ಶೌಚಾಲಯದಲ್ಲೇ ಕುಳಿತು ವರ್ಚುವಲ್ ಕಲಾಪದಲ್ಲಿ ಭಾಗವಹಿಸಿ ನ್ಯಾಯಾಂಗ ನಿಂದನೆ ಎದುರಿಸುತ್ತಿರುವ ಯುವಕನಿಗೆ ಗುಜರಾತ್ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಯುವಕ ತಾನು ಬೇಷರತ್ ಕ್ಷಮೆಯಾಚಿಸುವುದಾಗಿ ಹೇಳಿದ್ದಾನೆ.
ಜೂನ್ 20ರಂದು ನ್ಯಾಯಮೂರ್ತಿ ನಿರ್ಜರ್ ಎಸ್ ದೇಸಾಯಿ ಪ್ರಕರಣವೊಂದನ್ನು ವಿಚಾರಣೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದ್ದು ವಿಡಿಯೋ ಭಾರೀ ವೈರಲ್ ಆಗಿತ್ತು. ಈ ಬೆನ್ನಲ್ಲೇ ಹೈಕೋರ್ಟ್ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಕೈಗೆತ್ತಿಕೊಂಡಿತು.
ಇದನ್ನು ಓದಿದ್ದೀರಾ? ಶೌಚಾಲಯದಲ್ಲೇ ಕುಳಿತು ಹೈಕೋರ್ಟ್ ಕಲಾಪದಲ್ಲಿ ಭಾಗವಹಿಸಿದ ಯುವಕ: ವಿಡಿಯೋ ವೈರಲ್
ಸೋಮವಾರ, ನ್ಯಾಯಮೂರ್ತಿಗಳಾದ ಎ.ಎಸ್. ಸುಪೆಹಿಯಾ ಮತ್ತು ಆರ್.ಟಿ. ವಚ್ಛಾನಿ ಅವರ ವಿಭಾಗೀಯ ಪೀಠವು ಸಮದ್ ಅಬ್ದುಲ್ ರೆಹಮಾನ್ ಶಾ ಎಂಬ ಯುವಕನಿಗೆ ಜುಲೈ 22ರೊಳಗೆ ನ್ಯಾಯಾಲಯದ ನೋಂದಣಾಧಿಕಾರಿಗೆ 1 ಲಕ್ಷ ರೂ. ಠೇವಣಿ ಇಡುವಂತೆ ನಿರ್ದೇಶಿಸಿದೆ.
“ವರ್ಚುವಲ್ ಪ್ರಕ್ರಿಯೆಯ ಸಮಯದಲ್ಲಿ ತಮ್ಮ ನಡವಳಿಕೆಯನ್ನು ಆರೋಪಿತರು ಒಪ್ಪಿಕೊಂಡಿದ್ದಾರೆ ಮತ್ತು ಬೇಷರತ್ ಕ್ಷಮೆಯಾಚಿಸಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ, ಈ ಹಂತದಲ್ಲಿ, ಮುಂದಿನ ವಿಚಾರಣೆಯ ದಿನಾಂಕದೊಳಗೆ ನೋಂದಣಾಧಿಕಾರಿಯ ಮುಂದೆ 1 ಲಕ್ಷ ರೂ. ಠೇವಣಿ ಇಡುವಂತೆ ನಾವು ನಿರ್ದೇಶಿಸುತ್ತೇವೆ” ಎಂದು ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯ ಪ್ರಕಾರ, ಜೂನ್ 20ರಂದು ನಡೆದ ವಿಚಾರಣೆಯಲ್ಲಿ ಶಾ ಒಟ್ಟು 74 ನಿಮಿಷಗಳ ಕಾಲ ಹಾಜರಿದ್ದರು. ಈ ವೇಳೆ ಶೌಚಾಲಯಕ್ಕೂ ಹೋಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು, ಯುವಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಕೋರ್ಟ್ ಈ ವಿಡಿಯೋವನ್ನು ತಕ್ಷಣ ನಿಷೇಧಿಸುವಂತೆ ಆದೇಶಿಸಿದೆ.
