ಹೋಟೆಲಿನ ಊಟದ ಮೇಲಿನ ಜಿಎಸ್‌ಟಿ ಶೇ.10 ರಷ್ಟಿದ್ದರೆ ಅದನ್ನು ಕೋಟ್ಯಾಧೀಶರು ನೀಡುತ್ತಾರೆ ಮತ್ತು ಸಾವಿರಾರು ರೂಪಾಯಿ ವರಮಾನದವರೂ ಕೂಡ ಇದನ್ನು ಪಾವತಿಸಬೇಕು. ಮೈಸೋಪಿಗೆ ಅಮಿತಾಭ್ ಬಚ್ಚನ್, ಮುಖೇಶ್ ಅಂಬಾನಿ ಎಷ್ಟು ಜಿಎಸ್‌ಟಿ ಪಾವತಿಸುತಾರೋ ಅಷ್ಟೇ ದರವನ್ನು ಕೂಲಿಕಾರರು, ಕಾರ್ಮಿಕರು ಪಾವತಿಸಬೇಕಾಗುತ್ತದೆ. ಆದ ಕಾರಣ ಪರೋಕ್ಷ ತೆರಿಗೆಗಳು ಪ್ರತಿಗಾಮಿ ತೆರಿಗೆಗಳು.
ಮನುಷ್ಯರ ಬದುಕಿನಲ್ಲಿ ಎರಡು ಸಂಗತಿಗಳಿಂದ ಅವರಿಗೆ ಬಿಡುಗಡೆಯಿಲ್ಲ ಎಂದು ಹೇಳುತ್ತಾರೆ. ಅದರಲ್ಲಿ ಒಂದು ಸಾವು; ಎರಡನೆಯದು ತೆರಿಗೆ. ಅಂತಹ ತೆರಿಗೆಗಳಲ್ಲಿ ಸಣ್ಣ-ಪುಟ್ಟ ವ್ಯಾಪಾರಿಗಳಿಗೆ, ಬೀದಿಬದಿ ಮಾರಾಟಗಾರರಿಗೆ, ತಿಂಡಿ-ತಿನಿಸು ಮಾರುವವರಿಗೆ, ಕೂಲಿಕಾರರಿಗೆ, ಅಂಗಡಿಗಳಿಗೆ ಯಮಪಾಶವಾಗಿರುವ ತೆರಿಗೆಯೆಂದರೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ).
ತೆರಿಗೆಗಳಲ್ಲಿ ಎರಡು ವಿಧ. ಒಂದು ನೇರ ತೆರಿಗೆ ಮತ್ತೊಂದು ಪರೋಕ್ಷ ತೆರಿಗೆ. ನೇರ ತೆರಿಗೆಯು ವ್ಯಕ್ತಿಗಳ ತೆರಿಗೆ ನೀಡಬಲ್ಲ ಸಾಮರ್ಥ್ಯದ ಮೇಲೆ ವಿಧಿಸಲಾಗುತ್ತದೆ. ಉದಾ: ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ. ಆದರೆ, ಜಿಎಸ್‌ಟಿ ಅಂತಹ ಪರೋಕ್ಷ ತೆರಿಗೆಗಳಲ್ಲಿ ತೆರಿಗೆ ಹೊರುವ ಸಾಮರ್ಥ್ಯವಿರಲಿ-ಇಲ್ಲದಿರಲಿ ಅದನ್ನು ಜನರ ಮೇಲೆ ಹೇರಲಾಗುತ್ತದೆ. ನೇರ ತೆರಿಗೆ ದರಗಳು ವರಮಾನದ ಆರೋಹಣ ರೀತಿಯಲ್ಲಿದ್ದರೆ ಪರೋಕ್ಷ ತೆರಿಗೆಗಳಲ್ಲಿ ಅಂತಹ ವರಮಾನದ ಭಿನ್ನತೆ ಇರುವುದಿಲ್ಲ. ನೇರ ತೆರಿಗೆಗಳಲ್ಲಿ ನಿಯಮ: ಅಧಿಕ ವರಮಾನ, ಅಧಿಕ ತೆರಿಗೆ ದರ. ಜಿಎಸ್‌ಟಿಯಲ್ಲಿ ಕೋಟ್ಯಾಧಿಪತಿಗಳಿಗೂ ಒಂದೇ ದರ, ಕೂಲಿಕಾರರಿಗೂ ಒಂದೇ ದರ.
ಸಹಜವಾಗಿ ಇದು ಕಡಿಮೆ ವರಮಾನದ ತೆರಿಗೆದಾರರ ಮೇಲೆ ಹೆಚ್ಚು ಹೊರೆ ಹೊರಿಸುತ್ತದೆ. ಉನ್ನತ ವರಮಾನದವರು ಜಿಎಸ್‌ಟಿ ತೆರಿಗೆಯನ್ನು ಭರಿಸಬಲ್ಲರು. ಏಕೆಂದರೆ, ಅವರ ವರಮಾನ ಅಧಿಕವಾಗಿದೆ. ಉದಾ: ವರಮಾನ 2 ಕೋಟಿ ರೂ. ಇರುವ ವ್ಯಕ್ತಿಯು ಕೊಳ್ಳುವ ದೈನಂದಿನ ಸರಕುಗಳ ತೆರಿಗೆ 2 ಲಕ್ಷ ರೂ. ಆಗಿದ್ದರೆ ಇಲ್ಲಿನ ತೆರಿಗೆ ಭಾರ ಶೇ.1. ಆದರೆ, 2 ಲಕ್ಷ ರೂ. ವರಮಾನದವರಿಗೆ ಪರೋಕ್ಷ ತೆರಿಗೆ 20,000 ರೂ. ಆಗಿದ್ದರೆ ಇಲ್ಲಿ ತೆರಿಗೆ ಬಾರ ಶೇ.10. ಕೋಟ್ಯಾಧೀಶರ ಮೇಲಿನ ಜಿಎಸ್‌ಟಿ ಮತ್ತು ಸಾವಿರಾರು ರೂಪಾಯಿ ವರಮಾನದವರ ಮೇಲಿನ ಜಿಎಸ್‌ಟಿ ದರ ಒಂದೇ ಇರುತ್ತದೆ. ಹೋಟೆಲಿನ ಊಟದ ಮೇಲಿನ ಜಿಎಸ್‌ಟಿ ಶೇ.10 ರಷ್ಟಿದ್ದರೆ ಅದನ್ನು ಕೋಟ್ಯಾಧೀಶರು ನೀಡುತ್ತಾರೆ ಮತ್ತು ಸಾವಿರಾರು ರೂಪಾಯಿ ವರಮಾನದವರೂ ಕೂಡ ಇದನ್ನು ಪಾವತಿಸಬೇಕು. ಮೈಸೋಪಿಗೆ ಅಮಿತಾಭ್ ಬಚ್ಚನ್, ಮುಖೇಶ್ ಅಂಬಾನಿ ಎಷ್ಟು ಜಿಎಸ್‌ಟಿ ಪಾವತಿಸುತಾರೋ ಅಷ್ಟೇ ದರವನ್ನು ಕೂಲಿಕಾರರು, ಕಾರ್ಮಿಕರು ಪಾವತಿಸಬೇಕಾಗುತ್ತದೆ. ಆದ ಕಾರಣ ಪರೋಕ್ಷ ತೆರಿಗೆಗಳು ಪ್ರತಿಗಾಮಿ ತೆರಿಗೆಗಳು. ನಮ್ಮ ದೇಶದಲ್ಲಿ 2017ರಲ್ಲಿ ಜಾರಿಗೆ ಬಂದ ಜಿಎಸ್‌ಟಿ ಅಂತಹ ಒಂದು ಕ್ರೂರ ತೆರಿಗೆಯಾಗಿದೆ.
ಜಿಎಸ್‌ಟಿ ನೋಟಿಸ್
ಪ್ರಸ್ತುತ ರಾಜ್ಯದಲ್ಲಿ ಸಣ್ಣ-ಪುಟ್ಟ ವ್ಯಾಪಾರಿಗಳಿಗೆ – ಹೂವಿನ, ಹಣ್ಣಿನ, ತರಕಾರಿ ವ್ಯಾಪಾರಿಗಳಿಗೆ, ಬೀದಿಬದಿ ಮಾರಾಟಗಾರರಿಗೆ, ಬೇಕರಿಗಳಿಗೆ, ಕಾಂಡಿಮೆಂಟ್ಸ್ ಅಂಗಡಿಗಳಿಗೆ, ರಸ್ತೆಬದಿ ಊಟ-ತಿಂಡಿ ಹೋಟೆಲು ನಡೆಸುವವರಿಗೆ ವಾಣಿಜ್ಯ ತೆರಿಗೆ ಇಲಾಖೆಯು ಜಿಎಸ್‌ಟಿಗೆ ಸಂಬಂಧಿಸಿದಂತೆ ವ್ಯವಹಾರದ ವಿವರಣೆ ನೀಡಿ ತೆರಿಗೆ ಪಾವತಿಸುವಂತೆ ನೋಟಿಸುಗಳನ್ನು ನೀಡುತ್ತಿದೆ. ಇದರಿಂದ ಗಾಬರಿಗೊಂಡ ವ್ಯಾಪಾರಿಗಳು ಡಿಜಿಟಲ್ ಪಾವತಿಯ ಯುಪಿಐ ಕ್ರಮವನ್ನು ನಿಲ್ಲಿಸಿ ನಗದುವಿನಲ್ಲಿ ಹಣ ನೀಡುವಂತೆ ಗ್ರಾಹಕರನ್ನು ಒತ್ತಾಯಿಸುತ್ತಿದ್ದಾರೆ. ಡಿಜಿಟಲ್ ವ್ಯವಸ್ಥೆಯಿಂದ ನಗದು ವ್ಯವಸ್ಥೆಗೆ ಮರಳುತ್ತಿದ್ದಾರೆ. ಇದರಿಂದ ಜಿಎಸ್‌ಟಿ ಬಲೆಯಿಂದ ಮುಕ್ತವಾಗಬಹುದು ಎಂದು ಅವರು ಭಾವಿಸಿದ್ದಾರೆ. ವಾಸ್ತವ ಸ್ಥಿತಿ ಬೇರೆಯೇ ಇದೆ. ಅದು ನಗದು ಇರಲಿ ಅಥವಾ ಡಿಜಿಟಲ್ (ಯುಪಿಐ) ಪಾವತಿ ಇರಲಿ ಜಿಎಸ್‌ಟಿಯಿಂದ ಮುಕ್ತಿ ದೊರೆಯುವುದಿಲ್ಲ.
ಹಣಕಾಸಿನ ವ್ಯವಹಾರ 40 ಲಕ್ಷ ರೂ. ಮೀರಿದರೆ, ಅವರೆಲ್ಲ ಜಿಎಸ್‌ಟಿ ವ್ಯಾಪ್ತಿಗೆ ಬರುತ್ತಾರೆ ಮತ್ತು ಅವರು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.
ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಸಣ್ಣ-ಪುಟ್ಟ ವ್ಯಾಪಾರಿಗಳ (ಪೆಟ್ಟಿ ಸೋರ‍್ಸ್) ಸಂಘಟನೆಗಳು ಜುಲೈ 25ರಂದು ರಾಜ್ಯ ಬಂದ್‌ಗೆ ಕರೆ ನೀಡಿದ್ದು, ಸಿಎಂ ಸಂದಾನದ ನಂತರ ವಾಪಸ್ ಪಡೆದಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ರಾಜ್ಯ ಮುಖಂಡರು ಇದು ರಾಜ್ಯ ಸರ್ಕಾರದ ಕ್ರಮವಾಗಿದೆ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದರೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಜಿಎಸ್‌ಟಿ ಕೇಂದ್ರದ ತೆರಿಗೆಯೆಂದು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಈ ಮಧ್ಯೆ, ತೆರಿಗೆ ಸಲಹೆಗಾರರಿಗೆ ಹಣ ಮಾಡಲು ಇದೊಂದು ಅವಕಾಶವಾಗಿದೆ. ಅವರು ಜಿಎಸ್‌ಟಿಗೆ ಸಂಬಂಧಿಸಿದಂತೆ ಸಲಹೆ ನೀಡುತ್ತಿದ್ದಾರೆ. ಗ್ಯಾರಂಟಿಗಳಿಗೆ ವಿರೋಧಿಗಳಾಗಿರುವ ರಾಜ್ಯದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ‘ಗ್ಯಾರಂಟಿ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಸಂಪನ್ಮೂಲ ಸಂಗ್ರಹಕ್ಕೆ ಜಿಎಸ್‌ಟಿ ನೋಟಿಸುಗಳನ್ನು ರಾಜ್ಯ ಸರ್ಕಾರ ನೀಡುತ್ತದೆ’ ಎಂದು ಆರೋಪಿಸುತ್ತಿದ್ದಾರೆ.
ಜಿಎಸ್‌ಟಿ ಸಮಸ್ಯೆಯ ಮೂಲ ಎಲ್ಲಿದೆ?
ಜಿಎಸ್‌ಟಿ ನೋಟಿಸು, ಒಂದು ದೇಶ-ಒಂದು ತೆರಿಗೆ, ತೆರಿಗೆ ಶಿಸ್ತು ಮುಂತಾದವುಗಳೆಲ್ಲ ಕೇವಲ ಮೇಲು ಮೇಲಿನ ವಿವರಣೆಗಳಾಗಿವೆ. ಮೂಲ ಸಮಸ್ಯೆ ಜಿಎಸ್‌ಟಿ ವ್ಯವಸ್ಥೆಯಲ್ಲಿದೆ. ಈಗಾಗಲೆ ಹೇಳಿರುವಂತೆ ಇದು ಕೆಳವರಮಾನದ ದುಡಿಮೆಗಾರರಿಗೆ ಯಮಪಾಶವಾಗಿದೆ. ಮೋದಿ ಸರ್ಕಾರವು ಸಂಪನ್ಮೂಲ ಸಂಗ್ರಹಕ್ಕೆ ಪರೋಕ್ಷ ತೆರಿಗೆಗಳನ್ನು ಹೆಚ್ಚು ಅವಲಂಬಿಸಿದೆ. ನೇರ ತೆರಿಗೆಗಳಲ್ಲಿ ಅದು ಅನೇಕ ಬಗೆಯ ರಿಯಾಯತಿ ನೀಡುತ್ತಿದೆ. ಉದಾ: 2019ರಲ್ಲಿ ಪ್ರಮುಖ ನೇರ ತೆರಿಗೆ ಇರುವ ಕಾರ್ಪೊರೇಟ್ ತೆರಿಗೆ ದರವನ್ನು ಶೇ.30 ರಿಂದ ಶೇ.22ಕ್ಕಿಳಿಸಿತು. ‘ದಿ ಹಿಂದು’ ಪತ್ರಿಕೆ ನಡೆಸಿದ ಸಂಶೋಧನೆಯ ಪ್ರಕಾರ, 2019ರ ನಂತರ ಐದು ವರ್ಷಗಳಲ್ಲಿ ಕಾರ್ಪೊರೇಟ್ ತೆರಿಗೆ ಕಡಿತದಿಂದ ಬೃಹತ್ ಉದ್ಯಮಿಗಳಿಗೆ, ಕಾರ್ಪೊರೇಟ್‌ಗಳಿಗೆ 3.14 ಲಕ್ಷ ಕೋಟಿ ರೂ. ತೆರಿಗೆ ಉಳಿತಾಯವಾಗಿದೆ ಎನ್ನಲಾಗಿದೆ. ಇದಲ್ಲದೆ, ನೇರ ತೆರಿಗೆಗಳಿಗೆ ನೀಡುತ್ತಿರುವ ರಿಯಾಯತಿ-ವಿನಾಯತಿ, ತೆರಿಗೆ ರಜ ಮುಂತಾದ ಕ್ರಮಗಳಿಂದಾಗಿ ಸರ್ಕಾರವು 8 ಲಕ್ಷ ಕೋಟಿ ರೂ. ತೆರಿಗೆ ಸಂಪನ್ಮೂಲ ಕಳೆದುಕೊಂಡಿದೆ ಎನ್ನುತ್ತದೆ ಅದೇ ಅಧ್ಯಯನ. ಕಳೆದ 5 ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳ ಲಾಭವು ಶೇ.32.5ರಷ್ಟು ಏರಿಕೆಯಾಗಿದೆ. ಆದರೆ, ಅವು ನೀಡುವ ತೆರಿಗೆಗಳಲ್ಲಿ ಏರಿಕೆಯ ಪ್ರಮಾಣ ಅತ್ಯಂತ ಕಡಿಮೆಯಾಗಿದೆ.
ಈ ಲೇಖನ ಓದಿದ್ದೀರಾ?: ಅಚ್ಯುತಾನಂದನ್- ಕೇರಳ ರಾಜಕಾರಣದ ದಂತಕಥೆ
ನೇರ ತೆರಿಗೆ ಪಾವತಿಸುವವರನ್ನು ‘ವೆಲ್ಥ್ ಕ್ರಿಯೇಟರ್ಸ್’ ಎಂದು ಮೋದಿ ಕರೆಯುತ್ತಿದ್ದಾರೆ. ಆದರೆ, ಪರೋಕ್ಷ ತೆರಿಗೆ ನೀಡುವವರನ್ನು ಹಿಂಸಿಸುತ್ತಿದ್ದಾರೆ. ಜಿಎಸ್‌ಟಿ ರೆವಿನ್ಯೂವಿನಲ್ಲಿ ಉಂಟಾಗುತ್ತಿರುವ ತೀವ್ರ ಏರಿಕೆಯನ್ನು ದೊಡ್ಡ ಸಾಧನೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬೆನ್ನನ್ನು ತಟ್ಟಿಕೊಳ್ಳುತ್ತಿರುತ್ತಾರೆ. ಇದು ದೇಶದಲ್ಲಿನ ಬಡ ದುಡಿಮೆಗಾರರ ಶೋಷಣೆ ಎಂಬುದನ್ನು ಅವರು ಮರೆಮಾಚುತ್ತಿದ್ದಾರೆ. ಕೇಂದ್ರದ 2025-26ನೇ ಸಾಲಿನ ಒಟ್ಟು ತೆರಿಗೆ ರೆವಿನ್ಯೂದಲ್ಲಿ ಕಾರ್ಪೊರೇಟ್ ತೆರಗೆ ಪಾಲು ಶೇ.17ರಷ್ಟಿದ್ದರೆ ಜಿಎಸ್‌ಟಿ ಪಾಲು ಶೇ.18ರಷ್ಟಿದೆ.
ಯಾರ ತೆರಿಗೆ ಹೊರುವ ಸಾಮರ್ಥ್ಯ ಅಧಿಕವಾಗಿದೆ?
‘ವರ್ಲ್ಡ್ ಇನೀಕ್ವಾಲಿಟಿ ಲ್ಯಾಬ್’ನ ಅಧ್ಯಯನದ ಪ್ರಕಾರ, 2022ರಲ್ಲಿ ಭಾರತದ ಒಟ್ಟು ವರಮಾನದಲ್ಲಿ ಶೇ.57ರಷ್ಟನ್ನು ಒಟ್ಟು ಜನಸಂಖ್ಯೆಯ ಶೇ.10ರಷ್ಟು ಜನರು ನುಂಗಿ ನೊಣೆಯುತ್ತಿದ್ದಾರೆ. ಇವರು ದೇಶದ ಒಟ್ಟು ಸಂಪತ್ತಿನಲ್ಲಿ ಶೇ.75ರಷ್ಟನ್ನು ಅನುಭವಿಸುತ್ತಿದ್ದಾರೆ. ಆದರೆ, ದೇಶದಲ್ಲಿನ ಒಟ್ಟು ತೆರಿಗೆ ಮೊತ್ತದಲ್ಲಿ ಅತಿ ಶ್ರೀಮಂತರು ನೇಡುವ ಕಾರ್ಪೊರೇಟ್ ತೆರಿಗೆಯ ಪ್ರಮಾಣ ಪರೋಕ್ಷ ತೆರಿಗೆಯ ಮೊತ್ತಕ್ಕಿಂತ ಕಡಿಮೆಯಿದೆ (9.8 ಲಕ್ಷ ಕೋಟಿ ರೂ.:2025-26). ಆದರೆ, ಜಿಎಸ್‌ಟಿ ಮೊತ್ತ 10.62 ಲಕ್ಷ ಕೋಟಿ ರೂ. ಮೋದಿ ಸರ್ಕಾರವು ಕಾರ್ಪೊರೇಟ್ ವಲಯಕ್ಕೆ ಎಲ್ಲ ಬಗೆಯ ರಿಯಾಯತಿ-ವಿನಾಯತಿ, ಪ್ರೋತ್ಸಾಹ ಮತ್ತು ಉತ್ತೇಜನ ನೀಡುತ್ತಿದೆ. ಆದರೆ, ಲಕ್ಷಾಂತರ ರೂಪಾಯಿ ವ್ಯಾಪಾರ ಮಾಡುವ ಬಡ-ಪುಡಿ ವ್ಯಾಪಾರಗಾರರನ್ನು ಹಿಂಸಿಸುತ್ತಿದೆ.
‘ಒಂದು ದೇಶ: ಒಂದು ತೆರಿಗೆ’ ತತ್ವದ ಜಿಎಸ್‌ಟಿ ರದ್ದಾಗಬೇಕು
ಈಗ ಸರ್ಕಾರ ನೀಡಿರುವ ನೋಟಿಸುಗಳನ್ನು ವಾಪಸ್ಸು ಪಡೆದರೆ ಅಥವಾ ಜಿಎಸ್‌ಟಿಯಲ್ಲಿ ರಿಯಾಯತಿ ನೀಡಿದರೆ ಸಮಸ್ಯೆಯು ಬಗೆಹರಿಯುವುದಿಲ್ಲ. ಈ ತೆರಿಗೆಯು ನಮ್ಮ ಸಂವಿಧಾನಾತ್ಮಕ ಒಕ್ಕೂಟ ತತ್ವಕ್ಕೆ ವಿರುದ್ಧವಾದುದು. ಇದು ರಾಜ್ಯ ಸರ್ಕಾರಗಳ ಹಣಕಾಸು ಸ್ವಾಯತ್ತತೆಯನ್ನು ಹರಣ ಮಾಡುತ್ತದೆ. ಸಂಪನ್ಮೂಲಕ್ಕಾಗಿ ರಾಜ್ಯಗಳು ಕೇಂದ್ರದ ಮುಂದೆ ಕೈಚಾಚಬೇಕಾಗುತ್ತದೆ. ದೇಶದಲ್ಲಿ ದುಡಿಮೆಗಾರರು, ಕೂಲಿಕಾರರು, ಬೀದಿಬದಿ ಮಾರಾಟಗಾರರು, ಬೇಕರಿ ಅಂಗಡಿಯವರು – ಒಟ್ಟಾರೆ ಕೆಳವರಮಾನ ವರ್ಗವು ಹಿಂಸೆಗೆ-ಶೋಷಣೆಗೆ ಒಳಗಾಗುತ್ತದೆ. ಆರ್ಥಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ. ಆರ್ಥಿಕ ಬೆಳವಣಿಗೆಗೆ ಇದು ಕಂಟಕವಾಗುತ್ತದೆ. ಆದ್ದರಿಂದ ಜಿಎಸ್‌ಟಿ ರದ್ದಾಗಬೇಕು. ಇದನ್ನು ತೇಪೆ ಹಾಕಿ ಸರಿಪಡಿಸುವುದರಲ್ಲಿ ಅರ್ಥವಿಲ್ಲ. ಮೋದಿ ಸರ್ಕಾರ ಸಂಪನ್ಮೂಲಕ್ಕೆ ಬಿಲಿಯನ್‌ಗಟ್ಟಲೆ ವರಮಾನದ ಕಾರ್ಪೊರೇಟ್ ವಲಯ, ಅತಿದೊಡ್ಡ ವ್ಯಾಪಾರಗಾರರು, ಉದ್ಯಮಿಗಳನ್ನು ಅವಲಂಬಿಸಬೇಕೇ ವಿನಾ ದುಡಿಮೆಗಾರರನ್ನಲ್ಲ. ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುವವರನ್ನಲ್ಲ.