ಸರ್ಕಾರ ನೀಡುವ ವಾರ್ಷಿಕ ವಿದ್ಯಾರ್ಥಿ ವೇತನವು ಇಂದಿನ ಕಾಲದಲ್ಲಿ ಶಿಕ್ಷಣದ ವೆಚ್ಚವನ್ನು ಪೂರೈಸಲು ಸಾಕಾಗುವುದಿಲ್ಲ ಎಂದು ಸಂಸದೀಯ ಸ್ಥಾಯಿ ಸಮಿತಿಯು ಹೇಳಿದೆ. ಹಣದುಬ್ಬರವನ್ನು ನಿಯಂತ್ರಿಸಬೇಕಾದರೆ ವಿದ್ಯಾರ್ಥಿ ವೇತನದ ಮೊತ್ತವನ್ನು ಪರಿಶೀಲಿಸಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
ಸೋಮವಾರ ಸಂಸತ್ತಿನಲ್ಲಿ ಸಮಿತಿಯು ತನ್ನ ವರದಿಯನ್ನು ಮಂಡಿಸಿದೆ. 2025-26ರ ಅನುದಾನ ಬೇಡಿಕೆಗಳ ಕುರಿತಾದ ತನ್ನ ಇತ್ತೀಚಿನ ವರದಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸ್ಥಾಯಿ ಸಮಿತಿಯು ಶಿಕ್ಷಣ ಸಚಿವಾಲಯ ಮತ್ತು ಇತರ ಪಾಲುದಾರರ ಸಹಯೋಗದೊಂದಿಗೆ ವಿದ್ಯಾರ್ಥಿ ವೇತನದ ಮೊತ್ತವನ್ನು ಪರಿಶೀಲಿಸುವಂತೆ ಇಲಾಖೆಗೆ ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ಮೈಸೂರು | ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ ಎಐಡಿಎಸ್ಓ ಪ್ರತಿಭಟನೆ
ಶಿಕ್ಷಣವನ್ನು ಮುಂದುವರಿಸಲು ವಿದ್ಯಾರ್ಥಿಗೆ ನೀಡಲಾಗುವ ವಾರ್ಷಿಕ ವಿದ್ಯಾರ್ಥಿ ವೇತನವು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಪ್ರಸ್ತುತ ಅಗತ್ಯವಿರುವ ವೆಚ್ಚವನ್ಜು ಪೂರೈಸುವಷ್ಟು ಇಲ್ಲ ಎಂದು ಸಮಿತಿಯು ಅಭಿಪ್ರಾಯಿಸಿದೆ.
ಹಾಗೆಯೇ ಅವಶ್ಯಕತೆ ಮತ್ತು ವಾಸ್ತವದಲ್ಲಿ ಹಂಚಲಾಗುವ ವಿದ್ಯಾರ್ಥಿ ವೇತನದ ನಡುವಿನ ವ್ಯತ್ಯಾಸವನ್ನು ಸಮಿತಿಯು ಉಲ್ಲೇಖಿಸಿದೆ. 2025-26ರ ಹಣಕಾಸು ವರ್ಷದಲ್ಲಿ 14,164.42 ಕೋಟಿ ರೂ.ಗಳ ಬಜೆಟ್ ಹಂಚಿಕೆ ಮಾಡಲಾಗಿದೆ. ಆದರೂ ಕೂಡಾ ಹಲವು ಯೋಜನೆಗಳಿಗೆ ಹಣದ ಕೊರತೆ ಕಂಡುಬಂದಿದೆ. ಇದರಿಂದಾಗಿ ಯೋಜನೆಯ ಲಾಭ ಅಧಿಕ ಜನರಿಗೆ ಲಭ್ಯವಾಗುತ್ತಿಲ್ಲ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಗೆಯೇ ಹಂಚಿಕೆಯಾದ ನಿಧಿಯನ್ನು ಸರಿಯಾಗಿ ಬಳಸುವ ಅಗತ್ಯವನ್ನು ಸಮಿತಿ ಒತ್ತಿ ಹೇಳಿದೆ. ಸರಿಯಾದ ಸಮಯಕ್ಕೆ ನಿಧಿ ಬಳಸದ ಕಾರಣ ಮತ್ತು ಯೋಜನೆ ಸರಿಯಾಗಿ ಜಾರಿ ಮಾಡದ ಕಾರಣದಿಂದಾಗಿ ಮೀಸಲಿಟ್ಟ ಹಣವು ಖರ್ಚಾಗದೆಯೇ ಉಳಿದಿದೆ ಎಂಬುದನ್ನು ಕೂಡಾ ವರದಿ ಹೇಳಿದೆ. ಇದೇ ಸಂದರ್ಭದಲ್ಲಿ ಪಾರದರ್ಶಕತೆಯ ಕೊರತೆಯನ್ನು ಕೂಡಾ ವರದಿ ಎತ್ತಿ ತೋರಿಸಿದೆ.
ಇದನ್ನು ಓದಿದ್ದೀರಾ? ಎಂಟು ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ: ಸಚಿವ ಜಮೀರ್ ಅಹಮದ್ ಖಾನ್
ಬಜೆಟ್ ಹಂಚಿಕೆ ವರ್ಷದಿಂದ ವರ್ಷಕ್ಕೆ ಕೊಂಚ ಪ್ರಮಾಣದಲ್ಲಿ ಅಧಿಕವಾಗುತ್ತಿದ್ದರೂ ವಿವಿಧ ಯೋಜನೆಗಳಿಗೆ ಹಣವನ್ನು ಸರಿಯಾಗಿ ಬಳಸಲಾಗಿಲ್ಲ ಎಂದು ಸಮಿತಿಯು ಹೇಳಿದೆ.
2022-23ರಲ್ಲಿ 6,410.09 ಕೋಟಿ ರೂ. ಮತ್ತು 2023-24 ರಲ್ಲಿ 7,830.26 ಕೋಟಿ ರೂ.ಗಳನ್ನು ವಿವಿಧ ಶೈಕ್ಷಣಿಕ ಯೋಜನೆಗಳಿಗಾಗಿ ಇಲಾಖೆಯ ವೆಚ್ಚ ಮಾಡಿದೆ ಎಂದು ಸಮಿತಿ ಉಲ್ಲೇಖಿಸಿದೆ. ಆದರೆ ವಿವಿಧ ಯೋಜನೆಗಳಿಗೆ ನಿಧಿ ಬಳಿಕ ಪದೇ ಪದೇ ಕಡಿಮೆಯಾಗುತ್ತಿರುವುದು ಸಮಸ್ಯೆಯಾಗಿದೆ. 2025ರ ಫೆಬ್ರವರಿವರೆಗೆ ಶೈಕ್ಷಣಿಕ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಇಲಾಖೆಯು ಕೇವಲ 3,403.51 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಿದೆ.
