ಒಂದು ದೇಶ, ಒಂದು ಚುನಾವಣೆ, ಒಂದು ಪಡಿತರ, ಒಂದು ಗುರುತಿನ ಚೀಟಿ – ಹೀಗೆ ಎಲ್ಲದರಲ್ಲೂ ಒಂದು, ಒಂದು ಎಂದು ಹೇಳುತ್ತಿರುವ ಮೋದಿ ಸರ್ಕಾರ, ತೆರಿಗೆಯಲ್ಲೂ ಒಂದೇ ತೆರಿಗೆ ಎಂದು ಹೇಳಿಕೊಂಡು ಜಿಎಸ್‌ಟಿಯನ್ನು ಜಾರಿಗೆ ತಂದಿದೆ. ಜಿಎಸ್‌ಟಿ ಪರ-ವಿರೋಧವಾಗಿ ಹಲವಾರು ರೀತಿಯ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ಆರೋಗ್ಯ ಸೇರಿದಂತೆ ನಾನಾ ರೀತಿಯ ವಿಮೆಗಳ ಮೇಲೂ ಜಿಎಸ್‌ಟಿ ವಿಧಿಸುತ್ತಿರುವುದರ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ವಿಮಾ ಕಂತು ಪಾವತಿಯ ಮೇಲಿನ ಜಿಎಸ್‌ಟಿಯನ್ನು ರದ್ದುಗೊಳಿಸಬೇಕೆಂಬ ಆಗ್ರಹಗಳೂ ಕೇಳಿಬರುತ್ತಿವೆ. ವಿಮೆ ಕಂತುಗಳ ಮೇಲೆ ವಿಧಿಸಲಾಗುವ ಜಿಎಸ್‌ಟಿಯನ್ನ ರದ್ದುಗೊಳಿಸುವಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಸಮಸ್ಯೆ ಏನು? ವಿಮೆ ಮೇಲಿನ ಜಿಎಸ್‌ಟಿ ತೆಗೆದರೆ ಆಗುವ ಲಾಭಗಳೇನು? ನೋಡೋಣ…
ಜಿಎಸ್‌ಟಿಗೂ ಮೊದಲು ವಿಮೆ ಮೇಲಿನ ತೆರಿಗೆ ಎಷ್ಟಿತ್ತು?
2017ರಲ್ಲಿ ಜಿಎಸ್‌ಟಿ ಜಾರಿಗೆ ಬರುವುದಕ್ಕಿಂತ ಮೊದಲು ವಿಮಾ ಕಂತುಗಳ ಮೇಲೆ 15% ಸೇವಾ ತೆರಿಗೆಯನ್ನ ವಿಧಿಸಲಾಗುತ್ತಿತ್ತು. ಜಿಎಸ್‌ಟಿ ಅನ್ನೋ ಕಾನ್ಸೆಪ್ಟ್ ಬಂದಮೇಲೆ ವಿಮಾ ಕಂತುಗಳ ಮೊತ್ತ ಜಾಸ್ತಿಯಾಗಿದೆ. ಅದರಲ್ಲೂ ಇತ್ತೀಚಿನ ಕೆಲವು ವರ್ಷಗಳಲ್ಲಿ ಒಂದಿಷ್ಟು ಆರೋಗ್ಯ ವಿಮಾ ಕಂಪನಿಗಳ ಕಂತಿನ ಮೊತ್ತ ಕೂಡ ಗಣನೀಯವಾಗಿ ಹೆಚ್ಚಾಗಿದೆ. ಅಂತೆಯೇ, ವಿಮೆಯ ಮೇಲಿನ ಜಿಎಸ್‌ಟಿ ಸಂಗ್ರಹವೂ ಹೆಚ್ಚುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಆರೋಗ್ಯ ವಿಮಾ ಕಂತುಗಳ ಮೇಲೆ 24,529 ಕೋಟಿ ರೂ. GST ಸಂಗ್ರಹ ಆಗಿದೆ ಎಂದು ಹಣಕಾಸು ಸಚಿವಾಲಯವೇ ಹೇಳಿದೆ. 2023-24ರ ಸಾಲಿನಲ್ಲಿ ಆರೋಗ್ಯ ವಿಮಾ ಕಂತುಗಳಿಂದ 8,262.94 ಕೋಟಿ ರೂ. ಹಾಗೂ ಆರೋಗ್ಯ ಮರು ವಿಮಾ ಕಂತುಗಳಿಂದ 1,484.36 ಕೋಟಿ GST ಸಂಗ್ರಹವಾಗಿದೆ.
ಅದರಲ್ಲೂ, 2047ರ ಹೊತ್ತಿಗೆ ಭಾರತದ ಪ್ರತಿಯೊಬ್ಬ ಪ್ರಜೆಯೂ ವಿಮೆಯನ್ನ ಹೊಂದಿರಬೇಕು ಅನ್ನೋ ಮಹತ್ವಾಕಾಂಕ್ಷೆಯ ಗುರಿಯನ್ನ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧೀಕಾರ ಹೊಂದಿದೆ. ಆದರೆ, ನಮ್ಮ ದೇಶದಲ್ಲಿ ನಡೆಯುತ್ತಿರುವ ಒಂದಿಷ್ಟು ಬೆಳವಣಿಗೆಗಳನ್ನ ಗಮನಿಸಿದರೆ, ಈ ಗುರಿ ತಲುಪಲು ಸಾಧ್ಯವೇ ಎಂಬ ಅನುಮಾನಗಳು ಕೂಡ ಇವೆ. ಯಾಕೆಂದರೆ, ಜೀವ ವಿಮೆ, ಆರೋಗ್ಯ ವಿಮೆ ಸೇರಿ ಎಲ್ಲ ವಿಮೆಗಳ ಮೇಲೆ 18% ಜಿಎಸ್‌ಟಿ ಎಂಬ ಹೊರೆ ಇದೆ. ವಿಮೆ ತುಂಬೋದರ ಜೊತೆಗೆ ಪಾಲಿಸಿದಾರರು 18% GSTಯನ್ನೂ ತುಂಬಬೇಕಾಗಿದೆ. ಇದು, ಹಲವರನ್ನು ವಿಮಾ ಸೌಲಭ್ಯಗಳಿಂದ ವಿಮುಖರಾಗುವಂತೆ ಮಾಡುತ್ತಿದೆ.
ವಿಮೆ ಮೇಲಿನ GST ಸಂಪೂರ್ಣ ರದ್ದಾಗುತ್ತಾ?
ಭಾರತದಲ್ಲಿ ಆರೋಗ್ಯ ವಿಮೆಗೆ ಪ್ರಸ್ತುತ 18% ಜಿಎಸ್‌ಟಿ ವಿಧಿಸಲಾಗಿದೆ. ಆರೋಗ್ಯ ವಿಮೆಗೆ ಜಿಎಸ್‌ಟಿ ಕಡಿತಗೊಳಿಸುವ ಬಗ್ಗೆ ಹಲವು ಬಾರಿ ಆಗ್ರಹಿಸಲಾಗಿದೆ. ಆಗ್ರಹವನ್ನು ಜಿಎಸ್‌ಟಿ ಮಂಡಳಿ ಗಂಭೀರವಾಗಿ ಪರಿಗಣಿಸಿದ್ದು, ತೆರಿಗೆ ಭಾರ ಇಳಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಕಳೆದ ಸೋಮವಾರ ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆಯಲ್ಲಿ ವಿಮೆ ಮೇಲಿನ ಜಿಎಸ್‌ಟಿ ಕಡಿತದ ಬಗ್ಗೆ ಚರ್ಚೆ ನಡೆದಿದೆ. ಆದರೆ, ಪ್ರಸ್ತುತ ಇರುವ 18% ಜಿಎಸ್‌ಟಿಯನ್ನು 5%ಗೆ ಇಳಿಸುವುದಾ ಅಥವಾ ಶೂನ್ಯಕ್ಕೆ ಕಡಿತಗೊಳಿಸುವುದಾ ಎಂಬುದರ ಬಗ್ಗೆ ಇನ್ನೂ ಭಿನ್ನಾಭಿಪ್ರಾಯಗಳಿವೆ. ಹಾಗಾಗಿ, ನವೆಂಬರ್‌ನಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ವಿಮೆ ಮೇಲಿನ ಜಿಎಸ್‌ಟಿ ಕಡಿತದ ಬಗ್ಗೆ ಅಂತಿಮ ಶಿಫಾರಸು ಸಲ್ಲಿಸಲು ಬಿಹಾರ ಉಪಮುಖ್ಯಮಂತ್ರಿ ಸಮರ್ಥ್ ಚೌಧರಿ ನೇತೃತ್ವದಲ್ಲಿ ಸಚಿವರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಅಕ್ಟೋಬರ್ ಅಂತ್ಯದ ವೇಳೆಗೆ ವರದಿಯನ್ನು ಸಲ್ಲಿಸಲಿದೆ. ಬಳಿಕ, ನವೆಂಬರ್‌ನಲ್ಲಿ ನಡೆಯಲಿರುವ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆಯಲ್ಲಿ ಈ ಶಿಫಾರಸುಗಳನ್ನು ಆಧರಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
GST ಕಡಿತದಿಂದ ಸರ್ಕಾರಕ್ಕೇನು ತೊಂದರೆ?
ಜಿಎಸ್‌ಟಿ ಕಡಿತಗೊಳಿಸುವ ವಿಷಯದಲ್ಲಿ ಸರ್ಕಾರ ನಕಾರಾತ್ಮಕ ಅಭಿಪ್ರಯ ಹೊಂದಿದೆ. “ವಿಮೆ ಅನ್ನೋದು ಒಂದು ರೀತಿಯ ಸೇವೆ ಆಗಿದೆ. ಹೀಗಾಗಿ, ಎಲ್ಲ ವಿಮಾ ಪಾಲಿಸಿಗಳು ತೆರಿಗೆ ವಿಧಿಸೋಕೆ ಅರ್ಹತೆ ಹೊಂದಿವೆ. ವಿಮಾ ಕಂತುಗಳ ಮೇಲೆ ವಿಧಿಸಲಾಗುವ ತೆರಿಗೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒಳ್ಳೆ ಹಣಕಾಸು ತಂದುಕೊಡುತ್ತವೆ. ಕಳೆದ 3 ವರ್ಷಗಳಲ್ಲಿ ಸಂಗ್ರಹವಾಗಿದ್ದ 24,529 ಕೋಟಿ ರೂ. ಜಿಎಸ್‌ಟಿಯಲ್ಲಿ 12,264 ಕೋಟಿ ರೂ. ಹಣ ನೇರವಾಗಿ ರಾಜ್ಯಗಳಿಗೆ ಸಿಕ್ಕಿದೆ” ಎಂದು ನಿರ್ಮಲಾ ಅವರು ಹೇಳಿಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ನಾಲ್ಕು ರಾಜ್ಯಗಳ ಚುನಾವಣೆ: ಬಂಡಾಯ ಶಮನ ಮಾಡಿ ಗೆಲ್ಲುವುದೇ ಬಿಜೆಪಿ!
ಅಷ್ಟೇ ಅಲ್ಲ, ಆರೋಗ್ಯ ವಿಮೆ ಮಾಡಿಸಿಕೊಂಡವರು ಇನ್‌ಕಮ್ ಟ್ಯಾಕ್ಸ್ ಸಲ್ಲಿಕೆ ವೇಳೆ ತೆರಿಗೆ ರಿಯಾಯಿತಿ ಪಡೆದುಕೊಳ್ಳುತ್ತಾರೆ ಎಂದೂ ಕೇಂದ್ರ ಸರ್ಕಾರ ವಾದಿಸುತ್ತಿದೆ. ಇನ್ನೂ ಕೆಲವು ರಾಜ್ಯ ಸರ್ಕಾರಗಳು ಕೂಡ ಜಿಎಸ್‌ಟಿ ತೆರವಿಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ವಿಮೆ ಮೇಲಿನ ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ ಸರ್ಕಾರಗಳಿಗೂ ಪಾಲು ಸಿಗುತ್ತದೆ.
ಭಾರತದಲ್ಲಿ ಎಷ್ಟು ಕೋಟಿ ಜನರ ವಿಮೆದಾರರಲ್ಲ?
ನೀತಿ ಆಯೋಗದ ವರದಿ ಪ್ರಕಾರ, ಭಾರತದಲ್ಲಿ ಸುಮಾರು 30% ಜನರು, ಅಂದರೆ, 40 ಕೋಟಿ ಮಂದಿ ಜೀವ ಮತ್ತು ಆರೋಗ್ಯದ ಸುರಕ್ಷತೆಗಾಗಿ ಯಾವುದೇ ವಿಮೆಯನ್ನ ಹೊಂದಿಲ್ಲ. ಹೆಚ್ಚಿನ ಜನರಿಗೆ ವೈದ್ಯಕೀಯ ಚಿಕಿತ್ಸೆಯ ಹಣವನ್ನೂ ಕೂಡ ಭರಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಭಾರತದ ಆರ್ಥಿಕ ಸಮೀಕ್ಷೆ ಪ್ರಕಾರ, 2023ರಲ್ಲಿ ಭಾರತದಲ್ಲಿ 3.8% ಇದ್ದ ವಿಮೆಗಳ ಸಂಖ್ಯೆ 2035ರ ಹೊತ್ತಿದೆ 4.3%ಗೆ ಏರಿಕೆಯಾಗಲಿದೆ ಅಂತ ಅಂದಾಜಿಸಲಾಗಿದೆ.