ಪ್ರಬಲ ಜಾತಿಗೆ ಸೇರಿದ ಮಗುವನ್ನು ‘ಬೇಟಾ’ ಎಂದು ಕರೆದಿದ್ದಕ್ಕೆ ದಲಿತ ಯುವಕನ ಮೇಲೆ ಸವರ್ಣೀಯರು ಅಮಾನುಷವಾಗಿ ಹಲ್ಲೆ ನಡೆಸಿದ್ದು, ದಲಿತ ಯುವಕ ಮೃತಪಟ್ಟಿರುವ ಘಟನೆ ಗುಜರಾತ್ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ.
ಅಮ್ರೇಲಿ ಜಿಲ್ಲೆಯ ಜರಾಖಿಯಾ ಗ್ರಾಮದಲ್ಲಿ ಘಟನೆ ನಡೆದಿದೆ. 20 ವರ್ಷದ ದಲಿತ ಯುವಕ ನೀಲೇಶ್ ರಾಥೋಡ್ ಎಂಬವರ ಮೇಲೆ ಸವರ್ಣೀಯರು ಗುರುವಾರ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅವರನ್ನು ಭಾವನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನೀಲೇಶ್ ಸಾವನ್ನಪ್ಪಿದ್ದಾರೆ.
ನೀಲೇಶ್ ಅವರು ಸಿಹಿ ತಿಂಡಿ ಖರೀದಿಸಲು ಪ್ರಬಲ ಜಾತಿಯ ವಿಜಯ್ ಆನಂದ್ ತೋಟಾ ಎಂಬಾತನಿಗೆ ಸೇರಿದ ಅಂಗಡಿಗೆ ಹೋಗಿದ್ದರು. ಈ ವೇಳೆ, ಅಂಗಡಿಯಲ್ಲಿ ಚಿಕ್ಕ ಮಗುವಿತ್ತು. ಆ ಮಗುವನ್ನು ‘ಬೇಟಾ’ (ಮಗುವೇ) ಎಂದು ನೇಲೇಶ್ ಕರೆದಿದ್ದಾರೆ. ಆ ಕಾರಣಕ್ಕಾಗಿಯೇ, ಅವರ ಮೇಲೆ ಅಂಗಡಿ ಮಾಲೀಕ ವಿಜಯ್ ಆನಂದ್ ಮತ್ತು ಇತರರು ಕೋಲುಗಳು, ಕುಡುಗೋಲುಗಳಿಂದ ಹಲ್ಲೆ ನಡಸಿದ್ದು, ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನೀಲೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ, ಅವರ ಚಿಕ್ಕಪ್ಪ ಸುರೇಶ್ ವಾಲಾ ಅವರನ್ನು ಘಟನೆ ಬಗ್ಗೆ ಪ್ರಶ್ನಿಸಲು ಅಂಗಡಿ ಬಳಿಗೆ ಹೋದಾಗ, ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸುರೇಶ್ ವಾಲಾ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಆರೋಪಿಗಳಾದ ಚೋತಾ ಖೋಡಾ ಭರ್ವಾಡ್, ವಿಜಯ್ ಆನಂದ್ ತೋಟಾ, ಭವೇಶ್ ಮುಂಧ್ವಾ ಮತ್ತು ಜತಿನ್ ಮುಂಧ್ವಾ ಸೇರಿದಂತೆ ಹಲವರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ, ಬಿಎನ್‌ಎಸ್ ಸೆಕ್ಷನ್ 118(1) (ತೀವ್ರ ಗಾಯ), 115(2) (ಸ್ವಯಂಪ್ರೇರಣೆಯಿಂದ ಗಾಯ ಉಂಟುಮಾಡುವುದು), 189(2) ಮತ್ತು 189(4) (ಮಾರಕ ಆಯುಧಗಳನ್ನು ಹೊಂದುವುದು ಸೇರಿದಂತೆ ಕಾನೂನುಬಾಹಿರ ಸಭೆ), 190 (ಕಾನೂನುಬಾಹಿರ ಸಭೆಯ ಎಲ್ಲಾ ಸದಸ್ಯರ ಹೊಣೆಗಾರಿಕೆ), 191(2) ಮತ್ತು 191(3) (ಶಸ್ತ್ರಸಜ್ಜಿತವಾಗಿದ್ದಾಗ ಗಲಭೆ), 131 (ದಾಳಿ ಅಥವಾ ಕ್ರಿಮಿನಲ್ ಬಲಪ್ರಯೋಗ), 352 (ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನ), 3(5) (ಕ್ರಿಮಿನಲ್ ಕೃತ್ಯದ ಜಂಟಿ ಹೊಣೆಗಾರಿಕೆ), 109 (ಕೊಲೆಗೆ ಪ್ರಯತ್ನ), ಮತ್ತು ನಂತರ, ಸೆಕ್ಷನ್ 103 (ಕೊಲೆ) ಸೇರಿದಂತೆ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಪ್ರತಿಷ್ಠಿತ ಹಾರ್ವರ್ಡ್ ವಿವಿ ಮೇಲೆ ಟ್ರಂಪ್ ವಕ್ರದೃಷ್ಟಿ: ವಿದ್ಯಾರ್ಥಿಗಳು ಬೀದಿಪಾಲು
ಪ್ರಕರಣದಲ್ಲಿ ಈ ವರೆಗೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಭರ್ವಾದ್, ತೋತಾ, ಭವೇಶ್ ಮುಂಧ್ವಾ, ಜತಿನ್ ಮುಂಧ್ವಾ, ಕಥದ್ ಅರ್ಜನ್ ಮುಂಧ್ವಾ, ದೇವ ಸಂಗ ಮುಂಧ್ವಾ, ದುದಾ ಬೋಘಾ ಮುಂಧ್ವಾ ಮತ್ತು ರವಿ ದುದಾ ಮುಂಧ್ವಾ ಎಂದು ಹೆಸರಿಸಲಾಗಿದೆ. ಇತರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಶುಕ್ರವಾರ ಮೃತ ನೀಲೇಶ್ ರಾಥೋಡ್ ಅವರ ಕುಟುಂಬ ಸದಸ್ಯರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
“ಇಂದಿಗೂ ಗುಜರಾತ್‌ನಲ್ಲಿ ಜಾತಿವಾದವು ಆಳವಾಗಿ ಬೇರೂರಿದೆ ಎಂದು ಇದು ತೋರಿಸುತ್ತದೆ. ದಲಿತರು ಭಯದಲ್ಲಿ ಬದುಕುತ್ತಿದ್ದಾರೆ ಮತ್ತು ತಮ್ಮ ಸ್ವಂತ ನೆಲದಲ್ಲಿ ಅಸುರಕ್ಷಿತರಾಗಿದ್ದಾರೆ” ಎಂದು ಜಿಗ್ನೇಶ್ ಹೇಳಿದ್ದಾರೆ.
ಆಳುವವವ ಮೌನವನ್ನು ಟೀಕಿಸಿರುವ ಜಿಗ್ನೇಶ್, “ಸ್ವತಃ ಗುಜರಾತ್ ಮೂಲದ ಪ್ರಧಾನಿ ಕೂಡ ಸಂತಾಪ ಸೂಚಿಸಿಲ್ಲ. ಏತನ್ಮಧ್ಯೆ, ರಾಜ್ಯದ ಸಾಮಾಜಿಕ ನ್ಯಾಯ ಸಚಿವರು ಮತ್ತು ಮುಖ್ಯಮಂತ್ರಿಗಳು ಒಮ್ಮೆಯೂ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಅವರ ಕಣ್ಣೀರು ಒರೆಸಿಲ್ಲ ಅಥವಾ ಬೆಂಬಲ ನೀಡಿಲ್ಲ” ಎಂದು ಹೇಳಿದರು. ಸರ್ಕಾರದ ವರ್ತನೆಯೂ ಜಾತಿವಾದಿಯಾಗಿ ಕಾಣುತ್ತದೆ. ದಲಿತರನ್ನು ಬಡಿಯಲಾಗುತ್ತದೆ, ತಾರತಮ್ಯ ಮಾಡಲಾಗುತ್ತದೆ, ಸಾಮಾನ್ಯ ಬಾವಿಗಳಿಂದ ನೀರು ತರುವುದನ್ನು ನಿರಾಕರಿಸಲಾಗುತ್ತದೆ, ದೇವಾಲಯಗಳಿಗೆ ಪ್ರವೇಶಿಸುವುದನ್ನು ತಡೆಯಲಾಗುತ್ತದೆ, ಅತ್ಯಾಚಾರ ಮಾಡಲಾಗುತ್ತದೆ ಮತ್ತು ‘ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ನೇಮಿಸಿ ಸಾಯಿಸಲಾಗುತ್ತಿದೆ ಮತ್ತು ಈಗ, ಒಬ್ಬ ದಲಿತರನ್ನು ಕ್ರೂರವಾಗಿ ಥಳಿಸಲಾಗಿದೆ, ಅದು ಒಬ್ಬ ದಲಿತ ವ್ಯಕ್ತಿಯ ಸಾವಿಗೆ ಕಾರಣವಾಗಿದೆ. ಆದರೆ ಸರ್ಕಾರ ಮೌನವಾಗಿದೆ. ಇದು ಅತ್ಯಂತ ದುರದೃಷ್ಟಕರ” ಎಂದು ಅವರು ಹೇಳಿದ್ದಾರೆ.