ್ಯಪ್ರವೇಶದ ನಂತರವಷ್ಟೇ ಅವರು ಬಜೆಟ್‌ಗೆ ಅನುಮೋದನೆ ನೀಡಿದ್ದರು.
ತಮಿಳುನಾಡಿನ ರಾಜ್ಯಪಾಲ ರವಿ ಅವರ ಕಥೆ ಭಿನ್ನವೇನಲ್ಲ. ರಾಜ್ಯಪಾಲರಾಗಿ ಬಂದ ಗಳಿಗೆಯಿಂದಲೂ ಅವರು ತಮಿಳುನಾಡಿನ ವಿರೋಧ ಪಕ್ಷದಂತೆ ಕೆಲಸ ಮಾಡತೊಡಗಿದ್ದರು. ಅಲ್ಲಿನ ವಿದ್ಯುತ್ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸುವ ಮೂಲಕ ಹೊಸದೊಂದು ಪರಂಪರೆಗೂ ರಾಜ್ಯಪಾಲರು ಕಾರಣಕರ್ತರಾಗಿದ್ದರು.
ರವಿ ಅವರು ತಮಿಳುನಾಡಿನ ರಾಜ್ಯಪಾಲರಾಗಿ ಬಂದಿದ್ದು ಸೆಪ್ಟೆಂಬರ್ 9, 2021ರಂದು. ಅಂದಿನಿಂದ ಏಪ್ರಿಲ್ 2022ರವರೆಗೆ ರಾಜ್ಯಪಾಲರು ಸ್ಟಾಲಿನ್ ಸಂಪುಟದ 19 ಮಸೂದೆಗಳನ್ನು ತಿರಸ್ಕರಿಸಿದ್ದರು. ಇನ್ನು ಸರ್ಕಾರ ಸಂಪುಟದಲ್ಲಿ ನಿರ್ಣಯಿಸಿ ರಾಜ್ಯಪಾಲರ ಅಂಕಿತಕ್ಕೆಂದು ಕಳಿಸಿದ್ದ 20ಕ್ಕೂ ಹೆಚ್ಚು ಮಸೂದೆಗಳು ರಾಜ್ಯಪಾಲರ ಕಚೇರಿಯಲ್ಲಿಯೇ ಉಳಿಯುವಂತೆ ಮಾಡಿದ್ದರು. ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ನಿಗದಿಪಡಿಸಿದ್ದ ಭಾಷಣವನ್ನು ಯಥಾವತ್ತಾಗಿ ಓದದೇ, ಅದರಲ್ಲಿನ ಕೆಲವು ಅಂಶಗಳನ್ನು ಕೈಬಿಟ್ಟಿದ್ದರು.
ತಮಿಳುನಾಡು ದ್ರಾವಿಡ ಚಳವಳಿಯ ತವರು ನೆಲ. ರವಿ ಅವರು ಆ ರಾಜ್ಯದ ರಾಜ್ಯಪಾಲರಾಗಿ ‘ದ್ರಾವಿಡ ಚಳವಳಿಯಿಂದ ತಮಿಳುನಾಡು ನಲುಗಿಹೋಗಿದೆ’ ಎಂದಿದ್ದರು. ತಮಿಳುನಾಡಿಗೆ ‘ತಮಿಳಗಂ’ ಎನ್ನುವ ಹೆಸರು ಸೂಕ್ತ ಎಂದಿದ್ದರು. ಇಂಥವೇ ನೂರೆಂಟು ರಗಳೆಗಳು, ಕಿರಿಕಿರಿಗಳು; ಅಸಾಂವಿಧಾನಿಕ ನಡೆಗಳು.
ಕೇವಲ ಬಿಜೆಪಿಯೇತರ ರಾಜ್ಯಗಳಲ್ಲಿ ಮಾತ್ರವೇ ರಾಜ್ಯಪಾಲರು ಈ ರೀತಿ ವರ್ತಿಸುತ್ತಿದ್ದಾರೆ ಮತ್ತು ಅವರೆಲ್ಲ ಬಿಜೆಪಿ ನೇಮಿಸಿದ ರಾಜ್ಯಪಾಲರು ಎನ್ನುವುದು ಗಮನಾರ್ಹ. ತಮ್ಮ ರಾಜಕೀಯ ವಿರೋಧಿಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಸರ್ಕಾರಗಳು ಸುಗಮವಾಗಿ ಕೆಲಸ ಮಾಡಲು ಬಿಡಬಾರದು ಎನ್ನುವಂತೆ ಬಿಜೆಪಿ ರಾಜ್ಯಪಾಲರ ಮೂಲಕ ಈ ರೀತಿ ಮಾಡಿಸುತ್ತಿದೆ ಎನ್ನುವ ಆರೋಪಗಳಿವೆ. ಬಿಜೆಪಿ ತನ್ನ ರಾಜಕೀಯ ವಿರೋಧಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಹೋಗಿ ಆ ರಾಜ್ಯಗಳ ಅಭಿವೃದ್ಧಿಗೆ ತಡೆಯೊಡ್ಡಿ, ಅಲ್ಲಿನ ಜನರನ್ನು ಬಲಿಪಶುಗಳನ್ನಾಗಿಸುತ್ತಿದೆ. ರಾಜ್ಯಪಾಲರಾಗಿ ಬಂದವರು ಅವರ ಸಾಂವಿಧಾನಿಕ ಕರ್ತವ್ಯಗಳನ್ನು ಸೂಕ್ತವಾಗಿ ನಿರ್ವಹಿಸದಿದ್ದರೆ, ಅದರಿಂದ ಪ್ರಜಾಪ್ರಭುತ್ವಕ್ಕೆ ಹೊಡೆತ ಬೀಳುತ್ತದೆ. ಈ ಮೂಲಕ ಒಂದು ಕೆಟ್ಟ ಪರಂಪರೆ ಸೃಷ್ಟಿಸಿದ ಕಳಂಕಕ್ಕೆ ಬಿಜೆಪಿ ಪಾತ್ರವಾಗಿದೆ.
ಈ ಸುದ್ದಿ ಓದಿದ್ದೀರಾ: ಪ್ರಗತಿಪರರಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿ ಜೊತೆ ಗೌರಿ ಹಂತಕರ ನಂಟು: ತನಿಖೆ
ಸದ್ಯ ಪಂಜಾಬ್ ರಾಜ್ಯಪಾಲರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ರಾಜ್ಯಪಾಲರ ಕಾರ್ಯವೈಖರಿ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. “ಗವರ್ನರ್‌ಗಳು ತಾವು ಚುನಾಯಿತ ಪ್ರತಿನಿಧಿಗಳಲ್ಲ ಎಂಬ ಅಂಶವನ್ನು ಮರೆತುಬಿಡಬಾರದು” ಎಂದು ಸಿಜೆಐ ಎಚ್ಚರಿಸಿದ್ದಾರೆ. ಸುಪ್ರೀಂ ಮುಂದೆ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಸಲ್ಲಿಸಿರುವ ಇದೇ ರೀತಿಯ ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ಆದರೆ, ನೀವು ಚುನಾಯಿತ ಪ್ರತಿನಿಧಿಗಳಲ್ಲ ಎನ್ನುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಹೇಳಿರುವ ಕಿವಿ ಮಾತನ್ನು ಕೇಳಿಸಿಕೊಳ್ಳುವ ಮನಸ್ಥಿತಿ ಸಂಘರ್ಷದಲ್ಲಿ ತೊಡಗಿರುವ ರಾಜ್ಯಪಾಲರಿಗಿದೆಯೇ?