2,000 ರೂಪಾಯಿಗಿಂತ ಮೇಲ್ಪಟ್ಟು ಯುಪಿಐ ಮೂಲಕ ಪಾವತಿ ಮಾಡುವ ವಹಿವಾಟಿನ ಮೇಲೆ ಜಿಎಸ್‌ಟಿ ವಿಧಿಸಲು ಕೇಂದ್ರ ಸರ್ಕಾರ ಯೋಜಿಸಿದೆ ಎಂಬ ವದಂತಿ ದೇಶಾದ್ಯಂತ ವ್ಯಾಪಕವಾಗಿ ಹರಡಿದೆ. ಈ ಬೆನ್ನಲ್ಲೇ, ವದಂತಿಯನ್ನು ಅಲ್ಲಗಳೆದಿರುವ ಕೇಂದ್ರ ಸರ್ಕಾರ, ಅಂತಹ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ. ವದಂತಿಯು ಸುಳ್ಳು ಎಂದು ಹೇಳಿದೆ.
ಕೇಂದ್ರ ಸರ್ಕಾರ ನೀಡಿರುವ ಸ್ಪಷ್ಟನೆ ಕುರಿತು ಪ್ರೆಸ್ ಇನ್ಫರ್ಮೇಶನ್ ಬ್ಯೂರೊ ಅಧಿಕೃತ ಪ್ರಕಟಣೆ ಹೊರಡಿಸಿದೆ. “2,000 ರೂ. ಮೇಲ್ಪಟ್ಟ ಯಾವುದೇ ಯುಪಿಐ ವಹಿವಾಟಿನ ಮೇಲೆ ಜಿಎಸ್‌ಟಿ ವಿಧಿಸಲು ಸರ್ಕಾರವು ಯೋಜಿಸಿಲ್ಲ. ವೈರಲ್ ಆಗಿರುವ ವದಂತಿಯು ಸುಳ್ಳು, ದಾರಿ ತಪ್ಪಿಸುವ ಹಾಗೂ ನಿರಾಧಾರವಾದದ್ದು” ಎಂದು ಹೇಳಿದೆ.
“ಸರ್ಕಾರದ ಎದುರು ಅಂತಹ ಯಾವುದೇ ಪ್ರಸ್ತಾವನೆಯಿಲ್ಲ. ಸರ್ಕಾರವು ಯುಪಿಐ ಮೂಲಕ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಬದ್ಧವಾಗಿದೆ” ಎಂದಿದೆ.