ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಶಾಲಾ ಪ್ರವಾಸಗಳಲ್ಲಿ ಇಬ್ಬರು ಸಮವಸ್ತ್ರ ಧರಿಸಿದ ಪೊಲೀಸರು ಇರಲೇಬೇಕು ಎಂಬುದನ್ನು ಗುಜರಾತ್ ಪೊಲೀಸರು ಕಡ್ಡಾಯಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಪ್ರವಾಸಗಳಲ್ಲಿ ವಿದ್ಯಾರ್ಥಿನಿಯರು ಇದ್ದರೆ, ಪುರುಷ ಪೊಲೀಸರೊಂದಿಗೆ ಮಹಿಳಾ ಅಧಿಕಾರಿಗಳನ್ನೂ ಕೂಡಾ ಕಡ್ಡಾಯವಾಗಿ ಕರೆದೊಯ್ಯಬೇಕು ಎಂದು ಆದೇಶಿಸಲಾಗಿದೆ.
ಪೊಲೀಸರ ಈ ಕ್ರಮವು ಶೈಕ್ಷಣಿಕ ಪ್ರವಾಸಗಳ ಸಮಯದಲ್ಲಿ ವಿದ್ಯಾರ್ಥಿಗಳನ್ನು ರಕ್ಷಿಸುವ ಹಾಗೂ ಯುವಕರು ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವಿನ ಸಂಬಂಧವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ.
ಇತ್ತೀಚೆಗೆ ನಡೆದ ಡಿಜಿಪಿ-ಐಜಿಪಿ ಸಮ್ಮೇಳನ-2024 ರಲ್ಲಿ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ನಿರ್ದೇಶನಗಳನ್ನು ಅನುಸರಿಸಿ, ಗುಜರಾತ್‌ನ ರಾಜ್ಯ ಪೊಲೀಸ್ ಮುಖ್ಯಸ್ಥ ವಿಕಾಸ್ ಸಹಾಯ್ ಅವರು ನೂತನ ಕಠಿಣ ಸುರಕ್ಷತಾ ಪ್ರೋಟೋಕಾಲ್ ಅನ್ನು ಘೋಷಿಸಿದ್ದಾರೆ.
ತಕ್ಷಣದಿಂದ ಜಾರಿಗೆ ಬರುವಂತೆ, ಎಲ್ಲಾ ಶಾಲೆಗಳು ಆಯೋಜಿಸುವ ಟ್ರಿಪ್, ಟೂರ್‌ಗಳು, ಪಿಕ್ನಿಕ್‌ಗಳು ಮತ್ತು ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನಡುವಿನ ಭೇಟಿಗಳಲ್ಲಿ ಇಬ್ಬರು ಸಮವಸ್ತ್ರ ಧರಿಸಿದ ಪೊಲೀಸರ ಉಪಸ್ಥಿತಿಯನ್ನು ಒಳಗೊಂಡಿರಬೇಕು ಎಂದು ಪ್ರೊಟೊಕಾಲ್ ಹೇಳಿದೆ.
ಪ್ರವಾಸಗಳಲ್ಲಿ ವಿದ್ಯಾರ್ಥಿನಿಯರು ಇದ್ದರೆ ಈ ನಿಯಮವು ತೀವ್ರಗೊಳ್ಳುತ್ತದೆ ಮತ್ತು ಅವರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಮಹಿಳಾ ಪೊಲೀಸ್ ಅಧಿಕಾರಿಗಳ ಜೊತೆಗಿರಬೇಕು ಎಂದು ಡಿಜಿಪಿ ಕಚೇರಿಯ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಈ ಅವಶ್ಯಕತೆಯನ್ನು ಪೂರೈಸಲು ಶಾಲಾ ಪ್ರಾಂಶುಪಾಲರು ಈಗ ಸ್ಥಳೀಯ ಪೊಲೀಸ್ ಠಾಣೆಗಳೊಂದಿಗೆ ನೇರವಾಗಿ ಸಮನ್ವಯ ಸಾಧಿಸುವ ಕಾರ್ಯವನ್ನು ಹೊಂದಲಿದ್ದಾರೆ.
ಈ ಆದೇಶವನ್ನು ಜಾರಿಗೊಳಿಸಲು, ರಾಜ್ಯಾದ್ಯಂತ ತ್ವರಿತ ಅನುಷ್ಠಾನಕ್ಕಾಗಿ ಸ್ಪಷ್ಟ ನಿರ್ದೇಶನಗಳನ್ನು ಹೊರಡಿಸುವಂತೆ ಡಿಜಿಪಿ ವಿಕಾಸ್ ಸಹಾಯ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಈ ಲೇಖನ ಓದಿದ್ದೀರಾ?: ಕರಾವಳಿಯಲ್ಲಿ ಮಿತಿಮೀರಿದ ಕೋಮುವಾದ; ದೇವರೂ, ಭೂತಗಳೂ ತುಳುನಾಡನ್ನು ತೊರೆದು ಕಡಲಿಗಿಳಿದು ಹೋಗಿವೆಯೇನೋ…
ಶೈಕ್ಷಣಿಕ ಪ್ರವಾಸಗಳ ಸಮಯದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತರಿಪಡಿಸುವುದು ಮಾತ್ರವಲ್ಲದೆ, ವಿದ್ಯಾರ್ಥಿಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವೆ ವಿಶ್ವಾಸವನ್ನು ಬಲಪಡಿಸುವುದು ಮತ್ತು ಸಹಕಾರಿ ಸಂಬಂಧವನ್ನು ಬೆಳೆಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು, ಜನವರಿ 18, 2024 ರಂದು ವಡೋದರಾದಲ್ಲಿ ನಡೆದ ದುರಂತ ಹಾರ್ನಿ ದೋಣಿ ಅಪಘಾತದ ನಂತರ, 12 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸೇರಿದಂತೆ 14 ಜೀವಗಳು ಬಲಿಯಾದ ನಂತರ, ಗುಜರಾತ್ ಸರ್ಕಾರವು 2024–25 ರ ಶೈಕ್ಷಣಿಕ ಅವಧಿಗೆ ಶಾಲಾ ಪ್ರವಾಸ ನಿಯಮಗಳನ್ನು ಬಿಗಿಗೊಳಿಸಲು ತ್ವರಿತವಾಗಿ ಕ್ರಮ ಕೈಗೊಂಡಿತು.
ಈ ವೇಳೆ ಸರ್ಕಾರವು ಹೊಸ ಕಡ್ಡಾಯ ಮಾರ್ಗಸೂಚಿಗಳನ್ನು ಘೋಷಿಸಿದ್ದು, ರಾಜ್ಯದ ಎಲ್ಲಾ ಶಾಲೆಗಳು ಯಾವುದೇ ಪ್ರವಾಸಗಳನ್ನು ಆಯೋಜಿಸುವ ಮೊದಲು ಪೂರ್ವಾನುಮತಿ ಪಡೆಯಬೇಕು ಎಂದು ಹೇಳಿತ್ತು. ಇದರಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ (RTO) ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ಪ್ರತಿ ಪ್ರವಾಸದ ಬಗ್ಗೆ ತಿಳಿಸುವ ಕಟ್ಟುನಿಟ್ಟಿನ ನಿಯಮವೂ ಸೇರಿದೆ.