ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ಸರ್ಕಾರ ಶನಿವಾರ ಹಿಂಪಡೆದಿದೆ. ಪ್ರತಿ ಟನ್‌ಗೆ ಕನಿಷ್ಠ ರಫ್ತು ಬೆಲೆ 550 ಅಮೆರಿಕನ್ ಡಾಲರ್ ನಿಗದಿ ಮಾಡಿದೆ. ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ. ಮಹಾರಾಷ್ಟ್ರ ಸೇರಿದಂತೆ ಹೆಚ್ಚಾಗಿ ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯ ಮತದಾನಕ್ಕೂ ಮುನ್ನ ನಿಷೇಧವನ್ನು ತೆಗೆದು ಹಾಕಲಾಗಿರುವುದು ಗಮನಾರ್ಹ.
ಸರ್ಕಾರವು ಪ್ರತಿ ಟನ್‌ಗೆ 550 ಡಾಲರ್ (ಕೆಜಿಗೆ 46 ರೂ.) ಮತ್ತು 40% ರಫ್ತು ಸುಂಕವನ್ನು ಸರ್ಕಾರ ವಿಧಿಸಿದೆ. ಸುಂಕವನ್ನೂ ಪರಿಗಣಿಸಿ, ಪ್ರತಿ ಟನ್‌ಗೆ 770 ಡಾಲರ್‌ಗೆ (ಪ್ರತಿ ಕೆಜಿಗೆ ಸುಮಾರು 64 ರೂ.) ಕ್ಕಿಂತ ಕಡಿಮೆ ವೆಚ್ಚಕ್ಕೆ ಈರುಳ್ಳಿ ರಫ್ತನ್ನುಅನುಮತಿಸುವುದಿಲ್ಲ ಎಂದು ಸರ್ಕಾರ ಹೇಳಿದೆ.
ಕಳೆದ ವರ್ಷ ಈರುಳ್ಳಿ ಉತ್ಪಾದನೆಯಲ್ಲಿ ಕುಸಿತ ಕಂಡಿತ್ತು. ದೇಶದಲ್ಲಿ ಈರುಳ್ಳಿ ಬೆಲೆ ಭಾರೀ ಏರಿಕೆ ಕಂಡಿತ್ತು. ಪರಿಣಾಮ, ಬೆಲೆ ನಿಯಂತ್ರಣ ಮಾಡಲು 2023 ಡಿಸೆಂಬರ್ 8ರಂದು ವಿದೇಶಗಳಿಗೆ ಈರುಳ್ಳಿ ರಫ್ತನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಆದೇಶಿಸಿತ್ತು.
ಕಳೆದ 4-5 ವರ್ಷಗಳಲ್ಲಿ, ಭಾರತವು ವಾರ್ಷಿಕವಾಗಿ 17ರಿಂದ 25 ಲಕ್ಷ ಟನ್‌ಗಳಷ್ಟು ಈರುಳ್ಳಿಯನ್ನು ವಿದೇಶಗಳಿಗೆ ರಫ್ತು ಮಾಡಿದೆ.
ಶುಕ್ರವಾರ ರಾತ್ರಿ ಹಣಕಾಸು ಸಚಿವಾಲಯವು ಈರುಳ್ಳಿ ರಫ್ತಿಗೆ ಶೇ.40 ರಫ್ತು ಸುಂಕವನ್ನು ವಿಧಿಸಿದೆ. ಮಹಾರಾಷ್ಟ್ರದ ನಾಸಿಕ್, ಅಹಮದ್‌ನಗರ ಮತ್ತು ಸೊಲ್ಲಾಪುರದಂತಹ ಪ್ರಮುಖ ಈರುಳ್ಳಿ ಬೆಳೆವ ಪ್ರದೇಶಗಳ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ರಫ್ತು ನಿಷೇಧವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು. ಇದೀಗ, ಈ ಪ್ರದೇಶದಲ್ಲಿ ಲೋಕಸಭೆ ಚುನಾವಣೆಗೆ ಮೇ 13ರಂದು ಮತದಾನ ನಡೆಯಲಿದೆ. ಅದಕ್ಕೂ ಮುನ್ನ ನಿಷೇಧ ತೆರವು ಮತ್ತು ಸಂಕ ನಿಗದಿಯು ಮಹತ್ವದ್ದಾಗಿದ್ದು, ಮತದಾರರನ್ನು ಸೆಳೆಯುವ ತಂತ್ರವೆಂದೂ ಹೇಳಲಾಗುತ್ತಿದೆ.